ಕನ್ನಡಿಗರ ಮನ ಗೆಲ್ಲಲು ಬರಲಿದೆ ‘ಪ್ರೀಮಿಯರ್ ಪದ್ಮಿನಿ-2’: ಕಥೆ ಕೇಳಿ ಥ್ರಿಲ್ ಆದ ಜಗ್ಗೇಶ್

ಕಾರ್‌ ಬ್ರಾಂಡ್‌ ಒಂದರ ಹೆಸರನ್ನಿಟ್ಟುಕೊಂಡು ವಿಶಿಷ್ಟ ಕಥೆ ಹಾಗೂ ನಿರೂಪಣೆಯಿಂದ ಜನಮನ ಸೆಳೆದ ಚಿತ್ರ ‘ಪ್ರೀಮಿಯರ್‌ ಪದ್ಮಿನಿ’. ಈಗ ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದ ಸೀಕ್ವೆಲ್‌ ಅನ್ನು ತೆರೆಗೆ ತರಲು ನಿರ್ದೇಶಕ ರಮೇಶ್‌ ಇಂದಿರಾ ಸಿದ್ಧತೆ ನಡೆಸಿದ್ದಾರೆ.

ಕನ್ನಡಿಗರ ಮನ ಗೆಲ್ಲಲು ಬರಲಿದೆ ‘ಪ್ರೀಮಿಯರ್ ಪದ್ಮಿನಿ-2’: ಕಥೆ ಕೇಳಿ ಥ್ರಿಲ್ ಆದ ಜಗ್ಗೇಶ್
Linkup
(ಪದ್ಮಾ ಶಿವಮೊಗ್ಗ) ಕಾರ್‌ ಬ್ರಾಂಡ್‌ ಒಂದರ ಹೆಸರನ್ನಿಟ್ಟುಕೊಂಡು ವಿಶಿಷ್ಟ ಕಥೆ ಹಾಗೂ ನಿರೂಪಣೆಯಿಂದ ಜನಮನ ಸೆಳೆದ ಚಿತ್ರ ‘ಪ್ರೀಮಿಯರ್‌ ಪದ್ಮಿನಿ’. ಈ ಚಿತ್ರದಲ್ಲಿ ಜಗ್ಗೇಶ್‌ ತಮ್ಮ ಎಂದಿನ ಇಮೇಜ್‌ಗೆ ಹೊರತಾದ ಪಾತ್ರದಲ್ಲಿ ನಟಿಸಿದ್ದರು. ಸುಧಾರಾಣಿ, ಮಧು, ಹಿತಾ ಚಂದ್ರಶೇಖರ್‌, ವಿವೇಕ್‌ ಸಿಂಹ, ಪ್ರಮೋದ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದ ಸೀಕ್ವೆಲ್‌ ಅನ್ನು ತೆರೆಗೆ ತರಲು ನಿರ್ದೇಶಕ ರಮೇಶ್‌ ಇಂದಿರಾ ಸಿದ್ಧತೆ ನಡೆಸಿದ್ದಾರೆ. ಚಿತ್ರದ ಕಥೆ ಮತ್ತು ಸ್ಕ್ರಿಪ್ಟ್ ರೆಡಿಯಾಗಿದ್ದು ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ. ‘ಈಗ ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಜಗ್ಗೇಶ್‌ ಮತ್ತು ಪ್ರಮೋದ್‌ ಇಬ್ಬರೂ ಈ ಸಿನಿಮಾದಲ್ಲಿ ಇರ್ತಾರೆ ಎಂದು ಸದ್ಯಕ್ಕೆ ಹೇಳಬಹುದು. ಉಳಿದ ನಟರ ಬಗ್ಗೆ ನಾನಿನ್ನೂ ಪ್ಲಾನ್‌ ಮಾಡಿಲ್ಲ. ಕಳೆದೆರಡು ವರ್ಷಗಳಿಂದ ಕೊರೊನಾ­­ದಿಂದಾಗಿ ತೆರೆಗೆ ಬರಲು ಕಾದಿರುವ ಸಿನಿಮಾ­ಗಳ ಸಾಲು ಉದ್ದ ಇದೆ. ಇವೆಲ್ಲಾ ರಿಲೀಸ್‌ ಆಗಲಿ, ನಂತರ ಚಿತ್ರ ಮಾಡೋಣ ಎಂದುಕೊಂಡಿ­ದ್ದೇವೆ. ಮುಂದಿನ ಬೇಸಿಗೆ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ’ ಎಂದಿದ್ದಾರೆ ರಮೇಶ್‌ ಇಂದಿರಾ. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿ ಸಂಬಂಧಗಳ ಸೂಕ್ಷ್ಮತೆ ಬಗ್ಗೆಯೂ ಹೇಳಲಾಗಿತ್ತು. ಪ್ರಮೋದ್‌ ಜಗ್ಗೇಶ್‌ ಅವರ ಕಾರ್‌ ಡ್ರೈವರ್‌ ಪಾತ್ರದಲ್ಲಿ ನಟಿಸಿದ್ದರು. ಸೀಕ್ವೆಲ್‌ನಲ್ಲಿ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಎರಡು ಪಾತ್ರಗಳು ಪ್ರಮುಖವಾಗಿರಲಿವೆ. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿ ಲವ್‌, ಎಮೋಷನ್ಸ್‌ ಇದ್ದವು. ಸೀಕ್ವೆಲ್‌ನಲ್ಲಿ ಕೂಡ ಲವ್‌, ಫನ್‌ ಇರಲಿವೆ. ಒಂದೂವರೆ ವರ್ಷಗಳಿಂದ ಜನ ನೊಂದಿದ್ದಾರೆ, ಭಾರ ಹೃದಯದಲ್ಲಿದ್ದಾರೆ. ಖಾಲಿ ಜೇಬಿನಿಂದ ಕಷ್ಟದಲ್ಲಿದ್ದಾರೆ. ಅವನ್ನೆಲ್ಲಾ ಸ್ವಲ್ಪ ಕಾಲ ಮರೆತು ಎಂಜಾಯ್‌ ಮಾಡಬೇಕು, ನಗಬೇಕು, ನಗಬೇಕು.. ಅಷ್ಟೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾ ಕಥೆ ಹೇಳಲಿದ್ದೇವೆ. ಈ ಚಿತ್ರದಲ್ಲಿ ಕೂಡ ಸಂಬಂಧಗಳ ಬಗ್ಗೆ ಇರಲಿದೆ. ಮನುಷ್ಯನ ಮನಸ್ಸು ಹೇಗೆ ತಾಕಲಾಟಕ್ಕೆ ಒಳಗಾಗುತ್ತೆ, ಅದನ್ನು ಹೇಗೆ ನಿಭಾಯಿಸಬೇಕಾಗುತ್ತೆ ಎನ್ನುವುದನ್ನು ಹೇಳಲಿದ್ದೇವೆ’ ಎಂದಿದ್ದಾರೆ ನಿರ್ದೇಶಕ ರಮೇಶ್‌. ‘ಪ್ರೀಮಿಯರ್‌ ಪದ್ಮಿನಿ’ ನಿರ್ಮಿಸಿದ ನಿರ್ಮಾಣ ಸಂಸ್ಥೆಯೇ ಇದನ್ನೂ ನಿರ್ಮಾಣ ಮಾಡಲಿದೆ. ಕೆಲ ದಿನಗಳ ಹಿಂದೆ ಜಗ್ಗೇಶ್‌ ಮತ್ತು ಪ್ರಮೋದ್‌ರನ್ನು ಭೇಟಿ ಮಾಡಿ ಚಿತ್ರಕಥೆ ಹೇಳಿದ್ದಾರೆ ರಮೇಶ್‌. ‘ಪ್ರೀಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್‌ ವಿಭಿನ್ನವಾದ ಪಾತ್ರ ನಿಭಾಯಿಸಿದ್ದರು. ಸೀಕ್ವೆಲ್‌ನಲ್ಲೂ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಪೋಷಣೆಯಾಗುತ್ತಾ ಹೋಗುತ್ತದೆ. ಸೀಕ್ವೆಲ್‌ ಚಿತ್ರದ ಸ್ಕ್ರಿಪ್ಟ್ ಕೇಳಿ ಅವರು ಬಹಳ ಖುಷಿಯಾದ್ರು. ಇನ್ನೂ ಇದು ಪ್ರಾರಂಭಿಕ ಹಂತದ ಮಾತುಕತೆ’ ಎಂದಿದ್ದಾರೆ ರಮೇಶ್‌. ಜಗ್ಗೇಶ್‌ ಕಥೆ ಕೇಳಿ ಥ್ರಿಲ್‌ ಆಗಿ, ಟ್ವೀಟ್‌ ಕೂಡ ಮಾಡಿದ್ದಾರೆ. ‘ನಿರ್ದೇಶಕ ರಮೇಶ್‌ ಇಂದಿರಾ ಅವರ ಅದ್ಭುತ ಕಥೆ ಕೇಳಿದೆ. ಮತ್ತೊಂದು ಚಿತ್ರ ಕನ್ನಡಿಗರ ಮನ ಗೆಲ್ಲಲು ಸರದಿಯಲ್ಲಿ.. ಇಂಥ ಅದ್ಭುತ ಕೃತಿ ಬರೆದ ನಿರ್ದೇಶಕರಿಗೆ ಧನ್ಯವಾದ..’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.