ಮಾಜಿ ಕಾರ್ಪೊರೇಟರ್‌ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ರೇಖಾ ಕದಿರೇಶ್ ನಾದಿನಿ, ಆಕೆಯ ಮಗ ಸೆರೆ

ಬಿಜೆಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರೇಖಾ ಅವರ ಪತಿ ಕದಿರೇಶ್ ಅವರ ಅಕ್ಕ ಮಾಲಾ ಹಾಗೂ ಆಕೆಯ ಮಗ ಅರುಳ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಕಾರ್ಪೊರೇಟರ್‌ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ರೇಖಾ ಕದಿರೇಶ್ ನಾದಿನಿ, ಆಕೆಯ ಮಗ ಸೆರೆ
Linkup
ಬೆಂಗಳೂರು: ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೊರೇಟರ್‌ ಬಿಜೆಪಿಯ ರೇಖಾ ಕದಿರೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಕದಿರೇಶ್‌ ಅವರ ಅಕ್ಕ ಮತ್ತು ಆಕೆಯ ಮಗ ಅರುಳ್‌ನನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಇದರಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ರೇಖಾ ಅವರ ಕೊಲೆ ಪ್ರಕರಣದಲ್ಲಿ ಮಾಲಾ ಮತ್ತು ಅವರ ಪುತ್ರ ಅರುಳ್‌ನ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ, ಈಗಾಗಲೇ ಬಂಧನಕ್ಕೊಳಗಾಗಿರುವ ಐದು ಮಂದಿ ಆರೋಪಿಗಳು ಸಹ ಹಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹತ್ಯೆಯ ಪ್ರಮುಖ ಸೂತ್ರಧಾರಿಗಳಾದ ಮಾಲಾ ಮತ್ತು ಆಕೆಯ ಪುತ್ರ ಅರುಳ್‌ನನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ 7ಕ್ಕೆ ಏರಿದೆ. ರೇಖಾ ಕದಿರೇಶ್‌ ಅವರು ಜೂ. 24ರಂದು ಆಂಜಿನಪ್ಪ ಗಾರ್ಡನ್‌ನಲ್ಲಿರುವ ತಮ್ಮ ಕಚೇರಿ ಬಳಿ ಬಡವರಿಗೆ ಊಟ ವಿತರಿಸಲು ಬಂದಿದ್ದಾಗ ಪೀಟರ್‌, ಸೂರ್ಯ, ಸ್ಟೀಫನ್‌, ಅಜಯ್‌ ಮತ್ತು ಪುರುಷೋತ್ತಮ್‌ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಹತ್ಯೆಗೆ ಸಂಚು ರೂಪಿಸಿದ್ದ ಕುಟುಂಬ ಮಾಲಾ ಮತ್ತು ಆಕೆಯ ಮಗ ಅರುಳ್‌ ಹಂತಕರಿಗೆ ಹಣಕಾಸು ನೆರವು ಮತ್ತು ನ್ಯಾಯಾಲಯದಲ್ಲಿ ಜಾಮೀನು ಒದಗಿಸುವ ಭರವಸೆ ನೀಡಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಕದಿರೇಶ್‌ ಕೊಲೆಯಾದ ಬಳಿಕ ರೇಖಾ ಅವರು, ನಾದಿನಿ ಮಾಲಾ ಮತ್ತು ಅವರ ಕುಟುಂಬವನ್ನು ದೂರವಿಟ್ಟಿದ್ದರು. ಜತೆಗೆ ಆಸ್ತಿ ಕಲಹವೂ ನಡೆಯುತ್ತಿತ್ತು. ಎರಡು ಸಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ರೇಖಾ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು. ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಮಾಲಾ ಮತ್ತು ಆಕೆಯ ಪುತ್ರ ಅರುಳ್‌, ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕುಟುಂಬದಲ್ಲಿ ನಡೆಯುತ್ತಿದ್ದ ಒಳಜಗಳದ ಸುಳಿವು ಪಡೆದ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದರು. ಮುಂಬರುವ ಪಾಲಿಕೆ ಚುನಾವಣೆಯಲ್ಲಿಸ್ಪರ್ಧಿಸಲು ಕದಿರೇಶ್‌ ಕುಟುಂಬದ ನಾಲ್ಕು ಮಂದಿಯ ನಡುವೆ ಪೈಪೋಟಿ ಶುರುವಾಗಿತ್ತು. ಮಾಲಾ ತನ್ನ ಮಗ ಅರುಳ್‌, ಪುತ್ರಿ ಅಥವಾ ಸೊಸೆಯನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ, ಬಿಜೆಪಿಯಿಂದ ರೇಖಾ ಅವರಿಗೆ ಟಿಕೆಟ್‌ ನೀಡುವುದು ಖಾತ್ರಿಯಾಗಿತ್ತು. ಇದರಿಂದ ಮಾಲಾ ಮತ್ತು ಅರುಳ್‌ ಕತ್ತಿ ಮಸೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ವಾರದ ಹಿಂದಷ್ಟೇ ಕೊಲೆಗೆ ಸ್ಕೆಚ್‌ಒಂದು ವಾರದ ಹಿಂದೆ ಪೀಟರ್‌ ಜತೆ ಸೇರಿಕೊಂಡು ಹತ್ಯೆಗೆ ಸ್ಕೆಚ್‌ ಹಾಕಲಾಗಿತ್ತು. ಆನಂತರ ಸೂರ್ಯ, ಸ್ಟೀಫನ್‌, ಪುರುಷೋತ್ತಮ್‌, ಅಜಯ್‌ ಎಂಬುವರ ನೆರವಿನೊಂದಿಗೆ ರೇಖಾ ಅವರನ್ನು ಹತ್ಯೆ ಮಾಡಿದರು. ಹತ್ಯೆಗೆ ದಿನ ನಿಗದಿಪಡಿಸುವ ಮುನ್ನವೇ ಕೊಲೆ ಮಾಡಿಬಿಟ್ಟಿದ್ದಾರೆ ಎಂದು ಅರುಳ್‌ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.