ಕಾಂಗ್ರೆಸ್‌ನ ಭದ್ರಕೋಟೆಗೆ ಬಿಜೆಪಿ ಲಗ್ಗೆ : ರಾಜ್ಯ ರಾಜಧಾನಿಯಲ್ಲಿ ಪ್ರಥಮ ಗೆಲುವು ದಾಖಲಿಸಿ ಬೀಗಿದ ಕಮಲ ಪಡೆ

ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ನೇರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ ಅವರು ಕಾಂಗ್ರೆಸ್‌ನ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಅವರನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಜಧಾನಿಯಲ್ಲಿ ಹಿಡಿತ ಸಾಧಿಸುವಲ್ಲಿ ಬಿಜೆಪಿಯು ಯಶಸ್ವಿಯಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆಗೆ ಬಿಜೆಪಿ ಲಗ್ಗೆ : ರಾಜ್ಯ ರಾಜಧಾನಿಯಲ್ಲಿ ಪ್ರಥಮ ಗೆಲುವು ದಾಖಲಿಸಿ ಬೀಗಿದ ಕಮಲ ಪಡೆ
Linkup
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು ಬೆಂಗಳೂರು : ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಕಮಲ ಪಾಳಯವು ಲಗ್ಗೆ ಹಾಕಿದೆ. ಆ ಮೂಲಕ ರಾಜಧಾನಿಯಲ್ಲಿ ಹಿಡಿತ ಸಾಧಿಸುವಲ್ಲಿ ಬಿಜೆಪಿಯು ಯಶಸ್ವಿಯಾಗಿದೆ. ಮಹಾನಗರದ ಸುತ್ತಲೂ ಆವರಿಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರೇ ಪ್ರಮುಖವಾಗಿರುವ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ್ತು ಕಾಂಗ್ರೆಸ್‌ನ ನಡುವೆ ನೇರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ ಅವರು ಕಾಂಗ್ರೆಸ್‌ನ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಅವರನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಗರ ಜಿಲ್ಲೆಯ 83 ಗ್ರಾಮ ಪಂಚಾಯಿತಿಗಳು, ಆನೇಕಲ್‌, ಅತ್ತಿಬೆಲೆ ಮತ್ತು ಬೊಮ್ಮಸಂದ್ರ ಪುರಸಭೆಯ 2073 ಮತದಾರರ ಪೈಕಿ 2070 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ 1227 ಮತ ಪಡೆದರೆ, ಕೆಜಿಎಫ್‌ ಬಾಬು 830 ಮತಗಳನ್ನಷ್ಟೇ ಪಡೆಯುವಲ್ಲಿ ಸಫಲರಾಗಿದ್ದು, 397 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಈ ಕ್ಷೇತ್ರದಿಂದ ಸತತ ಐದು ಸಲ ಗೆದ್ದಿದ್ದ ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಲಗಾಮು ಹಾಕಿದ ಬಿಜೆಪಿಯು, ಪ್ರಥಮ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿತು. ಈ ಕ್ಷೇತ್ರಕ್ಕೆ ಚುನಾವಣೆ ಶುರುವಾದಾಗಿನಿಂದ ಇಲ್ಲಿಯವರೆಗೆ ಬಿಜೆಪಿಯು ಗೆಲುವಿನ ಸನಿಹಕ್ಕೂ ಸುಳಿಯಲು ಸಾಧ್ಯವಾಗಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಕಮಲ ಪಕ್ಷವು ಗೆಲುವಿನ ಕೇಕೆ ಹಾಕಲು ಸಾಧ್ಯವಾಯಿತು. 12 ವರ್ಷಗಳ ಹಿಂದೆ ಕೇವಲ 9 ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಚ್‌.ಎಸ್‌.ಗೋಪಿನಾಥ್‌ ಅವರಿಗೆ ಈ ಸಲ ಜಯ ದಕ್ಕಿದೆ. ಈ ಹಿಂದೆ ಗೆಲುವಿಗೆ ಶ್ರಮಿಸಿದ್ದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಅವರು ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಇವರೊಂದಿಗೆ ಕಾಂಗ್ರೆಸ್‌ ಪಕ್ಷದ ದೊಡ್ಡ ದಂಡೇ ಕಮಲ ಪಾಳಯ ಸೇರಿತು. ಹೀಗಾಗಿ, ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಸಚಿವರು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಕಷ್ಟು ರಣತಂತ್ರ ರೂಪಿಸಿ, ಅದರಲ್ಲಿ ಸಫಲರಾಗಿದ್ದಾರೆ. ಬೆಂಗಳೂರು ದಕ್ಷಿಣ, ಯಶವಂತಪುರ, ಯಲಹಂಕ, ಬ್ಯಾಟರಾಯನಪುರ, ಆನೇಕಲ್‌, ದಾಸರಹಳ್ಳಿ, ಮಹದೇವಪುರ ಕ್ಷೇತ್ರ ವ್ಯಾಪ್ತಿಯ 83 ಗ್ರಾಮ ಪಂಚಾಯಿತಿಗಳು, ಮೂರು ಪುರಸಭೆಗಳಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿತ್ತು. ಇದಲ್ಲದೇ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ಸದಸ್ಯರ ಬೆಂಬಲವೂ ಕಮಲ ಪಡೆಗಿತ್ತು. ಸಂಘಟನೆಯ ಸೂತ್ರ ಹಿಡಿದುಕೊಂಡು ಪ್ರಚಾರ ನಡೆಸಿದ ಬಿಜೆಪಿಯು ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿ ಬೇರೂರುವಲ್ಲಿ ಯಶಸ್ವಿಯಾಯಿತು. ನಗರ ಜಿಲ್ಲೆವ್ಯಾಪ್ತಿಯಲ್ಲಿ ಕೇವಲ ಇಬ್ಬರು ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವು, ನಾಯಕತ್ವದ ಕೊರತೆ ಎದುರಿಸಿದರೂ ತನ್ನ ಮೂಲ ಮತದಾರರನ್ನು ನಂಬಿಕೊಂಡು ಅಬ್ಬರದ ಪ್ರಚಾರ ನಡೆಸಿತು. 2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಗೆದಿದ್ದ ಎಂ.ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಿ ಯೂಸುಫ್‌ ಷರೀಫ್‌ ಅವರನ್ನು ಕೊನೆ ಕ್ಷಣದಲ್ಲಿ ಕಣಕ್ಕಿಳಿಸಿತ್ತು. ಇದೇ ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಕೆಜಿಎಫ್‌ ಬಾಬು ಅವರು 1743 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡು ಗಮನ ಸೆಳೆದಿದ್ದರು. ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಕೆಜಿಎಫ್‌ ಬಾಬು ಕೇವಲ 5ನೇ ತರಗತಿವರೆಗೆ ಮಾತ್ರ ಓದಿದ್ದರು. ಇವರ ವಿರುದ್ಧ ಹಲವು ಆರೋಪಗಳಿದ್ದವು. ಕೌಟುಂಬಿಕ ಹಿನ್ನೆಲೆ, ದಿಢೀರ್‌ ಶ್ರೀಮಂತಿಕೆಯ ಬಗ್ಗೆ ಮತದಾರರಲ್ಲಿ ಗುಸು ಗುಸು ಶುರುವಾಗಿತ್ತು. ಸಚಿವರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಬೈರತಿ ಬಸವರಾಜು ಅವರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ವೈಯಕ್ತಿಕವಾಗಿ ದಾಳಿ ನಡೆಸಿ, ಹಲವು ಆರೋಪ ಹೊರಿಸಿದ್ದರು. ಇದಲ್ಲದೇ ಸ್ವಂತ ಪತ್ನಿ ಮತ್ತು ಪುತ್ರಿಯೇ ದೂರು ನೀಡಿದ್ದು ಸಹ ಕೆಜಿಎಫ್‌ ಬಾಬು ಅವರಿಗೆ ಮುಳುವಾಯಿತು ಎನ್ನಲಾಗಿದೆ. ಆನಂತರ ಪತ್ನಿಯರು ಹಾಗೂ ಪುತ್ರಿಯೊಂದಿಗೆ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಆರೋಪಗಳನ್ನು ಅಲ್ಲಗೆಳೆದು ಕಣ್ಣೀರಿಟ್ಟರು. ಆದರೆ, ಇದ್ಯಾವುದೂ ಮತದಾರರ ಮನ ಮುಟ್ಟಿಲ್ಲ. ಬಿ.ಇ ಸಿವಿಲ್‌ ಎಂಜಿನಿಯರ್‌ ಆಗಿರುವ ಎಚ್‌.ಎಸ್‌.ಗೋಪಿನಾಥ್‌ ಅವರು ಈ ಹಿಂದಿನ ಸೋಲಿನ ಅನುಕಂಪವನ್ನು ಮತಗಳಾಗಿ ಪರಿವರ್ತಿಸಿಕೊಂಡು ಭಾರಿ ಅಂತರದಿಂದ ಗೆಲುವು ಪಡೆದುಕೊಂಡರು. ಹಣ ಬಲದ ವಿಷಯವೂ ಬಹಿರಂಗವಾಗಿಯೇ ಈ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜಮೀನಿನ ಮೌಲ್ಯ ಹೆಚ್ಚಿರುವ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮತದ ಮೌಲ್ಯವೂ ಹೆಚ್ಚಿತ್ತು. ಚುನಾವಣೆಯಲ್ಲಿ ಲಕ್ಷ ರೂಪಾಯಿ ಲೆಕ್ಕದಲ್ಲಿ ಮತಗಳು ಬಿಕರಿಯಾಗಿದ್ದವು.