ಕಠಿಣ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ಬರುವುದೇ ಇಲ್ಲ: ಕೇಂದ್ರ ಸರ್ಕಾರ

ಭಾರತದಲ್ಲಿ ಮೊದಲೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ ಮೂರನೇ ಅಲೆಯನ್ನು ಬಾರದಂತೆ ತಡೆಯುವ ಅವಕಾಶಗಳಿವೆ ಎಂದು ಕೇಂದ್ರ ಸರ್ಕಾರದ ಹಿರಿಯ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ತಿಳಿಸಿದ್ದಾರೆ.

ಕಠಿಣ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ಬರುವುದೇ ಇಲ್ಲ: ಕೇಂದ್ರ ಸರ್ಕಾರ
Linkup
ಹೊಸದಿಲ್ಲಿ: ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಕೊರೊನಾ ವೈರಸ್‌ನ ಮಾರಕ ಮೂರನೇ ಅಲೆಯನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಬಹುದು ಎಂದು ಸರ್ಕಾರದ ಹಿರಿಯ ವೈಜ್ಞಾನಿಕ ಸಲಹೆಗಾರರೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಎರಡನೆಯ ಅಲೆಯ ಬೆನ್ನಲ್ಲೇ ಕೋವಿಡ್ ಬರಲಿದೆ. ಇದು ಮತ್ತಷ್ಟು ಅಪಾಯಕಾರಿಯಾಗಿರಲಿದ್ದು, ಮಕ್ಕಳು ಇದರ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಅವರು ಎರಡು ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿದ್ದರು. 'ನಾವು ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಎಲ್ಲ ಕಡೆಗಳಲ್ಲಿಯೂ ಅಥವಾ ಯಾವ ಜಾಗದಲ್ಲಿಯೂ ಮೂರನೇ ಅಲೆ ಸಂಭವಿಸುವುದಿಲ್ಲ. ಸ್ಥಳೀಯ ಮಟ್ಟದಲ್ಲಿ, ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ನಗರಗಳಲ್ಲಿ- ಹೀಗೆ ಎಲ್ಲಾ ಕಡೆ ಎಷ್ಟು ಪರಿಣಾಮಕಾರಿಯಾಗಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎನ್ನುವುದನ್ನು ಇದು ಅವಲಂಬಿಸಿದೆ' ಎಂದು ಸಲಹೆಗಾರ ಡಾ. ವಿಜಯ್ ರಾಘವನ್ ತಿಳಿಸಿದ್ದಾರೆ. 'ಈಗ ವೈರಸ್ ಹರಡುತ್ತಿರುವ ಅಧಿಕ ಮಟ್ಟವನ್ನು ಗಮನಿಸಿದರೆ ಕೊರೊನಾ ವೈರಸ್‌ನ ಮೂರನೇ ಅಲೆ ಅನಿವಾರ್ಯ. ಆದರೆ ಮೂರನೇ ಹಂತವು ಯಾವಾಗ ಸಂಭವಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗದು' ಎಂದು ಅವರು ಬುಧವಾರ ಹೇಳಿದ್ದರು. ಭಾರತದಲ್ಲಿನ ಡಬಲ್ ರೂಪಾಂತರದ ಕಾರಣದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವಂತಿದೆ. ಬ್ರಿಟನ್ ರೂಪಾಂತರದ ಹರಡುವಿಕೆ ಕಡಿಮೆಯಾಗಿದೆ. ಹೆಚ್ಚು ಅಪಾಯಕಾರಿಯಾಗಿ ಹರಡುತ್ತಿರುವ ಹೊಸ ತಳಿಗಳನ್ನು ನಿಯಂತ್ರಿಸಲು ಲಸಿಕೆಗಳ ಉನ್ನತೀಕರಣ ಅಗತ್ಯವಿದೆ ಎಂದು ಅವರು ತಿಳಿಸಿದ್ದರು. ಭಾರತದಲ್ಲಿ ಶುಕ್ರವಾರ 4,14,188 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ 3,915 ಕೋವಿಡ್ ಸಾವುಗಳು ವರದಿಯಾಗಿವೆ.