ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ನೆರವಿಗೆ 'ಮೊಬೈಲ್‌ ಡಾಕ್ಟರ್‌'..! ಡಾ. ಸುನೀಲ್ ಅವರ ಕಾರೇ ಕ್ಲಿನಿಕ್..!

'ಸರ್ಜಾಪುರ ರಸ್ತೆ, ಶ್ರೀರಾಮಪುರ, ಮಲ್ಲೇಶ್ವರ, ಜಾಲಹಳ್ಳಿ ಕ್ರಾಸ್‌ ಮತ್ತು ನಾಗಸಂದ್ರದ ಕೊಳೆಗೇರಿ ಪ್ರದೇಶಗಳಲ್ಲಿರುವ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ನಿತ್ಯ ಸುಮಾರು 20ರಿಂದ 25 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತೇನೆ' - ಡಾ. ಸುನೀಲ್‌.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ನೆರವಿಗೆ 'ಮೊಬೈಲ್‌ ಡಾಕ್ಟರ್‌'..! ಡಾ. ಸುನೀಲ್ ಅವರ ಕಾರೇ ಕ್ಲಿನಿಕ್..!
Linkup
ಮಂಜುನಾಥ್‌ ನಾಗಲೀಕರ್‌ : ನಗರದ ವೈದ್ಯ ಡಾ. ಸುನೀಲ್‌ ಕುಮಾರ್‌ ಹೆಬ್ಬಿ ಅವರು ಕೊಳೆಗೇರಿಗಳ ಸೋಂಕಿತ ಬಡವರು, ಮಧ್ಯಮ ವರ್ಗದವರು ಮತ್ತು ವಿಕಲಚೇತನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡುವ ಮೂಲಕ 'ಮೊಬೈಲ್‌ ಡಾಕ್ಟರ್‌' ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದ ಹೊರವಲಯದ ಸರ್ಜಾಪುರದಲ್ಲಿ ಕ್ಲಿನಿಕ್‌ ಹೊಂದಿರುವ ಇವರು, ಕಳೆದ 26 ದಿನಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ. ಇದಕ್ಕಾಗಿ ತಮ್ಮ ಕಾರನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಸ್ಟೆತಾಸ್ಕೋಪ್‌, ಪಲ್ಸ್‌ ಆಕ್ಸಿಮೀಟರ್‌, ಔಷಧ, ಆಕ್ಸಿಜನ್‌ ಕಾನ್ಸಂಟ್ರೇಟರ್‌, ಮಾಸ್ಕ್, ಗ್ಲೌಸ್‌ಗಳೊಂದಿಗೆ ಸೇವಾ ಕಾರ್ಯಕ್ಕೆ ಹೊರಡುತ್ತಾರೆ. 'ನೂರಾರು ಫೋನ್‌ ಕರೆಗಳು ಬರುತ್ತವೆ. ಫೋನ್‌ ಕರೆ ಸ್ವೀಕರಿಸಿ ಅಪ್‌ಡೇಟ್‌ ಮಾಡಲು ಸ್ವಯಂ ಸೇವಕರು ನೆರವಾಗುತ್ತಾರೆ. ಸರ್ಜಾಪುರ ರಸ್ತೆ, ಶ್ರೀರಾಮಪುರ, ಮಲ್ಲೇಶ್ವರ, ಜಾಲಹಳ್ಳಿ ಕ್ರಾಸ್‌ ಮತ್ತು ನಾಗಸಂದ್ರದ ಕೊಳೆಗೇರಿ ಪ್ರದೇಶಗಳಲ್ಲಿರುವ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ನಿತ್ಯ ಸುಮಾರು 20ರಿಂದ 25 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತೇನೆ' ಎನ್ನುತ್ತಾರೆ ಡಾ. ಸುನೀಲ್‌. 'ನನ್ನೊಂದಿಗೆ ಸ್ಟಾಫ್‌ ನರ್ಸ್‌ ಜಗದೀಶ್‌, ಮತ್ತೊಬ್ಬ ಸ್ವಯಂ ಸೇವಕ ಇದ್ದಾರೆ. ಉಚಿತ ಔಷಧಗಳನ್ನು ನೀಡಲು ದಿನಕ್ಕೆ ಸುಮಾರು 700 ರೂ. ಖರ್ಚಾಗುತ್ತದೆ. ನಿತ್ಯ ಸಂಜೆ ಕ್ಲಿನಿಕ್‌ ನೆಡಸುತ್ತೇನೆ. ಸಾಕಷ್ಟು ಮಂದಿ ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ನನ್ನ ಜೀವನ ನಿರ್ವಹಣೆಗೆ ಸಮಸ್ಯೆ ಇಲ್ಲ. ನನ್ನದು ಅಳಿಲು ಸೇವೆ. ಕರೆ ಮಾಡಿದ ಎಲ್ಲರಿಗೂ ಚಿಕಿತ್ಸೆ ಹಾಗೂ ಮೆಡಿಸಿನ್‌ ನೀಡಲು ಸಾಧ್ಯವಾಗುತ್ತಿಲ್ಲ' ಎಂದು ವಿವರಿಸುತ್ತಾರೆ . 'ಇನ್ನೂ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ, ನೆರವಿನ ಅಗತ್ಯವಿದೆ. ಪಿಪಿಇ ಕಿಟ್‌, ಅಗತ್ಯ ಮೆಡಿಸನ್‌ ಕೊಡಿಸುವಂತಿದ್ದರೆ ಕೊಡಿಸಲು ದಾನಿಗಳು ಮುಂದೆ ಬರಬಹುದು. ಇದರಿಂದ ಸಂಕಷ್ಟದ ಸಮಯದಲ್ಲಿ ಹೆಚ್ಚು ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ' ಎಂದು ಡಾ. ಸುನೀಲ್‌ ಹೇಳಿದರು. ಮೊಬೈಲ್‌ ಡಾಕ್ಟರ್‌ ಆಗಲು ಪ್ರೇರಣೆ ಏನು?: '2010ರ ಫೆಬ್ರವರಿಯಲ್ಲಿ ಹೊಸೂರು ರಸ್ತೆಯಲ್ಲಿ ಹೋಗುವಾಗ ಅಪಘಾತವಾಗಿತ್ತು. ಕಾರು ನಿಲ್ಲಿಸಿ ನನ್ನ ಬಳಿ ಇದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿನ ವಸ್ತುಗಳಿಂದ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಟ್ಟಿದ್ದೆ. ನಂತರ ಗಾಯಗೊಂಡಿದ್ದ ವ್ಯಕ್ತಿಯ ತಂದೆ ನನ್ನನ್ನು ಸಂಪರ್ಕಿಸಿ ಭಾವುಕರಾಗಿ ಧನ್ಯವಾದ ಹೇಳಿದರು. ಅಪಘಾತವಾದ ಕೂಡಲೇ ಮಗನಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದಿರಿ. ನಿಮ್ಮನ್ನು ಭೇಟಿ ಮಾಡಲೇಬೇಕು ಎಂದು ಹೇಳಿ ಭೇಟಿ ಮಾಡಿ ಮತ್ತೆ ಧನ್ಯವಾದ ಹೇಳಿ ಊಟ ಮಾಡಿಸಿದರು. ಪ್ರಥಮ ಚಿಕಿತ್ಸೆಯಿಂದಲೇ ಇಷ್ಟೊಂದು ನೆರವಾಗುತ್ತಿದ್ದರೆ ಇನ್ನಷ್ಟು ವೈದ್ಯಕೀಯ ವಸ್ತುಗಳನ್ನು ಕಾರಿನಲ್ಲೇಕೆ ಇಟ್ಟುಕೊಳ್ಳಬಾರದು ಎಂದು ಕಾರಿನ ಡಿಕ್ಕಿಯಲ್ಲಿ ಎಷ್ಟು ಜಾಗ ಇದೆಯೋ ಅಷ್ಟು ಜಾಗದಲ್ಲಿಔಷಧ, ಚಿಕಿತ್ಸೆಗೆ ಅಗತ್ಯ ಇರುವ ವೈದ್ಯಕೀಯ ಸಲಕರಣಿಗಳನ್ನು ಇಟ್ಟುಕೊಂಡಿರುತ್ತೇನೆ' ಎಂದು ಡಾ. ಸುನೀಲ್‌ ವಿವರಿಸಿದರು.