ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಂದರು ಲಕ್ಷ ಲಕ್ಷ ಜನ

ಭಾನುವಾರ-ಸೋಮವಾರ ಒಂದು ಲೀಟರ್‌ ಕಡಲೆಕಾಯಿ 30-50 ರೂ. (ಹಸಿ, ಹುರಿದಕಾಯಿ) ವರೆಗೆ ಮಾರಾಟವಾಗುತ್ತಿದ್ದುದು, ಮಂಗಳವಾರ 20-25 ರೂ.ನಂತೆ ಮಾರಾಟವಾಗುತ್ತಿತ್ತು.

ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಂದರು ಲಕ್ಷ ಲಕ್ಷ ಜನ
Linkup
ಬೆಂಗಳೂರು: ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಮಂಗಳವಾರವೂ ಜನಜಾತ್ರೆಯೇ ನೆರೆದಿತ್ತು. ಕಳೆದ ಮೂರು ದಿನಗಳಿಂದ ಪ್ರತಿದಿನವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಪರಿಷೆಯನ್ನು ಕಣ್ತುಂಬಿಕೊಳ್ಳುತ್ತಿದ್ದು, ಉದ್ಘಾಟನೆಯಾದ ಮರುದಿನವೂ ಜನ ತಂಡೋಪತಂಡವಾಗಿ ಆಗಮಿಸಿದರು. ಎಂದಿನಂತೆ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಪರಿಷೆಯಲ್ಲಿ ಹಸಿ ಹುಣಸೆಕಾಯಿಯಿಂದ ಹಿಡಿದು, ಕಬ್ಬು, ಎಳನೀರು, ಗೆಣಸಿನವರೆಗೆ ಎಲ್ಲವೂ ಇತ್ತು. ಭತ್ತದ ತೆನೆಯಲ್ಲಿ ತಯಾರಿಸಿದ ತೋರಣಗಳು, ಕಿವಿಯೋಲೆ, ಬಳೆ, ಕ್ಲಿಪ್‌ಗಳು, ಸ್ವೆಟರ್‌, ಇಯರ್‌ ಫೋನ್‌, ಬಟ್ಟೆಗಳು, ಗಾಜಿನ ಬಾಟಲಿನಲ್ಲಿ ಕಂಗೊಳಿಸುವ ಲೈಟ್‌ಗಳು, ಚಳಿಗಾಲದ ಹಿನ್ನೆಲೆಯಲ್ಲಿ ಸ್ವೆಟರ್‌, ಟೋಪಿಗಳು ನೋಡುಗರ ಗಮನಸೆಳೆಯುತ್ತಿದ್ದವು. ಮಂಗಳವಾರ ಬಹುತೇಕ ವ್ಯಾಪಾರಿಗಳು ಫೋನ್‌ಪೇ ವ್ಯವಸ್ಥೆ ಮಾಡಿಕೊಂಡಿದ್ದರು. ಹೀಗಾಗಿ, ಖರೀದಿಸಿದ ಗ್ರಾಹಕರು ಹಣ ಕೊಡುವುದಕ್ಕಿಂತ ಆನ್‌ಲೈನ್‌ನಲ್ಲೇ ಹಣ ರವಾನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದೆಡೆ ಬೇಯಿಸಿದ ಹಸಿ ಕಡಲೆಬೀಜದ ಮಸಾಲೆ, ಕಾರ್ನ್‌, ಚುರುಮುರಿ ಮೆಲ್ಲುತ್ತಾ ಜನ ಸಾಗುತ್ತಿದ್ದರೆ, ಇನ್ನೂ ಕೆಲವರು ಮೋಡದ ವಾತಾವರಣ, ಚುಮುಚುಮು ಚಳಿಗೆ ಉಪ್ಪು-ಖಾರ ಬೆರೆಸಿದ ಮಾವಿನ ಕಾಯಿಯ ಹೋಳುಗಳನ್ನು ಚಪ್ಪರಿಸಿಕೊಂಡು ಮೆಲ್ಲುತ್ತಿದ್ದರು. ಇನ್ನೂ ಕೆಲವರು ಬೋಂಡಾ, ಬಜ್ಜಿ, ಬಿಸಿ ಬಿಸಿ ಆಲೂಗಡ್ಡೆ ಚಿಪ್ಸ್‌ ತಿಂಡಿಗಳತ್ತ ಮುಖಮಾಡುತ್ತಿದ್ದರು. ಒಟ್ಟಾರೆ ಪರಿಷೆಯಲ್ಲಿತಿನ್ನುವ, ಖರೀದಿಸುವ ಸಂಭ್ರಮ ಜೋರಾಗಿಯೇ ನಡೆದಿತ್ತು. ಕೋವಿಡ್‌ ಲಸಿಕೆ ಬಗ್ಗೆ ಅರಿವು ಮತ್ತು ಲಸಿಕೆ ಹಾಕಿಸುವುದು, ಅಂಧರ ಶಾಲೆಗಳಿಂದ ದೇಣಿಗೆ ಸಂಗ್ರಹಕ್ಕಾಗಿ ಪರಿಷೆಯ ಅಲ್ಲಲ್ಲಿಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೋಂಡಾ ಕಾಯಿಗೆ ಹೆಚ್ಚಿದ ಬೇಡಿಕೆ ಪರಿಷೆಯಲ್ಲಿ ಮಂಗಳವಾರ ಸೇಲಂನಿಂದ ದಪ್ಪನೆಯ ಗುಂಡು ಗುಂಡಾದ ಬೋಂಡಾ ಕಡ್ಲೆಕಾಯಿ ಆಗಮಿಸಿತ್ತು. ಒಂದು ಬೀಜ, ಎರಡು ಬೀಜದ ಕಾಯಿಗಳು ಇವಾಗಿದ್ದು, ನೋಡಲು 'ಆಲೂಬೋಂಡ' ಮಾದರಿಯಲ್ಲೇ ಕಾಣುತ್ತಿದ್ದವು. ಈ ಕಾಯಿಗಳನ್ನು ಕಂಡ ಗ್ರಾಹಕರು ಖುಷಿಯಿಂದ ಖರೀದಿಸುತ್ತಿದ್ದರು. ಬೇಡಿಕೆ ಹೆಚ್ಚಾಗಿದ್ದ ಈ ಕಾಯಿ ಒಂದು ಲೀಟರ್‌ಗೆ 50 ರೂ. ದರವಿತ್ತು. ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳಿಂದ ಅರಿವು ಕಡಲೆಕಾಯಿ ಪರಿಷೆಯಲ್ಲಿ ಕಳೆದ ಎರಡು ದಿನಗಳಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ತಂಡ ಅಲ್ಲಲ್ಲಿನಿಂತು, ಮಾಸ್ಕ್‌ ಧರಿಸದವರನ್ನು ಮಾಸ್ಕ್‌ ಹಾಕಿಕೊಳ್ಳುವಂತೆ ಹಾಗೂ ಕಿವಿಗಡಚಿಕ್ಕುವಂತೆ ಪೀಪಿಗಳನ್ನು ಊದುತ್ತಾ ಸಾಗುವವರಿಗೆ 'ಪರಿಷೆಯಲ್ಲಿಪೀಪಿ ಊದಬೇಡಿ' ಎಂದು ಬುದ್ಧಿ ಹೇಳುತ್ತಿದ್ದರು. ಕೆಲವರು ಈ ವಿದ್ಯಾರ್ಥಿಗಳ ಮಾತಿಗೆ ಬೆಲೆ ಕೊಟ್ಟರೆ ಮತ್ತೆ ಕೆಲವರು ಪೀಪಿ ಊದುವುದನ್ನು ಮುಂದುವರಿಸುತ್ತಿದ್ದರು. ಅಂತಹವರ ವಿಡಿಯೋ ಮಾಡಿ, ವಿಡಿಯೋವನ್ನು ಪೊಲೀಸರಿಗೆ ರವಾನಿಸುತ್ತಿದ್ದರು. ವಿಡಿಯೋ ಆಧಾರದ ಮೇಲೆ ಕೆಲವರನ್ನು ಪತ್ತೆ ಹಚ್ಚಿ ಅವರಿಗೆ ಪೊಲೀಸ್‌ ಭಾಷೆಯಲ್ಲೇ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಮಂಗಳವಾರವೂ ಕಂಡು ಬಂತು. ನಾವು 38 ಮಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಎರಡು ದಿನಗಳಿಂದ ಪರಿಷೆಯಲ್ಲಿದ್ದೇವೆ. ಪೀಪಿ ಊದಿ ಬೇರೆಯವರಿಗೆ ತೊಂದರೆ ಮಾಡುವವರನ್ನು ಪತ್ತೆ ಹಚ್ಚುವುದು, ಮಾಸ್ಕ್‌ ಇದ್ದರೂ ಮೂಗು, ಬಾಯಿ ಮುಚ್ಚಿಕೊಳ್ಳದಂತೆ ನಡೆದಾಡುವವರನ್ನು ಪತ್ತೆ ಮಾಡಿ ತಿಳಿಹೇಳುತ್ತಿದ್ದೇವೆ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ನಿಖಿಲ್‌ ಮತ್ತು ಎಲ್‌. ವಿನೋದ್‌ ನುಡಿದರು. ಬುಧವಾರವೂ ಪರಿಷೆ ಮುಂದುವರಿಕೆ ಸಾಮಾನ್ಯವಾಗಿ ಕಾರ್ತಿಕ ಸೋಮವಾರ ಹಾಗೂ ಅದರ ಹಿಂದಿನ ದಿನ ಮತ್ತು ಮಾರನೇ ದಿನ ಪರಿಷೆ ನಡೆಯುತ್ತದೆ. ಈ ಬಾರಿ ಬುಧವಾರವೂ ಪರಿಷೆ ನಡೆಯಲಿದೆ. ಹೀಗಾಗಿ ಬುಧವಾರವೂ ರಾಮಕೃಷ್ಣ ಆಶ್ರಮದವರೆಗೆ ಮಾತ್ರ ವಾಹನಗಳು ಸಂಚರಿಸಬಹುದು. ನಂತರ ಮಾರ್ಗ ಬದಲಾವಣೆಯಾಗುತ್ತದೆ. 21 ವರ್ಷಗಳಿಂದ ವ್ಯಾಪಾರ ಕಳೆದ 21 ವರ್ಷಗಳಿಂದ ನಾನು ಪರಿಷೆಗೆ ಬರುತ್ತಿದ್ದೇನೆ. ಈ ಹಿಂದಿನ ವರ್ಷಗಳಲ್ಲೆಲ್ಲ ಕನಿಷ್ಠ 50 ಮೂಟೆ ಕಾಯಿ ಮಾರುತ್ತಿದ್ದೆ. ಅದೇ ರೀತಿ, ಈ ಬಾರಿ 40 ಮೂಟೆ ಕಾಯಿ ತಂದೆ. ಬೋಂಡಾಕಾಯಿ ಸ್ವಲ್ಪ ವ್ಯಾಪಾರವಾಗುತ್ತಿದೆ. ಉಳಿದಂತೆ ಬೇರೆ ಕಾಯಿ ಹೋಗುತ್ತಿಲ್ಲ. ಹೀಗಾಗಿ, ತಂದ 40 ಮೂಟೆಯಲ್ಲಿ ಸುಮಾರು 28 ಮೂಟೆ ಮಾರಾಟವಾಗಿದೆ. ಉಳಿದದ್ದು ವಾಪಸ್‌ ಕೊಂಡೊಯ್ಯಬೇಕು ಎನ್ನುತ್ತಾರೆ ಸೇಲಂನ ಮುನಿಸ್ವಾಮಿ ಮತ್ತು ಪೆರಿಸ್ವಾಮಿ.