ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಂಪೂರ್ಣ ಚಿತ್ರಣದ ವರದಿ ನೀಡಲು ಬಿಡಿಎಗೆ 2 ವಾರ ಗಡುವು ನೀಡಿದ ರೇರಾ

'ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ನಿವೇಶನ ಖರೀದಿಸಿದ್ದೇವೆ. ಐದು ವರ್ಷಗಳಿಂದ ಮನೆ ನಿರ್ಮಿಸಲು ಅನುಮತಿ ನೀಡಿಲ್ಲ. ಮೂಲ ಸೌಲಭ್ಯಗಳನ್ನೂ ಕಲ್ಪಿಸದೆ ವಿಳಂಬ ಮಾಡಲಾಗುತ್ತಿದೆ' - ದೂರುದಾರರ ಅಳಲು

ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಂಪೂರ್ಣ ಚಿತ್ರಣದ ವರದಿ ನೀಡಲು ಬಿಡಿಎಗೆ 2 ವಾರ ಗಡುವು ನೀಡಿದ ರೇರಾ
Linkup
: ಮುಂದಿನ ಎರಡು ವಾರದೊಳಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಂಪೂರ್ಣ ಚಿತ್ರಣದ ವರದಿ ನೀಡುವಂತೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (), ಅಧಿಕಾರಿಗಳಿಗೆ ಸೂಚನೆ ನೀಡಿದೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ಬಿಡಿಎಯಿಂದ ವಿಳಂಬವಾಗಿರುವ ಕುರಿತು ಶುಕ್ರವಾರ ರೇರಾದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕಿಶೋರ್‌ ಚಂದ್ರ ಅಧ್ಯಕ್ಷತೆಯ ಮೂವರು ಸದಸ್ಯರ ರೇರಾ ಪೀಠ (ನೀಲಮಣಿ ರಾಜು, ವಿಷ್ಣುವರ್ಧನ ರೆಡ್ಡಿ) ವಿಚಾರಣೆ ನಡೆಸಿತು. ದೂರುದಾರರ ಅಹವಾಲನ್ನು ಆಲಿಸಿದ ಪೀಠ, ಬಿಡಿಎ ಅಧಿಕಾರಿಗಳ ವಿಚಾರಣೆ ನಡೆಸಿ, ಈ ಸೂಚನೆ ನೀಡಿತು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ನಿವೇಶನ ಖರೀದಿಸಿದ್ದೇವೆ. ಐದು ವರ್ಷಗಳಿಂದ ಮನೆ ನಿರ್ಮಿಸಲು ಅನುಮತಿ ನೀಡಿಲ್ಲ. ಮೂಲ ಸೌಲಭ್ಯಗಳನ್ನೂ ಕಲ್ಪಿಸದೆ ವಿಳಂಬ ಮಾಡಲಾಗುತ್ತಿದೆ. ಡಿಸೆಂಬರ್‌ 31ರವರೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರೇರಾ ಬಿಡಿಎಗೆ ಗಡುವು ನೀಡಿತ್ತು. ಆದರೆ ಈವರೆಗೆ ಶೇ.40ರಷ್ಟು ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದರಿಂದ ನಮ್ಮ ಸಾಲದ ಹೊರೆ ಹೆಚ್ಚಾಗಿದೆ. ನ್ಯಾಯ ಕೊಡಿಸಿ ಎಂದು ನೋಂದಾಯಿತ ಮುಕ್ತ ವೇದಿಕೆಯ ಅಧ್ಯಕ್ಷರಾದ ನುಗ್ಗೇಹಳ್ಳಿ ಶ್ರೀಧರ್‌ ಮತ್ತು ಕಾರ್ಯದರ್ಶಿ ಸೂರ್ಯಕಿರಣ್‌ ಮತ್ತು ಇತರೆ ಪದಾಧಿಕಾರಿಗಳು ರೇರಾಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ವಿಚಾರಣೆ ನಡೆಯಿತು. ಬಿಡಿಎ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪಾರದರ್ಶಕತೆ ಕಾಪಾಡಬೇಕು. ಪ್ರತಿ ತಿಂಗಳು ಸಭೆ ನಡೆಸಿ, ತಿಂಗಳ ವಿಶ್ಲೇಷಣಾ ವರದಿ ಕೊಡಬೇಕು. ಹಣದ ಖರ್ಚು - ವೆಚ್ಚ, ಕೆಲಸಗಳ ಸ್ಥಿತಿಗತಿ ಸೇರಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಡಿಎ ವೆಬ್‌ಸೈಟ್‌ನಲ್ಲಿ ತ್ರೈಮಾಸಿಕ ವರದಿಯನ್ನು ಪ್ರಕಟಿಸಬೇಕು. ಪ್ರತಿ ತಿಂಗಳ ಸಭೆಗೆ ನಿವೇಶನದಾರರನ್ನು ಕರೆಯಬೇಕು ಎಂದು ರೇರಾ ಬಿಡಿಎಗೆ ಸೂಚನೆ ನೀಡಿತು ಎಂದು ದೂರುದಾರರಾದ ನುಗ್ಗೇಹಳ್ಳಿ ಶ್ರೀಧರ್‌ 'ವಿಕ'ಗೆ ತಿಳಿಸಿದರು. ರೇರಾ ಮುಂದೆ ಅಳಲು ತೋಡಿಕೊಂಡ ನಿವೇಶನದಾರರು: 30-40 ಅಳತೆಯ ನಿವೇಶನಕ್ಕೆ 23 ಲಕ್ಷ ರೂ., 60-40 ಅಳತೆಯ ನಿವೇಶನಕ್ಕೆ 56 ಲಕ್ಷರೂ., 50-80ರ ನಿವೇಶನಕ್ಕೆ 96 ಲಕ್ಷ ರೂ. ಹಾಗೂ 12-30 ವಿಸ್ತೀರ್ಣದ ನಿವೇಶನಕ್ಕೆ 12 ಲಕ್ಷ ರೂ. ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 20-30 ರ ಅಳತೆಯ ನಿವೇಶನಕ್ಕೆ 6 ಲಕ್ಷ ರೂ. ನಂತೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಆದರೆ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಕೆಲಸಗಳನ್ನು ಮಾಡದೆ ವಿಳಂಬ ನೀತಿ ಅನುಸರಿಸುತ್ತಿದೆ. ನಾವು ನಿವೇಶನ ಖರೀದಿಸಲು ಲಕ್ಷಾಂತರ ರೂ. ಸಾಲ ಪಡೆದಿದ್ದೇವೆ. ಇದೀಗ ಮನೆ ಬಾಡಿಗೆಯನ್ನೂ ಕಟ್ಟಬೇಕು. ಜತೆಗೆ ಸಾಲವನ್ನೂ ತೀರಿಸಬೇಕು. ಇದೆಲ್ಲದರ ಜತೆಗೆ ಇದೀಗ ನಮಗೆ ಸಾಲಕ್ಕೆ ಹೆಚ್ಚುವರಿ ಬಡ್ಡಿಯ ಹೊರೆಯೂ ಬಿದ್ದಿದೆ. ನಮಗೆ ನಿವೇಶನದಲ್ಲಿ ಮನೆ ಕಟ್ಟಲು ಮೂಲಸೌಲಭ್ಯಗಳೊಂದಿಗೆ ಅನುಮತಿ ಕೊಡಿಸಿ, ಇಲ್ಲವೇ ನಮಗೆ ಬಿಡಿಎ ವಿಳಂಬ ನೀತಿಯಿಂದ ಆಗುತ್ತಿರುವ ನಷ್ಟಕ್ಕೆ ಪರಿಹಾರವನ್ನಾದರೂ ಕೊಡಿಸಲು ಬಿಡಿಎಗೆ ಸೂಚಿಸಿ ಎಂದು ದೂರುದಾರರು ರೇರಾ ಪೀಠದ ಮುಂದೆ ತಮ್ಮ ಅಳಲು ತೋಡಿಕೊಂಡರು. ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 4,040 ಎಕರೆ ನೋಟಿಫೈ ಆಗಿರುವ ಭೂಮಿ. ಆದರೆ ಇದೀಗ 1,400 ಎಕರೆ ಭೂಸ್ವಾಧೀನ ಆಗಿಲ್ಲ. 2,630 ಎಕರೆ ಮಾತ್ರ ಬಿಡಿಎಗೆ ಸಿಕ್ಕಿದೆ. ಈ ಬಗ್ಗೆ ಬಿಡಿಎ ಹಿರಿಯ ಎಂಜಿನಿಯರ್‌ ಶಾಂತರಾಜಣ್ಣ ಬಿಡಿಎ ಪರವಾದ ತಮ್ಮ ನಿಲುವು ಪ್ರಕಟಿಸಿದರು. ಜತೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕೋವಿಡ್‌, ಆರ್ಥಿಕ ಮುಗ್ಗಟ್ಟು, ಮಳೆಯಿಂದ ವಿಳಂಬವಾಗಿದೆ. ಮುಂದಿನ ಒಂದು ವರ್ಷದೊಳಗೆ ಮುಗಿಸುವ ಸಾಧ್ಯತೆಯಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೂರುದಾರರಾದ ವೇದಿಕೆ ಪದಾಧಿಕಾರಿಗಳು, ಬಿಡಿಎ ಯೋಜನೆ ರೂಪಿಸಿದ್ದು, 4,040 ಎಕರೆಗೆ. ಈಗ ಹಣದ ಕೊರತೆಯಿದೆ. ಭೂಸ್ವಾಧೀನ ಮಾಡುವುದು ಕಷ್ಟ ಎಂದರೆ ಇಡೀ ಬಡಾವಣೆಯ ಸಂಪರ್ಕ, ಯೋಜನೆ ಹಾಳಾಗುತ್ತದೆ ಎಂದರು. ಇದೆಲ್ಲವನ್ನೂ ಆಲಿಸಿದ ರೇರಾ ಪೀಠ, ಬಿಡಿಎ 15 ದಿನಗಳೊಳಗೆ ಬಡಾವಣೆ ವಸ್ತು ಸ್ಥಿತಿಯ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿತು. ಜತೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಸೂಚನೆ ನೀಡಿತು. ಬಡಾವಣೆಯ ಕೆಲಸ ಪರಿಶೀಲಿಸಿದ ನಂತರ ಮುಂದಿನ ಹಂತದ ವಿಚಾರಣೆಯನ್ನು ಕೈಗೊಳ್ಳುವುದಾಗಿ ತಿಳಿಸಿತು. ಬಿಡಿಎ ಈಗಾಗಲೇ ಎರಡು ಬಾರಿ ರೇರಾದಿಂದ ಗಡುವು ಪಡೆದಿದೆ. 2018 ಮತ್ತು 2020ರಲ್ಲಿ ಕೇವಲ ಶೇ.40ರಷ್ಟು ಮಾತ್ರ ಮೂಲಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿದೆ. ಇದೀಗ ಮತ್ತೊಂದು ವರ್ಷದ ಗುಡುವನ್ನು ಬಿಡಿಎ ಕೇಳುತ್ತಿದೆ. ಹೀಗೆಯೇ ಗಡುವು ನೀಡುತ್ತಾ ಹೋದರೆ ಸಾಲ ಮಾಡಿದ ನಿವೇಶನದಾರರ ಸ್ಥಿತಿ ಏನಾಗಬೇಕು? ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಕಾರ್ಯದರ್ಶಿ ಸೂರ್ಯಕಿರಣ್‌ ಪ್ರಶ್ನಿಸಿದರು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ2,636 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಈ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು, ಒಳಚರಂಡಿ, ಭೂಗತ ವಿದ್ಯುತ್‌ ಕೇಬಲ್‌, ಮಳೆನೀರು ಕಾಲುವೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಿದೆ. ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು 2015ರಿಂದ ಕೈಗೆತ್ತಿಕೊಂಡರೂ ಅದರ ಲಾಭ ನಿವೇಶನ ಪಡೆದವರಿಗೆ ಇಂದಿಗೂ ಲಭಿಸಿಲ್ಲ. ಕೆಂಪೇಗೌಡ ಬಡಾವಣೆಯಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದರಿಂದ ಶೀಘ್ರ ಪೂರ್ಣಗೊಳಿಸಲು ಮೇಲ್ವಿಚಾರಣೆ ಮಾಡುವಂತೆ ನಿವೇಶನದಾರರು ರೇರಾ ಮೊರೆ ಹೋಗಿದ್ದಾರೆ.