ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರು, ವಾಹನ ಸವಾರರು ಹೈರಾಣ

ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಗುಂಡಿಗಳಿಗೆ ಹಾಕಿದ್ದ ತೇಪೆ ಕಿತ್ತು ಬಂದಿದ್ದು, ಬಿಬಿಎಂಪಿ ವ್ಯಾಪ್ತಿಯ ಯಾವುದೇ ರಸ್ತೆಗೆ ಕಾಲಿಟ್ಟರೂ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳೇ ಸ್ವಾಗತ ಕೋರುತ್ತಿವೆ.

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರು, ವಾಹನ ಸವಾರರು ಹೈರಾಣ
Linkup
ಬೆಂಗಳೂರು: ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಗುಂಡಿಗಳಿಗೆ ಹಾಕಿದ್ದ ತೇಪೆ ಕಿತ್ತು ಬಂದಿದ್ದು, ಕಳಪೆ ಕಾಮಗಾರಿಯ ಬಣ್ಣ ಬಯಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಯಾವುದೇ ರಸ್ತೆಗೆ ಕಾಲಿಟ್ಟರೂ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳೇ ಸ್ವಾಗತ ಕೋರುತ್ತಿವೆ. ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚುತ್ತಿರುವುದರಿಂದ ಡಾಂಬರು ಕಿತ್ತು ಬಂದು ಮತ್ತೆ ಹೊಂಡ-ಗುಂಡಿಗಳು ನಿರ್ಮಾಣವಾಗುತ್ತಿವೆ. ಕಳಪೆ ಕಾಮಗಾರಿಯಿಂದ ರಸ್ತೆ ಗುಂಡಿ ಮುಚ್ಚಲು ಖರ್ಚು ಮಾಡಿದ ಕೋಟ್ಯಂತರ ರೂ. ತೆರಿಗೆದಾರರ ಹಣವು ವ್ಯರ್ಥವಾಗುತ್ತಿದೆ. ಪಾಲಿಕೆಯ 198 ವಾರ್ಡ್‌ಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಗುಂಡಿಗಳಿಲ್ಲದ ರಸ್ತೆಗಳು ಕಾಣಸಿಗುವುದೇ ಇಲ್ಲ. ಮಳೆಯಿಂದಾಗಿ ಇತ್ತೀಚೆಗೆ ಹಾಕಿದ್ದ ತೇಪೆಯ ಜಾಗದಲ್ಲೇ ಗುಂಡಿಗಳು ಬಿದ್ದಿವೆ. ಇದಲ್ಲದೆ, ಸಾವಿರಾರು ಕಿ.ಮೀ. ರಸ್ತೆ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಬೆನ್ನು ನೋವಿಗೆ ಸಿದ್ಧರಾಗಿಯೇ ರಸ್ತೆಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೆಜ್ಜೆ ಹೆಜ್ಜೆಗೂ ಧುತ್ತನೆ ಎದುರಾಗುವ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಮಾಮೂಲಿ ಆಗಿದೆ. ಜಲ್ಲಿಕಲ್ಲು ಎದ್ದು ಬಂದು ಅಧ್ವಾನವಾಗಿರುವ ರಸ್ತೆಗಳಲ್ಲಿ ಚಲಿಸಲು ವಾಹನಗಳೂ ಏದುಸಿರು ಬಿಡುತ್ತಿವೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಿರುವ ಸವಾರರು, ವಾಹನಗಳ ರಿಪೇರಿಗಾಗಿ ಸಾವಿರಾರು ರೂ. ವ್ಯಯಿಸಬೇಕಾಗಿದೆ. ಪಾಲಿಕೆಯು ನಿಯಮಬದ್ಧವಾಗಿ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇದರಿಂದಾಗಿ ದುರಸ್ತಿಪಡಿಸಿದಷ್ಟೇ ವೇಗದಲ್ಲಿ ಡಾಂಬರು ಕಿತ್ತು ಬರುತ್ತಿದ್ದು, ಜನರ ಪರದಾಟ ಮುಂದುವರಿದಿದೆ. ಹೊಂಡ-ಗುಂಡಿಗಳಿಂದ ಅಧ್ವಾನವಾಗಿರುವ ರಸ್ತೆಗಳು ವಾಹನ ಸವಾರರ ಜೀವ ತೆಗೆಯುತ್ತಿವೆ. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ತೇಪೆ ಹಾಕಲಾದ ಕಡೆಯೇ ಮತ್ತೆ ಗುಂಡಿಗಳು ಬೀಳುತ್ತಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳೆಲ್ಲವೂ ಅಸ್ಥಿಪಂಜರಗಳಂತಾಗಿವೆ. ಜಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿಕೊಂಡಿದ್ದು, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಎರಡು ಸಲ ಸಭೆ ನಡೆಸಿ, ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈ ಡೆಡ್‌ಲೈನ್‌ ಮುಗಿದು ಹಲವು ದಿನಗಳು ಕಳೆದರೂ ರಸ್ತೆಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ತಿಂಗಳು ರಸ್ತೆ ಗುಂಡಿಗಳಿಗೆ ಮೂವರು ಬಲಿಯಾಗಿದ್ದಾರೆ. ಇಷ್ಟಾದರೂ ಹಲವು ರಸ್ತೆಗಳಲ್ಲಿ ಇನ್ನಷ್ಟು ವಾಹನ ಸವಾರರ ಜೀವ ತೆಗೆಯಲು ಗುಂಡಿಗಳು ಬಾಯ್ದೆರೆದು ಕುಳಿತಿವೆ. ಮಳೆ ಬಂದಾಗಲಂತೂ ಗುಂಡಿ ಯಾವುದು, ರಸ್ತೆ ಯಾವುದು ಎಂಬುದು ಗೊತ್ತಾಗದೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸವಾರರು ಪ್ರಾಣ ಭೀತಿಯಲ್ಲೇ ವಾಹನ ಚಲಾಯಿಸಬೇಕಿದೆ. ಕೊಂಚ ಜೋರು ಮಳೆ ಸುರಿದರೆ ಸಾಕು, ರಸ್ತೆಗಳಲ್ಲಿ ಸಾಲು ಸಾಲಾಗಿ ಇಣುಕುವ ಗುಂಡಿಗಳು ಜನರ ಬದುಕನ್ನು ಹೈರಾಣಾಗಿಸುತ್ತಿವೆ. ರಸ್ತೆಯಲ್ಲಿ ಗುಂಡಿಗಳಿವೆಯೋ, ಹೊಂಡಗಳಲ್ಲೇ ರಸ್ತೆ ಇದೆಯೋ ಎನ್ನುವಷ್ಟರ ಮಟ್ಟಿಗೆ ರಸ್ತೆಗಳು ಅಧ್ವಾನವಾಗಿವೆ. ಬಿಬಿಎಂಪಿಯು ಗುಂಡಿ ಮುಚ್ಚುವುದಕ್ಕಾಗಿಯೇ ವಾರ್ಷಿಕ 46.10 ಕೋಟಿ ರೂ. ಖರ್ಚು ಮಾಡುತ್ತಿದೆ. ಇದಲ್ಲದೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ ನೆಪದಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. 2015-16ರಿಂದ ಇಲ್ಲಿಯವರೆಗೆ ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ಡಾಂಬರೀಕರಣಕ್ಕೆ 20,060 ಕೋಟಿ ರೂ. ವ್ಯಯಿಸಲಾಗಿದೆ. ಇಷ್ಟಾದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗುತ್ತಿಲ್ಲ.