![](https://vijaykarnataka.com/photo/87102108/photo-87102108.jpg)
ಹೊಸದಿಲ್ಲಿ: ಬಲವಂತದ ಮದುವೆಗಾಗಿ ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಸುಖಾಂತ್ಯ ಕಂಡಿದೆ. ಅಪಹೃತ ಬಾಲಕಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 14ರಂದು ದೆಹಲಿ ಮೂಲದ 15 ವರ್ಷದ ಬಾಲಕಿಯನ್ನು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಲಾಗಿತ್ತು. ರಾಜಸ್ಥಾನ ಮೂಲದ ಗೋಪಾಲ್ ಲಾಲ್ ಎಂಬಾತ ತನ್ನ ಅಳಿಯನೊಂದಿಗೆ ಈ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ್ದ.
ದೆಹಲಿಯಿಂದ ಬಾಲಕಿಯನ್ನು ಅಪಹರಿಸಿ ಆಕೆಯನ್ನು ಆಗ್ರಾದ ಗುಪ್ತ ಸ್ಥಳವೊಂದರಲ್ಲಿ ಇರಿಸಲಾಗಿತ್ತು. ಅಲ್ಲಿ ಅಕೆಯ ಮೇಲೆ ದೈಹಿಕ ಹಲ್ಲೆ ಮಾಡಲಾಗಿದ್ದು, ಲೈಂಗಿಕವಾಗಿಯೂ ಶೋಷಿಸಲಾಗಿತ್ತು. ಬಾಲಕಿಯನ್ನು ಆಗ್ರಾದಿಂದ ನೇರವಾಗಿ ರಾಜಸ್ಥಾನಕ್ಕೆ ಕರೆದೊಯ್ದ ಪಾಪಿಗಳು, ಅಲ್ಲಿ ಗೋಪಾಲ್ ಲಾಲ್ಗೆ ಆಕೆಯನ್ನು ಕೇವಲ 60,000 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿತ್ತು.
ರಾಜಸ್ಥಾನದ ಸಿಕರ್ನಲ್ಲಿ ಆಕೆಯನ್ನು ಬಂಧನದಲ್ಲಿರಿಸಲಾಗಿತ್ತು. ಅಲ್ಲಿಯೂ ಕೂಡ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ಬಾಲಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ದೆಹಲಿಯ ಕ್ರೈಂಬ್ರಾಂಚ್ ವಿಭಾಗದ ಪೊಲೀಸರು ರಾಜಸ್ಥಾನದ ಸಿಕರ್ಗೆ ತೆರಳಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಮೊದಲು ಗೋಪಾಲ್ ಲಾಲ್ನನ್ನು ವಶಕ್ಕೆ ಪಡೆದ ಪೊಲೀಸರು, ಬಾಲಕಿಯನ್ನು ಇರಿಸಲಾಗಿದ್ದ ಕೋಣೆಯ ಬಾಗಿಲು ತೆರೆದು ಪ್ರವೇಶಿಸಿದಾಗ ಬಾಲಕಿ ಅಳುತ್ತಾ ಪೊಲೀಸರನ್ನು ಬಿಗಿದಪ್ಪಿಕೊಂಡಳು. ಗೋಪಾಲ್ ಲಾಲ್ ತನ್ನ ಅಳಿಯನೊಂದಿಗೆ ಬಾಲಕಿಯ ಮದುವೆಯಾಗಿದೆ ಎಂದು ದಾಖಲೆ ತೋರಿಸಿದನಾದರೂ, ಬಲವಂತದ ಮದುವೆ ಎಂಬ ಶಂಕೆಯ ಆಧಾರದ ಮೇಲೆ ಪೊಲೀಸರು ಗೋಪಾಲ್ ಲಾಲ್ನ ವಾದವನ್ನು ತಳ್ಳಿ ಹಾಕಿದ್ದಾರೆ.
ಸದ್ಯ ಬಾಲಕಿಯನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಲಾಲ್, ನೀರಜ್ ಸೋಂಕರ್ ಹಾಗೂ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.