ಲಾಕ್‌ಡೌನ್‌ನಿಂದ ನೂರೆಂಟು ಅಡೆತಡೆ: ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ತೆರೆದಿದ್ದರೂ ಲಾಭವಿಲ್ಲ..!

'ದಸ್ತಾವೇಜುಗಳ ನೋಂದಣಿಯು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕೊರೊನಾ ಆರ್ಥಿಕ ಸಂಕಷ್ಟದಿಂದ ಮಾರಾಟ-ಖರೀದಿ ಪ್ರಕ್ರಿಯೆಯೂ ನಿಂತು ಹೋಗಿದೆ' - ಬೆಂಗಳೂರಿನ ಉಪನೋಂದಣಾಧಿಕಾರಿಯೊಬ್ಬರ ಮಾಹಿತಿ

ಲಾಕ್‌ಡೌನ್‌ನಿಂದ ನೂರೆಂಟು ಅಡೆತಡೆ: ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ತೆರೆದಿದ್ದರೂ ಲಾಭವಿಲ್ಲ..!
Linkup
: ರಾಜ್ಯ ಸರಕಾರವು ಆದಾಯ ಕ್ರೋಢೀಕರಣದ ಉದ್ದೇಶದಿಂದ ಲಾಕ್‌ಡೌನ್‌ ನಡುವೆಯೂ ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು (ಸಬ್‌ ರಿಜಿಸ್ಟ್ರಾರ್‌) ತೆರೆದು ದಸ್ತಾವೇಜುಗಳ ನೋಂದಣಿಗೆ ಅನುಮತಿ ನೀಡಿದೆ. ಆದರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿವೆ. ನಗರದ ಬಸವನಗುಡಿ, ಜಯನಗರ, ರಾಜಾಜಿನಗರ, ಗಾಂಧಿನಗರ, ಶಿವಾಜಿನಗರ ಜಿಲ್ಲಾ ನೋಂದಣಾಧಿಕಾರಿಗಳ ವ್ಯಾಪ್ತಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ದಸ್ತಾವೇಜುಗಳಷ್ಟೇ ನೋಂದಣಿಯಾದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕರು ಕಚೇರಿಗಳಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರು ಇತ್ತ ಸುಳಿದಿರಲಿಲ್ಲ. ಕಚೇರಿಗಳಲ್ಲಿ ಮುದ್ರಾಂಕ, ನೋಂದಣಿ ಶುಲ್ಕವನ್ನು ನಗದು ಹಾಗೂ ಡಿಡಿ ರೂಪದಲ್ಲಿ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕ್ರಯಪತ್ರ, ಕರಾರು ಪತ್ರ, ಗೇಣಿ ಪತ್ರ, ಆಧಾರ ಖುಲಾಸೆ ಪತ್ರ, ಅಡಮಾನ ಪತ್ರಗಳ ನೋಂದಣಿಗೆ ಸಂಬಂಧಿಸಿದ ಶುಲ್ಕವನ್ನು ಬ್ಯಾಂಕ್‌ಗಳಲ್ಲೇ ಪಾವತಿ ಮಾಡಬೇಕಿದೆ. 'ಖಜಾನೆ-2' ತಂತ್ರಾಂಶದಿಂದ ಚಲನ್‌ ಪಡೆದುಕೊಂಡು ನಿಗದಿತ ಶುಲ್ಕವನ್ನು ಲೆಕ್ಕಾಚಾರ ಮಾಡಿ ಸಾರ್ವಜನಿಕರೇ ಬ್ಯಾಂಕ್‌ಗಳಿಗೆ ತೆರಳಿ ಕಟ್ಟಬೇಕು. ಆ ಬಳಿಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಬಂದು ದಸ್ತಾವೇಜುಗಳನ್ನು ನೋಂದಣಿ ಮಾಡಿಸಬೇಕಿದೆ. ಈ ಪ್ರಕ್ರಿಯೆಯಿಂದ ಜನರು ಹೈರಾಣಾಗುವಂತಾಗಿದೆ. ಬಹುತೇಕರಿಗೆ ಆನ್‌ಲೈನ್‌ ಬಳಕೆ ಗೊತ್ತಿಲ್ಲ. ಸೈಬರ್‌ ಕೇಂದ್ರಗಳು ಕೂಡ ತೆರೆದಿಲ್ಲ. ಹೀಗಾಗಿ, ಆನ್‌ಲೈನ್‌ ಬಳಕೆ ಗೊತ್ತಿಲ್ಲದವರು ದಸ್ತಾವೇಜುಗಳ ನೋಂದಣಿ, ಮುದ್ರಾಂಕ ಶುಲ್ಕ ಮತ್ತು ಉಪಕರವನ್ನು ಪಾವತಿಸಲು ಖಜಾನೆ-2 ತಂತ್ರಾಂಶದಲ್ಲಿ ಚಲನ್‌ ಪಡೆದುಕೊಂಡು ಬ್ಯಾಂಕ್‌ಗಳಲ್ಲಿ ಕಟ್ಟಲಾಗದೆ ಪರದಾಡುವಂತಾಗಿದೆ. ಕಡಿಮೆ ಶುಲ್ಕ ಪಾವತಿಸಿದವರು ಕಚೇರಿಯಿಂದ ಬ್ಯಾಂಕ್‌ಗಳಿಗೆ ಅಲೆದಾಡುವಂತಾಗಿದೆ. ಅಧಿಕ ಶುಲ್ಕ ಕಟ್ಟಿದವರು ವಾಪಸ್‌ ಪಡೆಯಲಾಗುತ್ತಿಲ್ಲ. ಈ ಎಲ್ಲ ಗೊಂದಲಗಳಿಂದಾಗಿ ದಸ್ತಾವೇಜುಗಳ ನೋಂದಣಿಯು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕೊರೊನಾ ಆರ್ಥಿಕ ಸಂಕಷ್ಟದಿಂದ ಮಾರಾಟ-ಖರೀದಿ ಪ್ರಕ್ರಿಯೆಯೂ ನಿಂತು ಹೋಗಿದೆ ಎಂದು ಉಪನೋಂದಣಾಧಿಕಾರಿಯೊಬ್ಬರು ಮಾಹಿತಿ ನೀಡಿದರು.