ಲಸಿಕೆ ಬಗ್ಗೆ ತಪ್ಪು ತಿಳುವಳಿಕೆ ಹೋಗಲಾಡಿಸಿ; ಪಕ್ಷದ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಕರೆ
ಲಸಿಕೆ ಬಗ್ಗೆ ತಪ್ಪು ತಿಳುವಳಿಕೆ ಹೋಗಲಾಡಿಸಿ; ಪಕ್ಷದ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಕರೆ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆ ನಡೆಸಿದ ಸೋನಿಯಾ, ಲಸಿಕೆ ಬಗ್ಗೆ ಕೆಲವರಿಗೆ ಅನಗತ್ಯ ಆತಂಕ ಇದೆ. ತಪ್ಪು ತಿಳಿವಳಿಕೆಯಿಂದ ಅವರಲ್ಲಿ ಹಿಂಜರಿಕೆ ಸೃಷ್ಟಿಯಾಗಿದೆ. ಅಂಥವರನ್ನು ಗುರುತಿಸಿ, ವಿಶ್ವಾಸ ಮೂಡಿಸುವ ಕೆಲಸ ಪಕ್ಷದ ಕಾರ್ಯಕರ್ತರಿಂದ ಆಗಬೇಕು ಎಂದು ಸಲಹೆ ಮಾಡಿದರು.
ಹೊಸದಿಲ್ಲಿ: ಕೋವಿಡ್ ನಿರ್ಮೂಲನೆಗೆ ನೆರವಾಗುವ ಲಸಿಕೆ ಸರ್ವರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವ ದಿಸೆಯಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯ ಪಾತ್ರ ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಗುರುವಾರ ಕರೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆ ನಡೆಸಿದ ಸೋನಿಯಾ, ಲಸಿಕೆ ಬಗ್ಗೆ ಕೆಲವರಿಗೆ ಅನಗತ್ಯ ಆತಂಕ ಇದೆ. ತಪ್ಪು ತಿಳಿವಳಿಕೆಯಿಂದ ಅವರಲ್ಲಿ ಹಿಂಜರಿಕೆ ಸೃಷ್ಟಿಯಾಗಿದೆ. ಅಂಥವರನ್ನು ಗುರುತಿಸಿ, ವಿಶ್ವಾಸ ಮೂಡಿಸುವ ಕೆಲಸ ಪಕ್ಷದ ಕಾರ್ಯಕರ್ತರಿಂದ ಆಗಬೇಕು ಎಂದು ಸಲಹೆ ಮಾಡಿದರು. ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸಿದೆ. ಚೇತರಿಸಿಕೊಳ್ಳುವ ಮೊದಲೇ ಮೂರನೇ ಅಲೆಯ ಆತಂಕ ಶುರುವಾಗಿದೆ. ಇದನ್ನು ಎದುರಿಸಲು ಸರಕಾರ ಈಗಿನಿಂದಲೇ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ವಿಶೇಷವಾಗಿ ಮಕ್ಕಳ ರಕ್ಷಣೆಗೆ ಆದ್ಯತೆಯ ಮೇಲೆ ಕೆಲಸ ನಡೆಯಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.
ಸದ್ಯದ ಆತಂಕ ದಾಟಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರ. ಪ್ರತಿನಿತ್ಯ ಕನಿಷ್ಠ 75 ಲಕ್ಷ ಜನರಿಗೆ ಲಸಿಕೆ ನೀಡಬೇಕು. ಅಂದಾಗ ಮಾತ್ರವೇ ಈ ವರ್ಷಾಂತ್ಯದ ವೇಳೆಗೆ ಇಡೀ ದೇಶ ಪೂರ್ತಿ ಲಸಿಕೆ ಕಾಣಲು ಸಾಧ್ಯ. ಜನರ ಜೀವ ರಕ್ಷಣೆಗೆ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಸೋನಿಯಾ ಗಾಂಧಿ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.