ಬೆಂಗಳೂರಿನ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ: ನಗರ ಜಿಲ್ಲಾಧಿಕಾರಿ ಆದೇಶ

ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸುವ ಕ್ರಮವಾಗಿ ಬೆಂಗಳೂರಿನ ಎಲ್ಲಾ ದೇವಸ್ಥಾನಗಳಿಗೂ ವಾರಾಂತ್ಯ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಭಕ್ತರ ಪ್ರವೇಶವನ್ನು ನಗರ ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ.

ಬೆಂಗಳೂರಿನ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ: ನಗರ ಜಿಲ್ಲಾಧಿಕಾರಿ ಆದೇಶ
Linkup
ಬೆಂಗಳೂರು: ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯಾದ್ಯಂತ ಭಕ್ತಾದಿಗಳು ದೇವಸ್ಥಾನಗಳಿಗೆ ಲಗ್ಗೆ ಇಡುತ್ತಿದ್ದಾರೆ. ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಜನರು ಗುಂಪು ಗುಂಪಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಸೋಂಕು ಮತ್ತಷ್ಟು ಹರಡುವ ಭೀತಿ ಉಂಟಾಗಿದೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ತೆರಳುತ್ತಿರುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಜನರು ಕೋವಿಡ್ 19 ನಿಯಮಗಳನ್ನು ಸರಿಯಾಗಿ ಪಾಲಿಸದೆ ಪೂಜಾ ವಿಧಾನಗಳಲ್ಲಿ ಭಾಗಿಯಾಗುತ್ತಿರುವುದು ಆತಂಕ ಮೂಡಿಸಿದೆ. ಮುಖ್ಯವಾಗಿ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಭಕ್ತರ ದಂಡು ತುಂಬಿ ತುಳುಕುತ್ತಿದ್ದು, ಸಾಂಕ್ರಾಮಿಕ ಹರಡುವ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಮೂರನೇ ಅಲೆಗೆ ಕಡಿವಾಣ ಹಾಕಲು ನಗರ ಕಠಿಣ ಆದೇಶ ಹೊರಡಿಸಿದ್ದಾರೆ. ಶ್ರಾವಣ ಶನಿವಾರ ಮತ್ತು ಭಾನುವಾರದಂದು ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಜಿಲ್ಲಾಧಿಕಾರಿ ಜಿ. ಮಂಜುನಾಥ್ ನಿಷೇಧ ವಿಧಿಸಿದ್ದಾರೆ. ವಾರಾಂತ್ಯದ ದಿನಗಳಂದು ಭಕ್ತರು ದೇವಸ್ಥಾನಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಹಾಗೆಯೇ ಸಾರ್ವತ್ರಿಕ ರಜಾ ದಿನಗಳಂದು ಕೂಡ ಈ ನಿಯಮ ಜಾರಿಯಲ್ಲಿರಲಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ವಾರಾಂತ್ಯದ ರಜಾ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ವಿಶೇಷ ಪೂಜೆಗಳು ನಡೆಯುವುದರಿಂದ ಸಾಮಾಜಿಕ ಅಂತರ ಹಾಗೂ ಇತರೆ ಕೋವಿಡ್ ನಿಯಮಗಳನ್ನು ಲೆಕ್ಕಿಸದೆ ಜನರು ದೇವಾಲಯಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಅದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ರಾಜ್ಯದ ಇನ್ನೂ ಅನೇಕ ಭಾಗಗಳಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ ವಿಧಿಸಿ ಈಗಾಗಲೇ ಆದೇಶಗಳನ್ನು ಹೊರಡಿಸಲಾಗಿದೆ.