ಯೋಗಿ ಆದಿತ್ಯನಾಥ್‌ '2.0' ಕ್ಯಾಬಿನೆಟ್‌ ಮೇಲೆ ಎಲ್ಲರ ಚಿತ್ತ! ಹೈಕಮಾಂಡ್‌ಗಿಂತ ಯೋಗಿ ನಿರ್ಧಾರವೇ ಫೈನಲ್‌

ಉತ್ತರ ಪ್ರದೇಶದಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಸಿಎಂ ಆಗಲಿರುವ ಯೋಗಿ ಆದಿತ್ಯನಾಥ್‌ ಈಗ ಮತ್ತಷ್ಟು ಪವರ್‌ಪುಲ್‌ ಆಗಿದ್ದಾರೆ. ಎರಡನೇ ಅವಧಿಯ ಸರಕಾರದಲ್ಲಿಆದಿತ್ಯನಾಥ್‌ ಆಯ್ಕೆಗೆ ಆದ್ಯತೆ ನೀಡಲಾಗಿದ್ದು, ಯೋಗಿ 2.0 ಕ್ಯಾಬಿನೆಟ್‌ನಲ್ಲಿ ಹಲವು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.

ಯೋಗಿ ಆದಿತ್ಯನಾಥ್‌ '2.0' ಕ್ಯಾಬಿನೆಟ್‌ ಮೇಲೆ ಎಲ್ಲರ ಚಿತ್ತ! ಹೈಕಮಾಂಡ್‌ಗಿಂತ ಯೋಗಿ ನಿರ್ಧಾರವೇ ಫೈನಲ್‌
Linkup
ಲಖನೌ: ಪ್ರಚಂಡ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರುತ್ತಿರುವ ಅವರ ಸಚಿವ ಸಂಪುಟ 'ಟೀಮ್‌ 2.0' ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಸೇರಿ 9 ಸಚಿವರು ಚುನಾವಣೆಯಲ್ಲಿ ಸೋತಿರುವ ಕಾರಣ ನೂತನ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆಹಾಕಲು ಸಿಎಂ ಯೋಗಿ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ. ಅಲ್ಲದೇ 'ಬ್ರಾಂಡ್‌ ಯೋಗಿ'ಗೆ ರಾಜ್ಯದ ಜನರು ಜೈಕಾರ ಹಾಕಿರುವ ಹಿನ್ನೆಲೆಯಲ್ಲಿ ಯೋಗಿ ಅವರ ಅಭ್ಯರ್ಥಿ ಆಯ್ಕೆಯೇ ನಿರ್ಣಾಯಕ ಎನಿಸಲಿದೆ. ಹೈಕಮಾಂಡ್‌ ಕೇವಲ ಅಂತಿಮ ಮುದ್ರೆ ಒತ್ತುವ ಮೂಲಕ ಸಂಪುಟ ರಚನೆಗೆ ಸಹಮತ ಸೂಚಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಅತ್ಯಂತ ಪ್ರಭಾವಿ ನಾಯಕ ಮತ್ತು ಹಿಂದುತ್ವದ ಫೈರ್‌ ಬ್ರಾಂಡ್‌ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಅವರು ಹಿರಿಮೆ ಗಳಿಸಿಕೊಂಡಿದ್ದಾರೆ. ಅದೇ ಪ್ರಭಾವವನ್ನು ತಮ್ಮ ಹೊಸ ಸಚಿವ ಸಂಪುಟ ರಚನೆಯಲ್ಲಿ ಬಳಸಿಕೊಂಡು, ಯುವಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಂಪುಟ ರಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್‌ ಸಿಂಗ್‌, ಮಾಜಿ ಪೊಲೀಸ್‌ ಆಯುಕ್ತ ಹಾಗೂ ದಲಿತ ನಾಯಕ ಎನಿಸಿರುವ ಆಸಿಮ್‌ ಅರುಣ್‌, ಮಾಜಿ ಐಎಎಸ್‌ ಅಧಿಕಾರಿ ಆರ್‌.ಕೆ. ಶರ್ಮಾ, ಆಗ್ರಾದ ಮೊದಲ ಮಹಿಳಾ ಮೇಯರ್‌ ಖ್ಯಾತಿಯ ಬೇಬಿ ರಾಣಿ ಮೌರ್ಯ ಅವರಂತಹ ಹೊಸ ಮುಖಗಳಿಗೆ ಸಂಪುಟದಲ್ಲಿ ಪಕ್ಕಾ ಸ್ಥಾನ ಎನ್ನಲಾಗುತ್ತಿದೆ. ಇದರ ಜತೆಗೆ ಕಾನೂನು ಸಚಿವರಾಗಿದ್ದ ಬ್ರಜೇಶ್‌ ಪಾಠಕ್‌ ಅವರಿಗೆ ಸಿಎಂ ಯೋಗಿ ಅವರು ಮಹತ್ವದ ಖಾತೆ ನೀಡುವ ಮೂಲಕ ಬಲಗೈ ಬಂಟನಾಗಿ ಇರಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಚರ್ಚೆ ನಡೆದಿದೆ. ಇವೆಲ್ಲದರ ಜತೆಗೆ ಮೈತ್ರಿ ಪಕ್ಷಗಳಾದ ಅಪ್ನಾ ದಳ ಮತ್ತು ನಿಶಾದ್‌ ಪಕ್ಷದಿಂದ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ದಲಿತರು, ಒಬಿಸಿ ಸಮುದಾಯ, ಅಲ್ಪಸಂಖ್ಯಾತರನ್ನು ಒಳಗೊಂಡು ಜಾತಿ ಸಾಮರಸ್ಯ ಹಾಗೂ ಸಮತೋಲಿತ ಸಂಪುಟವನ್ನು ಸಿಎಂ ಯೋಗಿ ಅಂತಿಮಗೊಳಿಸಿ ದಿಲ್ಲಿ ನಾಯಕರಿಗೆ ತಲುಪಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮುಲಾಯಂ ಮೊಮ್ಮಗಳಿಂದ ಯೋಗಿಗೆ ತಿಲಕ! ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರುವ ಹೊಸ್ತಿಲಲ್ಲಿಇರುವ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಅವರ ನಿವಾಸದಲ್ಲೇ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರ ಮೊಮ್ಮಗಳು ಆರತಿ ಬೆಳಗಿ ವಿಜಯ ತಿಲಕ ಇರಿಸಿದ್ದಾರೆ. ಚುನಾವಣೆಗೂ ಮುನ್ನ ಮುಲಾಯಂ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಫಲಿತಾಂಶ ಹೊರಬಿದ್ದ ಬಳಿಕ ಯೋಗಿ ಅವರ ನಿವಾಸಕ್ಕೆ ಅಪರ್ಣಾ ಅವರು ಮಗಳ ಸಮೇತ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ. ಹೋಳಿ ಹುಣ್ಣಿಮೆ ಒಳಗೆ ಪ್ರಮಾಣ ಸ್ವೀಕಾರ? ಉತ್ತರ ಪ್ರದೇಶದಲ್ಲಿ35 ಕ್ಷೇತ್ರಗಳಿಗೆ ಎಂಎಲ್‌ಸಿ ಆಯ್ಕೆ ಪ್ರಕ್ರಿಯೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ. ಅದರಂತೆ ಮಾ.15 ರಿಂದ ಮಾ.19ರೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಿದೆ. ಏ.9ರಂದು ಮತದಾನ ನಡೆಯಲಿದ್ದು, ಏ.12ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಅವರು ಮಾರ್ಚ್ 19ಕ್ಕೂ ಮುನ್ನ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ 18ರಂದು ಹೋಳಿ ಹುಣ್ಣಿಮೆ ಇರುವ ಹಿನ್ನೆಲೆಯಲ್ಲಿ, ಇದೇ ಶುಭ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್‌ ಅವರು 2ನೇ ಅವಧಿಗೆ ಸಿಎಂ ಗದ್ದುಗೆ ಏರುವ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.