![](https://vijaykarnataka.com/photo/88247236/photo-88247236.jpg)
: 'ಓಮಿಕ್ರಾನ್' ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆಯು ಕೋವಿಡ್ನ ನಕಲಿ ನೆಗೆಟಿವ್ ವರದಿಯನ್ನು ಹೋಟೆಲ್ ಸಿಬ್ಬಂದಿಗೆ ತೋರಿಸಿ ದುಬೈಗೆ ಪರಾರಿಯಾಗಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು.
ಬಳಿಕ ಅವರನ್ನು ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸಿ, ಕೊಠಡಿಯಿಂದ ಹೊರಗೆ ಕಳುಹಿಸದಂತೆ ಬಿಬಿಎಂಪಿ ಅಧಿಕಾರಿಗಳು, ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಮಹೇಂದ್ರ ಎಂಬ ಹೆಸರಿನ ಸೋಂಕಿತ ವ್ಯಕ್ತಿಯು ಖಾಸಗಿ ಲ್ಯಾಬ್ವೊಂದರಲ್ಲಿ ಪಡೆದಿದ್ದ ನೆಗೆಟಿವ್ ವರದಿಯನ್ನು ತೋರಿಸಿ, ನ.27ರಂದು ಮಧ್ಯರಾತ್ರಿ ಹೋಟೆಲ್ನಿಂದ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ದುಬೈಗೆ ಪರಾರಿಯಾಗಿದ್ದ.
ಬಳಿಕ 'ಓಮಿಕ್ರಾನ್' ವರದಿ ಬಂದಿತ್ತು. ಹೀಗಾಗಿ, ಪಾಲಿಕೆಗೆ ಮಾಹಿತಿ ನೀಡದೆಯೇ ಸೋಂಕಿತನನ್ನು ಹೊರ ಹೋಗಲು ಅವಕಾಶ ಮಾಡಿಕೊಟ್ಟಿದ್ದ ಹೋಟೆಲ್ನ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೀಗ ಹೋಟೆಲ್ ಆಡಳಿತ ಮಂಡಳಿ ಹಾಗೂ ಎಸ್.ಆರ್.ಲ್ಯಾಬೋರೇಟರಿ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೇ, ಕೋವಿಡ್ನ ನಕಲಿ ನೆಗೆಟಿವ್ ಪ್ರಮಾಣಪತ್ರ ಹೇಗೆ ಪಡೆಯಾಲಾಗಿದೆ, ಯಾವ ಕಾರಣಕ್ಕೆ ಲ್ಯಾಬೋರೇಟರಿಯವರು ನಕಲಿ ಪ್ರಮಾಣ ಪತ್ರ ನೀಡಿದ್ದಾರೆ. ಇದನ್ನು ಯಾರು ಮಾಡಿಸಿಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣ ಪಡೆದು ನಕಲಿ ವರದಿ ಸೃಷ್ಟಿ!
ದಕ್ಷಿಣ ಆಫ್ರಿಕಾ ಪ್ರಜೆಯಾದ ಪರಾರಿಕೋರ ಸೋಂಕಿತ, ಸಾಫ್ಟ್ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ತಮ್ಮ ಕಂಪನಿಯ ಕೆಲಸದ ನಿಮಿತ್ತ ನ.20 ರಂದು ನಗರಕ್ಕೆ ಬಂದಿದ್ದ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿತ್ತು. ಆಗ ಆತನಲ್ಲಿ ಕೊರೋನಾ ಪತ್ತೆಯಾಗಿತ್ತು. ಬಳಿಕ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಒಮಿಕ್ರೋನ್ ಅಂಶ ಪತ್ತೆಯಾಗಿತ್ತು.
ಈ ಮಾಹಿತಿ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಹೈಗ್ರೌಂಡ್ಸ್ ಸಮೀಪದ ಶಾಂಗ್ರೀಲಾ ಹೋಟೆಲ್ನಲ್ಲಿ ಆತನಿಗೆ 14 ದಿನಗಳ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ತಮ್ಮ ದೇಶಕ್ಕೆ ತೆರಳಲು ನಿರ್ಧರಿಸಿದ್ದ ಆತ, ತನ್ನ ಕಂಪನಿ ನೌಕರರನ್ನು ಬಳಸಿಕೊಂಡು ನಕಲಿ ಕೊರೋನಾ ನೆಗೆಟಿವ್ ವರದಿ ಪಡೆಯಲು ಸಂಚು ರೂಪಿಸಿದ್ದ. ಅಂತೆಯೇ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಂಗೇನಿ ಲ್ಯಾಬ್ ಅನ್ನು ಆತನ ಕಂಪನಿಯ ಉದ್ಯೋಗಿ ರವೀಂದ್ರ ಸೇರಿ ಇಬ್ಬರು ಸಂಪರ್ಕಿಸಿದ್ದರು.
ಬಳಿಕ ಲ್ಯಾಬ್ನ ಸಿಬ್ಬಂದಿಗೆ ಹಣದಾಸೆ ತೋರಿಸಿದ ಆರೋಪಿಗಳು, ಸೋಂಕಿತನ ಬದಲಿಗೆ ಮತ್ತೊಬ್ಬ ವ್ಯಕ್ತಿಯ ಸ್ವ್ಯಾಬ್ ಅನ್ನು ಪರೀಕ್ಷೆಗೆ ಕೊಟ್ಟಿದ್ದರು. ಅಲ್ಲದೆ ಮೊಬೈಲ್ ಸಂಖ್ಯೆ ಸಹ ತಪ್ಪು ಕೊಟ್ಟಿದ್ದರು.ನ.26ರಂದು ನೆಗೆಟಿವ್ ವರದಿ ಸಿದ್ಧಪಡಿಸಿದ್ದ ಲ್ಯಾಬ್ ಸಿಬ್ಬಂದಿ, ಅದನ್ನು ಸೋಂಕಿತನ ಕಂಪನಿಯ ನೌಕರರಿಗೆ ಕೊಟ್ಟಿದ್ದಾರೆ. ಈ ವರದಿ ಕೈ ಸೇರಿದ ಮರುದಿನವೇ ಹೋಟೆಲ್ ತೊರೆದ ಆತ, ವಿಮಾನ ನಿಲ್ದಾಣಕ್ಕೆ ತೆರಳಿ ವಲಸೆ ವಿಭಾಗದಲ್ಲಿ ಕೊರೋನಾ ನೆಗೆಟಿವ್ ವರದಿ ಸಲ್ಲಿಸಿದ್ದ. ದುಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದ. ಇನ್ನು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.