ದೇಶದ ಅತೀ ದೊಡ್ಡ ಉತ್ಪಾದಕ ಸಂಸ್ಥೆ , ಮುಂದಿನ ತ್ರೈಮಾಸಿಕವು ಅತ್ಯುತ್ತಮವಾಗಿರಲಿದೆ ಎಂದು ನಿರೀಕ್ಷಿಸುತ್ತಿದೆ. ಚಿಪ್ ಪೂರೈಕೆಯಲ್ಲಿ ಸುಧಾರಣೆಯಾಗಿದ್ದು ಹೆಚ್ಚಿನ ಪ್ರಯಾಣಿಕ ವಾಹನ ಮತ್ತು ಎಸ್ಯುವಿಗಳನ್ನು ತಯಾರಿಸಿ ಮಾರಾಟ ಮಾಡಲು ಕಂಪನಿ ಯೋಜನೆ ರೂಪಿಸಿದೆ. ಈ ಸಂಬಂಧ ತನ್ನ ಪೂರೈಕೆದಾರರಿಗೆ ಮಾಹಿತಿ ನೀಡಿದ್ದು, ಸಜ್ಜಾಗಿರಲು ಹೇಳಿದೆ.
ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳ ಪ್ರಕಾರ, ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ 4,70,000-4,90,000 ವಾಹನಗಳ ಉತ್ಪಾದನೆಗೆ ಸಿದ್ಧವಾಗಿರಲು ತನ್ನ ಪೂರೈಕೆದಾರರಿಗೆ ಹೇಳಿದೆ. ಪ್ರಸಕ್ತ ಹಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ಈ ಸಂಖ್ಯೆಯನ್ನು ಮುಟ್ಟಿದ್ದೇ ಆದಲ್ಲಿ, ಕಳೆದೊಂದು ದಶಕದಲ್ಲೇ ಗರಿಷ್ಠ ಬೆಳವಣಿಗೆ ದರವನ್ನು ಮಾರುತಿ ಸುಜುಕಿ ಸಾಧಿಸಿದಂತಾಗಲಿದೆ. ಈ ವರ್ಷ ಕಂಪನಿಯ ಕಾರು ಮಾರಾಟದಲ್ಲಿ ಶೇ. 15ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದ್ದು, ವಾರ್ಷಿಕ ಮಾರಾಟ 16.5 ಲಕ್ಷಕ್ಕೆ ಏರಿಕೆಯಾಗುವ ಲಕ್ಷಣಗಳಿವೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕಂಪನಿಯ ವಾಹನ ಮಾರಾಟ ಕುಸಿದಿತ್ತು. ಇದೀಗ ಮೂರನೇ ಆರ್ಥಿಕ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಪುಟಿದೇಳಲು ಕಂಪನಿ ಸಜ್ಜಾಗಿದೆ.
ಈ ಹಿಂದೆ 2011ನೇ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಶೇ. 23.5ರಷ್ಟು ಬೆಳವಣಿಗೆ ದಾಖಲಿಸಿತ್ತು. ಇದೀಗ ಮತ್ತೆ ಇಂಥಹದ್ದೇ ಗರಿಷ್ಠ ಬೆಳವಣಿಗೆಯ ಮ್ಯಾಜಿಕ್ ಮಾಡಲು ಕಂಪನಿ ಮುಂದಾಗಿದೆ.
ಆದರೆ ತ್ರೈಮಾಸಿಕ ಲೆಕ್ಕದಲ್ಲಿ ಇದು ಕಂಪನಿಯ ಗರಿಷ್ಠ ಮಾರಾಟವಲ್ಲ. ಕಳೆದ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆ 492,000 ಕಾರುಗಳನ್ನು ಮಾರಾಟ ಮಾಡಿತ್ತು. ಈ ಬಾರಿ ಇದಕ್ಕಿಂತ ಸ್ವಲ್ಪ ಕಡಿಮೆ ಸಂಖ್ಯೆಯ ಕಾರುಗಳ ಮಾರಾಟಕ್ಕೆ ಯೋಜನೆ ರೂಪಿಸಿದೆ.
ಉತ್ಪಾದನೆ ಹೆಚ್ಚಳ ಕಂಪನಿ ಪಾಲಿಗೆ ಸವಾಲಿನದ್ದಾಗಿದೆ. ಕಾರಣ ಈಗಾಗಲೇ ಸುಮಾರು 2,80,000 ಮುಂಗಡ ಕಾಯ್ದಿರಿಸುವಿಕೆಗಳು ಕಂಪನಿಯ ಕೈಯಲ್ಲಿವೆ. ಸೆಮಿಕಂಡಕ್ಟರ್ಗಳ ಕೊರತೆಯಿಂದ ಕಾರು ಡೆಲಿವರಿ 3-6 ತಿಂಗಳವರೆಗೆ ಮುಂದೂಡಿಕೆಯಾಗಿದೆ. ಈ ಕಾರುಗಳ ಜತೆಗೆ ಹೊಸ ಬುಕ್ಕಿಂಗ್ಗಳಿಗಾಗಿ ಕಾರುಗಳನ್ನೂ ಉತ್ಪಾದಿಸುವ ಸವಾಲು ಕಂಪನಿಯ ಮುಂದಿದೆ.
ಪೂರೈಕೆ ಇನ್ನೂ ಕುಂಠಿತವಾಗಿಯೇ ಮುಂದುವರಿದಿದ್ದು, ಬುಕ್ಕಿಂಗ್ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದರಿಂದ ಕಂಪನಿಯು ಭಾರೀ ಸವಾಲನ್ನು ಎದುರಿಸುತ್ತಿದ್ದು, ಕಂಪನಿಯ ಮಾರುಕಟ್ಟೆ ಪಾಲು ಕಳೆದ ಹಲವು ತಿಂಗಳುಗಳಿಂದ ಶೇ. 40ಕ್ಕಿಂತ ಕೆಳಗಿಳಿದಿದೆ. ಈ ಸ್ಥಾನವನ್ನು ಭಾರೀ ವೇಗದಲ್ಲಿ ಬೆಳೆಯುತ್ತಿರುವ ಟಾಟಾ ಮೋಟಾರ್ಸ್, ಮಹೀಂದ್ರಾ ಮೊದಲಾದ ಕಂಪನಿಗಳು ಆಕ್ರಮಿಸಿಕೊಂಡಿವೆ.
"ಉತ್ಪಾದನಾ ಪ್ರಮಾಣದ ವಿಷಯದಲ್ಲಿ ತಿಂಗಳಿನಿಂದ ತಿಂಗಳಿಗೆ ಸುಧಾರಣೆ ಕಂಡುಬಂದಿದ್ದರೂ, ನಾವು ಜಾಗರೂಕರಾಗಿದ್ದೇವೆ. ನಮ್ಮ ತಂಡಗಳು ಉತ್ಪಾದನಾ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ,” ಎಂದು ಮಾರುತಿ ಸುಜುಕಿ ವಕ್ತಾರರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಂಪನಿಯು ಖರೀದಿದಾರರ ಕಾಯುವಿಕೆ ಸಮಯವನ್ನು ಕಡಿತಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ಅನಿಶ್ಚಿತ ಸನ್ನಿವೇಶದ ಹಿನ್ನೆಲೆಯಲ್ಲಿ ಪೂರೈಕೆದಾರರಿಗೆ ಹೆಚ್ಚಿನ ಸಂಗ್ರಹವನ್ನು ಹೊಂದಿರುವಂತೆ ಕಂಪನಿ ಸೂಚಿಸಿದ್ದು, ವರ್ಷದ ಕೊನೆಯ ತ್ರೈಮಾಸಿಕದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯದ ಶೇ. 85-90ರಷ್ಟು ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ.
ಸರಬರಾಜುಗಳಲ್ಲಿನ ಸುಧಾರಣೆ ಮತ್ತು ಕಂಪನಿಯು ಸಾಲಾಗಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಹೊಸ ಮಾದರಿಯ ಕಾರುಗಳೊಂದಿಗೆ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಪ್ರಮಾಣದ ಕಾರುಗಳ ಮಾರಾಟ ಮಾಡುವುದನ್ನು ಕಂಪನಿ ಎದುರು ನೋಡುತ್ತಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಮಾರುತಿ ಸುಜುಕಿ 10.2 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿದ್ದು, ತಿಂಗಳಿಗೆ 1,26,000 ವಾಹನಗಳಂತೆ ಉತ್ಪಾದನೆ ಮಾಡಿದೆ. ಈಗಿನ ತ್ರೈಮಾಸಿಕವನ್ನೇ ತೆಗೆದುಕೊಳ್ಳುವುದಾದರೆ ಅಕ್ಟೋಬರ್-ನವೆಂಬರ್ನಲ್ಲಿ 2,80,000 ವಾಹನಗಳನ್ನು ಕಂಪನಿ ಉತ್ಪಾದಿಸಿದ್ದು, ಡಿಸೆಂಬರ್ನಲ್ಲಿ 1,50,000 ವಾಹನಗಳ ಉತ್ಪಾದನೆಗೆ ಯತ್ನಿಸುತ್ತಿದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ '' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್ಸ್ಕ್ರೈಬ್ ಆಗಿ.