ಹಾಡಹಗಲೇ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ: ಅಡ್ಡ ಬಂದ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ

ಮುಂಬಯಿಯ ದಹಿಸಾರ್ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಬುಧವಾರ ಹಾಡಹಗಲೇ ದರೋಡೆ ನಡೆದಿದೆ. ತಮ್ಮನ್ನು ತಡೆದ ನೌಕರನೊಬ್ಬನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು, 2.5 ಲಕ್ಷ ರೂ ದೋಚಿದ್ದಾರೆ. ಘಟನೆ ಸಂಬಂಧ 16 ವರ್ಷದ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಹಾಡಹಗಲೇ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ: ಅಡ್ಡ ಬಂದ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ
Linkup
ಮುಂಬಯಿ: ಬ್ಯಾಂಕ್‌ಗೆ ನುಸುಳಿದ ಮುಸುಕುಧಾರಿ ವ್ಯಕ್ತಿ ಹಾಡಹಗಲೇ ಮಾಡಿದ ಘಟನೆ ಮಹಾರಾಷ್ಟ್ರದ ದಹಿಸಾರ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ದರೋಡೆಗೆ ಬಂದ ದುಷ್ಕರ್ಮಿಗಳು 25 ವರ್ಷದ ಉದ್ಯೋಗಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ರಾಜ್ಯವನ್ನು ಬೆಚ್ಚಿಬೀಳಿಸಿದೆ. ನಗರದ ಭಾರತೀಯ ಸ್ಟೇಟ್‌ ಬ್ಯಾಂಕ್ () ಶಾಖೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಮಧ್ಯಾಹ್ನ 3.22ರ ಸುಮಾರಿಗೆ ತಮ್ಮ ಮೂಗು ಹಾಗೂ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಂಡ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಬ್ಯಾಂಕ್ ಪ್ರವೇಶಿಸುವುದನ್ನು ಬ್ಯಾಂಕ್ ಹೊರಗೆ ಕುಳಿತಿದ್ದ ಸಂದೇಶ್ ಗೊಮಾರೆ ಅವರು ನೋಡಿದ್ದರು. ಸಂದೇಶ್ ಅವರು ಬಾಹ್ಯ ಸಂಸ್ಥೆಯೊಂದರ ಮೂಲಕ ಬ್ಯಾಂಕ್‌ನ ಹೊರಗುತ್ತಿಗೆ ನೌಕರರಾಗಿ ಒಪ್ಪಂದ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಎಂಎಚ್‌ಬಿ ಕಾಲೋನಿ ಪೊಲೀಸರು ತಿಳಿಸಿದ್ದಾರೆ. ಇಬ್ಬರ ಚಲನಚಲನಗಳ ಬಗ್ಗೆ ಅನುಮಾನಗೊಂಡ ಸಂದೇಶ್, ಅವರನ್ನು ತಡೆದು ನಿಲ್ಲಿಸಿ ಗುರುತಿನ ಚೀಟಿ ತೋರಿಸುವಂತೆ ಪ್ರಶ್ನಿಸಿದ್ದಾರೆ. ಆಗ ಅವರಲ್ಲೊಬ್ಬ ದುಷ್ಕರ್ಮಿ ತನ್ನ ಬಳಿಯಿದ್ದ ನಾಡ ಪಿಸ್ತೂಲಿನಿಂದ ಸಂದೇಶ್ ಅವರ ಎದೆಗೆ ಸಮೀಪದಿಂದ ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಕೂಡಲೇ ಬ್ಯಾಂಕ್ ಒಳಗೆ ನುಗ್ಗಿದ ದರೋಡೆಕೋರರು ನಗದು ದೋಚಿ, ಅಲಾರಾಂ ಮೊಳಗಿಸುವ ಮೊದಲೇ ಅಲ್ಲಿಂದ ಪರಾರಿಯಾಗಿದ್ದಾರೆ. 'ದರೋಡೆಕೋರರು ತಮ್ಮ ಕೈಯಲ್ಲಿ ಎಷ್ಟು ಹಣವನ್ನು ತುಂಬಿಸಲು ಆಗುತ್ತದೆಯೋ ಅಷ್ಟು ಹಣವನ್ನು ಹಿಡಿದುಕೊಂಡು ಎರಡು ನಿಮಿಷಗಳ ಒಳಗೇ ಅಲ್ಲಿಂದ ಪರಾರಿಯಾಗಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂದೇಶ್ ಅವರನ್ನು ಶತಾಬ್ದಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಅಲ್ಲಿಗೆ ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು' ಎಂದು ಎಂಎಚ್‌ಬಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 2.5 ಲಕ್ಷ ರೂ ನಗದನ್ನು ಅವರು ದೋಚಿರಬಹುದು ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧಾರದಲ್ಲಿ, ದರೋಡೆಕೋರರು 20 ರಿಂದ 25 ವರ್ಷದವರು ಇರಬೇಕು ಎಂದು ಪೊಲೀಸರು ಊಹಿಸಿದ್ದಾರೆ. ಇಬ್ಬರೂ ದಹಿಸಾರ್ ರೈಲ್ವೆ ನಿಲ್ದಾಣದ ದಿಕ್ಕಿನಲ್ಲಿ ಓಡಿದ್ದಾರೆ. ದರೋಡೆ ನಡೆಯುವ ವೇಳೆ ಬ್ಯಾಂಕ್ ಮುಚ್ಚುವ ಸಮಯ ಸಮೀಪಿಸುತ್ತಿತ್ತು. ಬ್ಯಾಂಕ್ ಒಳಗೆ ಕನಿಷ್ಠ ಎಂಟು ಉದ್ಯೋಗಿಗಳಿದ್ದರು. ಈ ಬ್ಯಾಂಕ್ ಹೆಚ್ಚು ಜನಜಂಗುಳಿ ಇಲ್ಲದ ಪ್ರದೇಶವಾಗಿದ್ದು, ಕಡಿಮೆ ಕಣ್ಗಾವಲು ಹೊಂದಿದೆ. ಹೀಗಾಗಿ ದುಷ್ಕರ್ಮಿಗಳು ಇದನ್ನು ಗುರಿಯಾಗಿಸಿದ್ದರು ಎಂದು ತಿಳಿಸಿದ್ದಾರೆ. ಇಬ್ಬರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಹಾಗೂ ದರೋಡೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ದರೋಡೆಕೋರರ ಗುರುತು ಪತ್ತೆಗಾಗಿ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬ್ಯಾಂಕ್ ಒಳಗಿನ ದರೋಡೆಯ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇಬ್ಬರು ಶಂಕಿತರ ಬಂಧನ ದರೋಡೆಗೆ ಸಂಬಂಧಿಸಿದಂತೆ ಮುಂಬಯಿ ಅಪರಾಧ ದಳ ಮತ್ತು ವಲಯ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ಇದರಲ್ಲಿ ಒಬ್ಬಾತ 16 ವರ್ಷದ ಬಾಲಕ ಎಂದು ಮೂಲಗಳು ತಿಳಿಸಿವೆ. ದರೋಡೆ ಬಳಿಕ ದಹಿಸಾರ್ ರೈಲ್ವೆ ನಿಲ್ದಾಣದ ಸೇತುವೆ ಮೇಲೆ ಓಡಿಹೋಗಿದ್ದರು. ಶ್ವಾನದಳದ ಸಹಾಯದಿಂದ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ತಾವು ಗುಂಡು ಹಾರಿಸಿದ ವ್ಯಕ್ತಿ ಬದುಕುತ್ತಾನೆ, ಆತನನ್ನು ಆಸ್ಪತ್ರೆಗೆ ಸಾಗಿಸಬೇಕು ಎಂದು ದರೋಡೆ ವೇಳೆ ದುಷ್ಕರ್ಮಿಗಳು ಪದೇ ಪದೇ ಹೇಳುತ್ತಿದ್ದರು. ಮಹಿಳಾ ಕ್ಯಾಷಿಯರ್ ಡೆಸ್ಕ್ ಬಳಿ ಸಾಗಿದ ಅವರು ಅಲ್ಲಿ ಕಂಡ 2.5 ಲಕ್ಷ ರೂಪಾಯಿಯನ್ನು ತೆಗೆದುಕೊಂಡರು. ಬ್ಯಾಂಕ್ ಲಾಕರ್ ತೆರೆಯುವಂತೆ ಒಬ್ಬ ಆಗ್ರಹಿಸಿದ್ದ. ಆದರೆ, ಅಲ್ಲಿಂದ ಬೇಗ ಪರಾರಿಯಾಗಬೇಕು ಎಂದು ಮತ್ತೊಬ್ಬ ಸಂಜ್ಞೆ ಮಾಡಿದ್ದ ಎಂದು ಉದ್ಯೋಗಿಗಳು ತಿಳಿಸಿದ್ದರು. ಅವರ ವರ್ತನೆಗಳಿಂದ ಅವರು ವೃತ್ತಿಪರ ದರೋಡೆಕೋರರಲ್ಲ ಎನ್ನುವುದು ಗೊತ್ತಾಗಿತ್ತು.