ಏಪ್ರಿಲ್‌-ಜೂನ್‌ ತ್ರೈಮಾಸಿದಲ್ಲಿ ಭರ್ಜರಿ 20.1% ಏರಿಕೆ ಕಂಡ ಜಿಡಿಪಿ

2021-22ರ ಏಪ್ರಿಲ್‌ - ಜೂನ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ದಾಖಲೆಯ ಶೇ. 20.1ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ದೇಶದ ಜಿಡಿಪಿ ದಾಖಲೆಯ ಕುಸಿತ ಕಂಡಿತ್ತು.

ಏಪ್ರಿಲ್‌-ಜೂನ್‌ ತ್ರೈಮಾಸಿದಲ್ಲಿ ಭರ್ಜರಿ 20.1% ಏರಿಕೆ ಕಂಡ ಜಿಡಿಪಿ
Linkup
ಹೊಸದಿಲ್ಲಿ: 2021-22ರ ಏಪ್ರಿಲ್‌ - ಜೂನ್‌ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ದಾಖಲೆಯ ಶೇ. 20.1ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ದೇಶದ ದಾಖಲೆಯ ಕುಸಿತ ಕಂಡಿತ್ತು. ಇದಕ್ಕೆ ಹೋಲಿಸಿದರೆ ಗಮನಾರ್ಹ ಪ್ರಮಾಣದಲ್ಲಿ ಜಿಡಿಪಿ ಬೆಳವಣಿಗೆ ದಾಖಲಿಸಿದೆ. 2020-21ರ ಏಪ್ರಿಲ್‌ -ಜೂನ್‌ ತ್ರೈಮಾಸಿಕದಲ್ಲಿ ಕಾರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಒಂದೇ ಬಾರಿ ಶೇಕಡಾ (ಮೈನಸ್‌) 24.4ರಷ್ಟು ಕುಸಿತವಾಗಿತ್ತು. ಬಳಿಕ ನಿಧಾನವಾಗಿ ಆರ್ಥಿಕತೆ ಚೇತರಿಸಿಕೊಂಡಿತ್ತು. ಇದೀಗ ಸತತ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಧನಾತ್ಮಕವಾಗಿ ಮುಂದುವರಿದಿದೆ. 2020 - 21ರ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಅದೇ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಮತ್ತಷ್ಟು ಏರಿಕೆಯಾಗಿ ಶೇ. 1.6ಕ್ಕೆ ಹೆಚ್ಚಳವಾಗಿತ್ತು. ಇದೀಗ ಮತ್ತಷ್ಟು ವೇಗದಲ್ಲಿ ಜಿಡಿಪಿ ಬೆಳವಣಿಗೆ ಕಂಡಿದೆ. ಈ ಮೂಲಕ 2020-21ರ ಮೊದಲೆರಡು ತ್ರೈಮಾಸಿಕದಲ್ಲಿ ಕಂಡು ಕೇಳರಿಯದ ಕುಸಿತ ಕಂಡಿದ್ದ ದೇಶದ ಆರ್ಥಿಕತೆ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವುದು ಸ್ಪಷ್ಟವಾಗಿದೆ. 2020-21ರ ಡಿಸೆಂಬರ್‌ ತ್ರೈಮಾಸಿಕದ ಹೊತ್ತಿಗೆ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿದ ಪರಿಣಾಮ ದೇಶದ ಆರ್ಥಿಕತೆ ಚೇತರಿಕೆ ಕಾಣಲು ಆರಂಭಿಸಿತ್ತು. ಜತೆಗೆ ಹಬ್ಬದ ಖರೀದಿಗಳೂ ಶೇ. 0.4ರಷ್ಟು ಬೆಳವಣಿಗೆ ದಾಖಲಿಸಲು ಕೊಡುಗೆ ನೀಡಿದ್ದವು. ಇದಕ್ಕೂ ಮೊದಲು ಮೊದಲ ತ್ರೈಮಾಸಿಕದಲ್ಲಿ ಶೇ. (ಮೈನಸ್‌) 23.9 ಹಾಗೂ ಎರಡನೇ ತ್ರೈಮಾಸಿಕದಲ್ಲಿ ಶೇ. (ಮೈನಸ್‌) 7.5 ದರದಲ್ಲಿ ಜಿಡಿಪಿ ಕುಸಿತ ಕಂಡಿತ್ತು. ದೇಶದ ಆರ್ಥಿಕತೆಯ ಚೇತರಿಕೆಯನ್ನು ಅಂಕಿ ಅಂಶಗಳು ಸಾಬೀತುಗೊಳಿಸಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್‌ ಪ್ರತಿಕ್ರಿಯಿಸಿದ್ದಾರೆ. ‘ ಸರಕಾರದ ರಚನಾತ್ಮಕ ಸುಧಾರಣಾ ಕ್ರಮಗಳು, ಬಂಡವಾಳ ವೆಚ್ಚ ಸಕಾರಾತ್ಮಕ ಪ್ರಭಾವ ಬೀರಿದೆ. ವಸೂಲಾಗದ ಸಾಲದ ನಿರ್ವಹಣೆಯಲ್ಲಿ ಬ್ಯಾಂಕ್‌ಗಳು ಪ್ರಗತಿ ಸಾಧಿಸಿವೆ’ ಎಂದವರು ಹೇಳಿದ್ದಾರೆ. "ನಿರೀಕ್ಷೆಯಂತೆ ಜಿಡಿಪಿ ಚೇತರಿಸುತ್ತಿರುವುದು ಸ್ಪಷ್ಟವಾಗಿದೆ. ಕೃಷಿ ಕ್ಷೇತ್ರ ಕಳೆದ ಸಲದಂತೆ ಪ್ರಗತಿ ದಾಖಲಿಸಿದೆ. ಮುಂಬರುವ ತ್ರೈಮಾಸಿಕದಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷಿಸಬಹುದು. ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಉತ್ಪಾದನೆ ಮತ್ತು ಕೃಷಿ ವಲಯದ ಪ್ರಗತಿ ಗಮನಾರ್ಹ" ಎಂದು ಬೆಂಗಳೂರಿನ ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಯೂನಿವರ್ಸಿಟಿಯ ಕುಲಪತಿ ಎನ್‌.ಆರ್‌.ಭಾನುಮೂರ್ತಿ ತಿಳಿಸಿದ್ದಾರೆ. ರಾಜ್ಯಗಳಲ್ಲಿ ಲಾಕ್‌ಡೌನ್‌ಗಳಿದ್ದರೂ, ಕಳೆದ ವರ್ಷದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಷ್ಟು ತೀವ್ರ ಪ್ರಭಾವವನ್ನು ಜಿಡಿಪಿ ಬೆಳವಣಿಗೆ ಮೇಲೆ ಬೀರಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕಳೆದ ಜೂನ್‌ನಿಂದ ರಿಟೇಲ್‌, ಆಟೋಮೊಬೈಲ್‌, ಕೃಷಿ ಉತ್ಪಾದನೆ, ನಿರ್ಮಾಣ, ರಫ್ತು ವಲಯ ಚೇತರಿಸಿತ್ತು. ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಿತ್ತು. ಆರ್‌ಬಿಐ ಅಂದಾಜಿಸಿದ್ದಕ್ಕಿಂತ ಹೆಚ್ಚು ಬೆಳವಣಿಗೆ ದಾಖಲಿಸಿದ ಜಿಡಿಪಿ ಆರಂಭದಲ್ಲಿ 2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ. 26.2ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿತ್ತು. ನಂತರ ಶೇ. 18.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ ಇದೀಗ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆ ದಾಖಲಿಸಿದೆ. ಇದೇ ವೇಳೆ ಆರ್‌ಬಿಐ 2021-22ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.5ರಷ್ಟು ಇರಲಿದೆ ಎಂದು ಹೇಳಿದೆ. ಈ ಹಿಂದೆ ಶೇ. 10.5ರಷ್ಟು ಇರಲಿದೆ ಎಂದು ಹೇಳಿತ್ತು. ನಂತರ ತನ್ನ ಜಿಡಿಪಿ ಮುನ್ನೋಟವನ್ನು ಇಳಿಕೆ ಮಾಡಿತ್ತು.