ಕೋರಮಂಗಲ ಐಷಾರಾಮಿ ಕಾರು ಅಪಘಾತ: 7 ಮಂದಿಯ ಸಾವಿಗೆ ಕಾರಣವಾಯ್ತ ನೀರಿನ ಬಾಟಲ್‌?

ಮಧ್ಯರಾತ್ರಿವರೆಗೂ ಕೋರಮಂಗಲದಲ್ಲೆಲ್ಲ ಕಾರಿನಲ್ಲೇ ಓಡಾಡಿದ ಏಳು ಮಂದಿ ಮಧ್ಯರಾತ್ರಿ ವಾಪಸ್‌ ಬರುವಾಗ ಅತಿವೇಗವಾಗಿ ಕಾರನ್ನು ಚಲಾಯಿಸಲಾಗಿದೆ. ಈ ವೇಳೆ ಚಾಲಕನು ನಿದ್ರೆ ಮಂಪರಿನಲ್ಲಿದ್ದು, ಅದೇ ಸಮಯದಲ್ಲಿ ಕೈ ತಾಗಿ ನೀರಿನ ಬಾಟಲಿ ಕೆಳಗೆ ಬಿದ್ದು ಬ್ರೇಕ್‌ ಕೆಳಗಡೆ ಸಿಲುಕಿದೆ. ಮುಂದೇನಾಯ್ತು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಕೋರಮಂಗಲ ಐಷಾರಾಮಿ ಕಾರು ಅಪಘಾತ: 7 ಮಂದಿಯ ಸಾವಿಗೆ ಕಾರಣವಾಯ್ತ ನೀರಿನ ಬಾಟಲ್‌?
Linkup
ಬೆಂಗಳೂರು: ಮಧ್ಯ ರಾತ್ರಿಯಲ್ಲಿ ಆಡಿ-ಕ್ಯೂ3 ಕಾರಿನಲ್ಲಿ ಜಾಲಿ ರೈಡ್‌ ಹೋಗಿದ್ದವರ ಕಾರು ಅಪಘಾತವಾಗಲು ಕಾರಣವೇನು ಎಂಬುದೇ ಇನ್ನೂ ನಿಗೂಢವಾಗಿದ್ದು, ಅದರ ಪತ್ತೆಗೆ ಆಡುಗೋಡಿ ಸಂಚಾರ ಪೊಲೀಸರು ಅಪಘಾತದಲ್ಲಿ ಮೃತಪಟ್ಟವರ ಮೊಬೈಲ್‌ ನೆಟ್‌ವರ್ಕ್ ಬೆನ್ನತ್ತಿದ್ದಾರೆ. ಅಪಘಾತಕ್ಕೆ ಕಾರು ಚಲಾಯಿಸುತ್ತಿದ್ದ ಕರುಣಾ ಸಾಗರ್‌ ನಿರ್ಲಕ್ಷ್ಯವೇ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದರೂ ವೈಜ್ಞಾನಿಕ ಕಾರಣ ತಿಳಿಯಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ''ಅಪಘಾತಕ್ಕೂ ಮುನ್ನ ಈ ಏಳು ಮಂದಿ ಯಾವುದಾದರೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರಾ? ಬಿಟ್ಟು ಹೊರವಲಯಕ್ಕೆ ತೆರಳಿದ್ದರಾ ಎಂಬುದರ ಬಗ್ಗೆ ತಿಳಿಯಲು ಮೊಬೈಲ್‌ ನೆಟ್‌ವರ್ಕ್ ಟ್ರೇಸ್‌ ಮಾಡಲಾಗುತ್ತಿದೆ. ತನಿಖೆ ಚುರುಕಾಗಿದ್ದು, ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು'' ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು. ಮದ್ಯ ಸೇವನೆ ಅಥವಾ ನೀರಿನ ಬಾಟಲ್‌ ಕಾರಣವೇ? ಸೋಮವಾರ ರಾತ್ರಿ 8.30ರ ಸಮಯದಲ್ಲಿ ಬಿಂದು ಹಾಗೂ ಇಷಿತಾ ಬಿಸ್ವಾಸ್‌ ಪಿಜಿಯಿಂದ ಹೊರಬಂದು ಅಂಗಡಿಯೊಂದಕ್ಕೆ ತೆರಳುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಬ್ಯಾಗ್‌ವೊಂದರಲ್ಲಿ ಬಾಟಲಿ ರೀತಿ ಇರುವ ವಸ್ತುಗಳನ್ನು ತುಂಬಿಕೊಂಡು ಹೊರಬರುತ್ತಿರುವ ದೃಶ್ಯವೂ ಸೆರೆಯಾಗಿದೆ. ಹೀಗಾಗಿ, ಮದ್ಯ ಮಳಿಗೆಯಲ್ಲಿಮದ್ಯ ಖರೀದಿಸಿ ಕಾರಿನಲ್ಲಿಯೇ ಪಾರ್ಟಿ ಮಾಡಿದ್ದರೆ ಎಂಬ ಅನುಮಾನವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಮಧ್ಯರಾತ್ರಿವರೆಗೂ ಕೋರಮಂಗಲದಲ್ಲೆಲ್ಲ ಕಾರಿನಲ್ಲೇ ಓಡಾಡಿದ ಏಳು ಮಂದಿ ಮಧ್ಯರಾತ್ರಿ ವಾಪಸ್‌ ಬರುವಾಗ ಅತಿವೇಗವಾಗಿ ಕಾರನ್ನು ಚಲಾಯಿಸಲಾಗಿದೆ. ಈ ವೇಳೆ ಚಾಲಕನು ನಿದ್ರೆ ಮಂಪರಿನಲ್ಲಿದ್ದು, ಅದೇ ಸಮಯದಲ್ಲಿ ಕೈ ತಾಗಿ ನೀರಿನ ಬಾಟಲಿ ಕೆಳಗೆ ಬಿದ್ದು ಬ್ರೇಕ್‌ ಕೆಳಗಡೆ ಸಿಲುಕಿದೆ. ಹೀಗಾಗಿ, ಬ್ರೇಕ್‌ ಹಾಕಲಾಗದೆ ಅಪಘಾತ ಸಂಭವಿಸಿದೆ ಎಂಬ ವಾದವೂ ಇದೆ. ಆದರೆ, ಕರುಣಾ ಸಾಗರ್‌ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಅಪಘಾತಕ್ಕೆ ನೈಜ ಕಾರಣ ತಿಳಿದು ಬರಲಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ವಿವರ! ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಸುಮಾರು 1:30ರ ವೇಳೆಗೆ ಐಷಾರಾಮಿ ಕಾರೊಂದು ಫುಟ್ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿದೆ. KA 03 MY 6666 ಈ ನಂಬರಿನ ಐಷಾರಾಮಿ ಕಾರು ಇದಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂದಿನ ಸೀಟ್‌ ತುಂಬಾ ರಕ್ತದ ಕಲೆಗಳಿದ್ದು ಕಾರಿನ ಎಡಭಾಗದ 2 ಟೈರ್‌ ಸಂಪೂರ್ಣ ಪೀಸ್‌ಪೀಸ್‌ ಆಗಿದೆ. ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ಅವಘಡ ಸಂಭವಿಸಿತ್ತು. 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ.ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ. 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.ಅಪಘಾತಕ್ಕೆ ಅತಿ ವೇಗವೇ ಕಾರಣ. ನಿರ್ಲಕ್ಷ್ಯ, ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಫುಟ್‌ಪಾತ್‌ ಹತ್ತಿ 2 ಬೊಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ. ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಎಲ್ಲಾ ಬೀದಿಗಳಲ್ಲಿ ನಿರ್ಜನವಾಗಿದ್ದ ಕಾರಣ ಚಾಲಕ ವೇಗವಾಗಿ ಓಡಿಸಿದ್ದಾನೆ. ಎಲ್ಲಿಗೆ ಹೋಗ್ತಿದ್ರು, ಎಲ್ಲಿಂದ ಬರ್ತಾ ಇದ್ರು ಎಂಬ ಬಗ್ಗೆ ತನಿಖೆಯಾಗುತ್ತಿದೆ ಎಂದಿದ್ದಾರೆ. ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದರು. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ ಎಂದು ರವಿಕಾಂತೇಗೌಡ ತಿಳಿಸಿದ್ದರು.