ಕೇಂದ್ರದ ಬಳಿಕ ರಾಜ್ಯದಿಂದಲೂ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ನಿರ್ಧಾರ; ದೀಪಾವಳಿಗೆ ಬಂಪರ್‌ ಗಿಫ್ಟ್‌

ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 5 ರೂ. ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿತ್ತು. ಇದೀಗ ರಾಜ್ಯ ಸರಕಾರವೂ ಎರಡೂ ಇಂಧನಗಳ ಮೇಲೆ ಲೀಟರ್‌ಗೆ 7 ರೂ. ದರ ಕಡಿಮೆ ಮಾಡಲು ನಿರ್ಧರಿಸಿದೆ.

ಕೇಂದ್ರದ ಬಳಿಕ ರಾಜ್ಯದಿಂದಲೂ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ನಿರ್ಧಾರ; ದೀಪಾವಳಿಗೆ ಬಂಪರ್‌ ಗಿಫ್ಟ್‌
Linkup
ಬೆಂಗಳೂರು: ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಿಗೆ ರಾಜ್ಯ ಸರಕಾರವೂ ಇಂಧನದ ಬೆಲೆ ಇಳಿಕೆ ಮಾಡಲು ತೀರ್ಮಾನಿಸಿದೆ. ಇದರಿಂದ ಜನತೆಗೆ ದೀಪಾವಳಿಗೂ ಮೊದಲು ಭರ್ಜರಿ ಗಿಫ್ಟ್‌ ಸಿಕ್ಕಂತಾಗಿದೆ. ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 5 ರೂ., ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿತ್ತು. ಇದಾದ ಬೆನ್ನಿಗೆ ರಾಜ್ಯ ಸರಕಾರಗಳಿಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿತಗೊಳಿಸುವಂತೆ ಕೇಂದ್ರ ಸರಕಾರ ಆಗ್ರಹಿಸಿತ್ತು. ಇದೀಗ ರಾಜ್ಯ ಸರಕಾರವೂ ಡೀಸೆಲ್‌ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ಟೀಟ್ ಮೂಲಕ ತಿಳಿಸಿದ್ದಾರೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು, “ಕರ್ನಾಟಕ ರಾಜ್ಯ ಸರಕಾರವು ಡೀಸೆಲ್‌ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ಧರಿಸಿದೆ. ಈ ನಮ್ಮ ನಿರ್ಧಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2,100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ," ಎಂದು ಹೇಳಿದ್ದಾರೆ. ಈ ದರ ಕಡಿತದ ಬಳಿಕ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ಅಂದಾಜು 95.50 ರೂ. ಹಾಗೂ ಡೀಸೆಲ್‌ ಬೆಲೆ ಲೀಟರ್‌ಗೆ ಅಂದಾಜು 81.50 ರೂ ಆಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ಸದ್ಯ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 113.93 ರೂ. ದರವಿದೆ. ಲೀಟರ್‌ಗೆ 104.50 ರೂ. ಇದೆ. “ರಾಜ್ಯ ಸರಕಾರದ ಈ ನಿರ್ಧಾರ ನಾಳೆ (ಗುರುವಾರ) ಸಾಯಂಕಾಲದಿಂದ ಅನ್ವಯವಾಗುವುದು. ಇದು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ. ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು,” ಎಂದು ಮುಖ್ಯಮಂತ್ರಿ ಟ್ಟೀಟ್‌ ಮಾಡಿದ್ದಾರೆ. ಜತೆಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಡೀಸಲ್ ಮೇಲೆ 10 ರೂ. ಹಾಗೂ ಪೆಟ್ರೋಲ್ ಮೇಲೆ 5 ರೂ. ಅಬಕಾರಿ ಸುಂಕ ಕಡಿಮೆ ಗೊಳಿಸಿದ್ದು ಸ್ವಾಗತಾರ್ಹ. ಜನರಿಗೆ ದೀಪಾವಳಿಯ ಉಡುಗೊರೆ ಕೊಟ್ಟಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.