ಹೆಗಲ ಮೇಲೆ ಬಿಸಿಯೂಟದ ದಿನಸಿ ಹೊತ್ತು ನದಿ ದಾಟಿ, ಬೆಟ್ಟ ಹತ್ತುವ ಛತ್ತೀಸ್‌ಗಡ ಶಿಕ್ಷಕರು..!

ಚತ್ತೀಸ್‌ಗಢ ರಾಜ್ಯದ ಬಲರಾಮ್ ಪುರ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ತಮ್ಮ ಮನೆಗಳಿಂದ ಗ್ರಾಮದ ಶಾಲೆ ತಲುಪೋದೇ ದುಸ್ತರ. ಈ ನಡುವೆ, ಮಕ್ಕಳ ಬಿಸಿಯೂಟಕ್ಕಾಗಿ ದಿನಸಿ ವಸ್ತುಗಳನ್ನೂ ಕೊಂಡೊಯ್ಯುತ್ತಿದ್ದಾರೆ..!

ಹೆಗಲ ಮೇಲೆ ಬಿಸಿಯೂಟದ ದಿನಸಿ ಹೊತ್ತು ನದಿ ದಾಟಿ, ಬೆಟ್ಟ ಹತ್ತುವ ಛತ್ತೀಸ್‌ಗಡ ಶಿಕ್ಷಕರು..!
Linkup
ಛತ್ತೀಸ್‌ಗಡ: ದೇಶಾದ್ಯಂತ ಶಾಲೆಗಳು ಶುರುವಾಗಿವೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನೀಡುವ ಯೋಜನೆಯೂ ಪುನಾರಂಭವಾಗಿದೆ. ಆದ್ರೆ, ಎಷ್ಟೋ ಕಡೆ ಸರ್ಕಾರ ಇನ್ನೂ ವಸ್ತುಗಳನ್ನೇ ಪೂರೈಸಿಲ್ಲ. ಇಷ್ಟಾದರೂ ತಮ್ಮ ಸ್ವಂತ ಹಣದಿಂದ, ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಹಣ ಹಾಗೂ ದಿನಸಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ. ಮಕ್ಕಳು ಹಸಿದುಕೊಂಡು ಪಾಠ ಕೇಳಬಾರದು ಎಂಬ ಶಿಕ್ಷಕರ ಕಳಕಳಿ ಅದು. ಈ ನಡುವೆ, ಛತ್ತೀಸ್‌ಗಡದ ಶಿಕ್ಷಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರ ಸಾಹಸ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಚತ್ತೀಸ್‌ಗಢ ರಾಜ್ಯದ ಬಲರಾಮ್ ಪುರ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ತಮ್ಮ ಮನೆಗಳಿಂದ ಗ್ರಾಮದ ಶಾಲೆ ತಲುಪೋದೇ ದುಸ್ತರ. ಈ ನಡುವೆ, ಮಕ್ಕಳ ಬಿಸಿಯೂಟಕ್ಕಾಗಿ ದಿನಸಿ ವಸ್ತುಗಳನ್ನೂ ಕೊಂಡೊಯ್ಯುತ್ತಿದ್ದಾರೆ..! ಬಲರಾಮ್ ಪುರದಿಂದ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಗೆ ತಮ್ಮ ಹೆಗಲ ಮೇಲೆ ದಿನಸಿ ವಸ್ತುಗಳನ್ನು ಹೊತ್ತು ಸಾಗಾಟ ಮಾಡುತ್ತಿದ್ದಾರೆ ಶಿಕ್ಷಕರು..! ಈ ಶಿಕ್ಷಕರು ಹತ್ತಾರು ಕೆಜಿ ತೂಕದ ದಿನಸಿ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನದಿ, ತೊರೆ, ಹಳ್ಳ - ಕೊಳ್ಳ, ಬೆಟ್ಟ ಗುಡ್ಡಗಳ ಕಡಿದಾದ ಹಾಗೂ ದುರ್ಗಮ ಹಾದಿಯಲ್ಲಿ ಸಾಗಿ ಕುಗ್ರಾಮ ತಲುಪುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ ಬಸ್‌ನಲ್ಲಿ ಹೊರಟು ನಂತರ 8 ಕಿ. ಮೀ. ದೂರ ಕಾಡಿನ ಹಾದಿಯಲ್ಲಿ ಸಾಗುವ ಶಿಕ್ಷಕರು, ತಾವೇ ನಡೆದು ಹಳ್ಳಿ ಸೇರೋದು ಕಷ್ಟ. ಅಂತಾದ್ರಲ್ಲಿ ಜೊತೆಗೆ ದಿನಸಿ ವಸ್ತುಗಳನ್ನೂ ಹೊತ್ತೊಯ್ಯುತ್ತಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಶಿಕ್ಷಕರು, ಶಾಲೆಗೆ ಬರುವ ವಿದ್ಯಾರ್ಥಿಗಳು ಮಧ್ಯಾಹ್ನ ಹಸಿವಿನಿಂದ ಕಂಗೆಡಬಾರದು, ಊಟಕ್ಕೆ ಮನೆಗೆ ಹೋಗಿ ಬರೋದು ಕಷ್ಟ. ಇದಕ್ಕೆ ಬಹಳ ಸಮಯ ವ್ಯಯ ಆಗುತ್ತದೆ. ಹೀಗಾಗಿ, ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿಯೂಟ ತಪ್ಪಿಸಬಾರದೆಂದು ನಾವೇ ದಿನಸಿ ಪದಾರ್ಥಗಳನ್ನು ಹೊತ್ತು ಸಾಗುತ್ತಿದ್ದೇವೆ ಎನ್ನುತ್ತಾರೆ. ಅಷ್ಟೇ ಅಲ್ಲ, ಈ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಶಿಕ್ಷಕರಾದ ಸುಶೀಲ್ ಯಾದವ್ ಹಾಗೂ ಪಂಕಜ್ ಅವರ ಈ ಸಾಹಸ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದೇ ತಡ, ಛತ್ತೀಸ್‌ಗಡ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರ ಪರಿಸ್ಥಿತಿ, ಕುಗ್ರಾಮಗಳ ಪರಿಸ್ಥಿತಿ ಸುಧಾರಣೆಗಾಗಿ ಜನರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಛತ್ತೀಸ್‌ಗಡ ರಾಜ್ಯದ ಬಲರಾಮ್ ಪುರ ಜಿಲ್ಲಾ ಶಿಕ್ಷಣಾಧಿಕಾರಿ ಬಿ ಎಕ್ಕಾ ಅವರು, ಶಿಕ್ಷಕರ ಸೇವೆ ಹಾಗೂ ಶ್ರಮವನ್ನು ಶ್ಲಾಘಿಸಿದ್ದಾರೆ. ಸರ್ಕಾರಿ ಪಡಿತರ ವಿತರಣಾ ಕೇಂದ್ರದಿಂದ ಗುಡ್ಡದ ಮೇಲಿರುವ ಗ್ರಾಮದ ಶಾಲೆಗೆ ಸರಿಸುಮಾರು 8 ಕಿ. ಮೀ. ಕಾಲ್ನಡಿಗೆಯಲ್ಲಿ ಸಾಗುವ ಶಿಕ್ಷಕರ ಕಾರ್ಯವನ್ನು ಅವರು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಬೇಗ ಗುಡ್ಡದ ಮೇಲಿರುವ ಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು ಹಾಗೂ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರವನ್ನು ಕೋರುವುದಾಗಿ ತಿಳಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಳಿ ತಪ್ಪಬಾರದು ಎಂದು ಕರ್ನಾಟಕದಲ್ಲಿಯೂ ಹಲವೆಡೆ ಶಿಕ್ಷಕರು ವಿದ್ಯಾರ್ಥಿಗಳಿರುವ ಗ್ರಾಮಕ್ಕೇ ತೆರಳಿ ಬಯಲಿನಲ್ಲಿ ಪಾಠ ಮಾಡುತ್ತಿದ್ದರು. ಈ ವಿಶಿಷ್ಟ ಹಾಗೂ ನಿಸ್ವಾರ್ಥ ಸೇವೆ ಇನ್ನೂ ಹಸಿರಾಗಿರುವಾಗಲೇ ಛತ್ತೀಸ್‌ಗಡ ರಾಜ್ಯದ ಶಿಕ್ಷಕರ ಸಾಹಸ ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.