ನಾಳೆಯಿಂದ ಶಿಶು ವಿಹಾರ, ಪ್ಲೇ ಹೋಮ್‌ ಪುನಾರಂಭ; ಬಿಬಿಎಂಪಿಯಿಂದ ಪ್ರತ್ಯೇಕ ಮಾರ್ಗಸೂಚಿ!

ಶಿಶುವಿಹಾರ ಮತ್ತು ಪ್ಲೇ ಹೋಮ್‌ಗಳನ್ನು ಪುನರಾರಂಭಿಸಲು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಮಾತ್ರ ತೆರೆದಿರಬೇಕು. ಶಿಕ್ಷಕರು, ಎಲ್ಲ ಸಿಬ್ಬಂದಿಯು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಈ ಬಗ್ಗೆ ಪಾಲಿಕೆಯ ಆಯಾ ವಲಯದ ಆರೋಗ್ಯಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಆದೇಶಿಸಿದ್ದಾರೆ.

ನಾಳೆಯಿಂದ ಶಿಶು ವಿಹಾರ, ಪ್ಲೇ ಹೋಮ್‌ ಪುನಾರಂಭ; ಬಿಬಿಎಂಪಿಯಿಂದ ಪ್ರತ್ಯೇಕ ಮಾರ್ಗಸೂಚಿ!
Linkup
ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 20 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವ್ಯಾಪ್ತಿಯಲ್ಲಿನ ಮಕ್ಕಳ ಶಿಶುವಿಹಾರ ಹಾಗೂ ಪ್ಲೇ ಹೋಮ್‌ಗಳನ್ನು ನ.8ರಿಂದ ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ, ಪಾಲಿಕೆಯು ಸುರಕ್ಷತಾ ಕ್ರಮಗಳ ಪಾಲನೆ ದೃಷ್ಟಿಯಿಂದ ಪ್ರತ್ಯೇಕ ಹೊರಡಿಸಿದೆ. ಶಿಶುವಿಹಾರ ಮತ್ತು ಪ್ಲೇ ಹೋಮ್‌ಗಳನ್ನು ಪುನರಾರಂಭಿಸಲು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಮಾತ್ರ ತೆರೆದಿರಬೇಕು. ಶಿಕ್ಷಕರು, ಎಲ್ಲ ಸಿಬ್ಬಂದಿಯು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಈ ಬಗ್ಗೆ ಪಾಲಿಕೆಯ ಆಯಾ ವಲಯದ ಆರೋಗ್ಯಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಆದೇಶಿಸಿದ್ದಾರೆ. ಶಿಶುವಿಹಾರ ಮತ್ತು ಪ್ಲೇ ಹೋಮ್‌ಗಳ ಒಳಗಿನ ಮತ್ತು ಸುತ್ತಮುತ್ತಲ ಆವರಣವನ್ನು ಸ್ವಚ್ಛಗೊಳಿಸಬೇಕು. ಕೇಂದ್ರಗಳಲ್ಲಿನ ಪೀಠೋಪಕರಣ, ಮಕ್ಕಳು ಕುಳಿತುಕೊಳ್ಳುವ ಜಮಖಾನ, ಡೆಸ್ಕ್‌, ಆಟಿಕೆ ಸಾಮಾನುಗಳನ್ನು ಶುಚಿಗೊಳಿಸಬೇಕು. ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟಿರಬೇಕು. ನೆಲ, ಗೋಡೆ, ಕಿಟಕಿ, ಬಾಗಿಲುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದ್ದಾರೆ. ಆಹಾರ ತಯಾರಿಸಲು ಬಳಸುವ ಎಲ್ಲ ಪಾತ್ರೆ, ಲೋಟ, ಕುಕ್ಕರ್‌, ವಾಟರ್‌ ಫಿಲ್ಟರ್‌, ಟ್ಯಾಂಕ್‌, ಸಂಪ್‌ಗಳನ್ನು ಕೂಡ ಸ್ವಚ್ಛ ಮಾಡಬೇಕು. ಕೇಂದ್ರಗಳನ್ನು ತೆರೆಯುತ್ತಿರುವ ಕುರಿತು ಸಂಬಂಧಪಟ್ಟ ವಲಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಶಿಶುವಿಹಾರ, ಪ್ಲೇ ಹೋಮ್‌ಗಳಿಗೆ ಹಾಜರಾಗಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಶಿಕ್ಷಕರು ಪಡೆದುಕೊಳ್ಳಬೇಕು. ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ. ಕೊರೊನಾ ಸೋಂಕು ಪತ್ತೆ ಪ್ರಮಾಣವು ಶೇ.2ಕ್ಕಿಂತ ಕಡಿಮೆ ಇರುವ ವಾರ್ಡ್‌, ಪ್ರದೇಶಗಳಲ್ಲಿ ಮಾತ್ರ ಶಿಶುವಿಹಾರ, ಪ್ಲೇ ಹೋಮ್‌ಗಳನ್ನು ಪ್ರಾರಂಭಿಸಬೇಕು. ಎಲ್ಲೆಲ್ಲಿ ಪಾಸಿಟಿವ್‌ ದರ ಶೇ.2ಕ್ಕಿಂತ ಕಡಿಮೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸಂಬಂಧಪಟ್ಟ ಕೇಂದ್ರಗಳ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಕೋವಿಡ್‌ ರೋಗ ಲಕ್ಷಣಗಳಿರುವ ಮಕ್ಕಳನ್ನು ಕೇಂದ್ರಕ್ಕೆ ಕರೆತರದಂತೆ ಪೋಷಕರಿಗೆ ಸೂಚಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಒಂದು ಮೀಟರ್‌ ಅಂತರದಲ್ಲಿ ಕೂರಿಸಲು ವ್ಯವಸ್ಥೆ ಮಾಡಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ 2 ಅಥವಾ 3 ದಿನಕ್ಕೊಮ್ಮೆ ಬರಲು ಸೂಚಿಸಬೇಕು. ಈ ಕುರಿತು ಪೋಷಕರಿಗೆ ಮುಂಚಿತವಾಗಿ ಕರೆ ಮಾಡಿ ತಿಳಿಸಬೇಕು. ಆರಂಭದ ದಿನ ಹಬ್ಬದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಪೋಷಕರಿಗೆ ಕೋವಿಡ್‌ ಕಾರ್ಯವಿಧಾನದ ಬಗ್ಗೆ ವಿವರವಾಗಿ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಪ್ರತಿ 30 ನಿಮಿಷಕ್ಕೊಮ್ಮೆ ಮಕ್ಕಳು ಕೈತೊಳೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಹಿರಿಯ ನಾಗರಿಕರು ಶಿಶುವಿಹಾರ, ಪ್ಲೇ ಹೋಮ್‌ಗೆ ಬರದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿಯು ಶಿಶುವಿಹಾರ, ಪ್ಲೇ ಹೋಮ್ಸ್‌ ಪ್ರಾರಂಭವಾಗುವ 72 ಗಂಟೆ ಮೊದಲು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಆಗಾಗ್ಗೆ ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಉಸಿರಾಟದ ತೊಂದರೆಯಿರುವವರು ಕೆಲಸಕ್ಕೆ ಹಾಜರಾಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆಹಾರ ತಯಾರಿಸುವವರು ಮಾಸ್ಕ್‌, ಹೆಡ್‌ ಕ್ಯಾಪ್‌, ಏಪ್ರನ್‌ ಧರಿಸಬೇಕು. ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಕ್ಕಳನ್ನು ಇತರೆ ಮಕ್ಕಳಿಂದ ಬೇರ್ಪಡಿಸಬೇಕು. ಇಂತಹ ಮಕ್ಕಳನ್ನು ಪೋಷಕರು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ವೈದ್ಯಕೀಯ ಸಲಹೆ ಪಡೆಯಬೇಕು. ಶಿಶುವಿಹಾರ, ಪ್ಲೇ ಹೋಮ್‌ಗಳಲ್ಲಿ ಸಂದರ್ಶಕರ ಪ್ರವೇಶ ನಿರ್ಬಂಧಿಸಬೇಕು, ಕೇಂದ್ರಗಳಲ್ಲಿ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಆಟದ ಸ್ಥಳ, ಹ್ಯಾಂಡ್‌ ರೈಲ್ಸ್‌, ಆಟದ ಸಾಮಾನುಗಳು, ಪೀಠೋಪಕರಣಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣದಿಂದ ಅಥವಾ ಶೇ.7ರಷ್ಟು ಲೈಜಾಲ್‌ ಸೋಂಕು ನಿವಾರಕದಿಂದ ಶುದ್ಧಿಗೊಳಿಸಬೇಕು. ನೆಲ, ಕೈತೊಳೆಯುವ ಸ್ಥಳವನ್ನೂ ಶುಚಿಗೊಳಿಸಬೇಕು. ವಲಸೆ ಬಂದ ಮಕ್ಕಳನ್ನು ಕಡ್ಡಾಯವಾಗಿ ಶಿಶುವಿಹಾರ, ಪ್ಲೇ ಹೋಮ್‌ಗಳಿಗೆ ನೋಂದಣಿ ಮಾಡಿಕೊಂಡು ಪೂರಕ ಪೌಷ್ಠಿಕ ಆಹಾರ ನೀಡಬೇಕು. ಸ್ಯಾನಿಟೈಸರ್‌, ಸೋಂಕು ನಿವಾರಕ ದ್ರಾವಣವು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತ ಸ್ಥಳದಲ್ಲಿಡಬೇಕು ಎಂದು ಸೂಚಿಸಲಾಗಿದೆ. ಪಾಲಿಕೆಯ ಎಲ್ಲ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಶುವಿಹಾರ, ಪ್ಲೇ ಹೋಮ್‌ಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.