ಸಹ ಕಲಾವಿದರಿಗೆ ತಲುಪದ ಯಶ್, ಪುನೀತ್, ಶಿವಣ್ಣ ನೀಡಿದ ಧನ ಸಹಾಯ; ಆ ದುಡ್ಡೆಲ್ಲವೂ ಗುಳುಂ ಎಂಬ ಆರೋಪ

ಕೊರೊನಾದಿಂದಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರ ನೆರವಿಗೆ ಸ್ಟಾರ್‌ ನಟರು ನೀಡಿದ ಧನ ಸಹಾಯವು ಸಹ ಕಲಾವಿದರಿಗೆ ತಲುಪಿಲ್ಲ ಎಂಬ ಅರೋಪ ಕೇಳಿಬಂದಿದೆ.

ಸಹ ಕಲಾವಿದರಿಗೆ ತಲುಪದ ಯಶ್, ಪುನೀತ್, ಶಿವಣ್ಣ ನೀಡಿದ ಧನ ಸಹಾಯ; ಆ ದುಡ್ಡೆಲ್ಲವೂ ಗುಳುಂ ಎಂಬ ಆರೋಪ
Linkup
(ಪದ್ಮಾ ಶಿವಮೊಗ್ಗ) ಚಿತ್ರರಂಗದ ಕೆಲಸ ಸ್ಥಗಿತಗೊಂಡ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾದವರು ಕಲಾವಿದರು ಮತ್ತು ತಂತ್ರಜ್ಞರು. ಕೆಲಸವಿಲ್ಲದೆ ಜೀವನ ನಡೆಸುವುದಕ್ಕೆ ಪರದಾಡಿದ ದಿನಗೂಲಿ ಕಾರ್ಮಿಕರ ನೆರವಿಗೆ ಸರ್ಕಾರ ಮತ್ತು ಮುಂಚೂಣಿಯಲ್ಲಿರುವ ನಟರು ಮುಂದಾದರು. ಯಶ್‌ 1 ಕೋಟಿ ರೂ., ಪುನೀತ್‌ 10 ಲಕ್ಷ ರೂ., ಶಿವರಾಜ್‌ಕುಮಾರ್‌ 10 ಲಕ್ಷ ರೂ., ನಿರ್ಮಾಪಕ ವಿಜಯ್‌ ಕಿರಗಂದೂರು 35 ಲಕ್ಷ ರೂ. ಮುಂತಾದವರು ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಒಕ್ಕೂಟಕ್ಕೆ ಧನ ಸಹಾಯ ನೀಡಿದ್ದಾರೆ. ಇದೀಗ ಈ ಹಣ ಸರಿಯಾಗಿ ವಿತರಣೆ ಆಗಿಲ್ಲ ಮತ್ತು ಸಹ ಕಲಾವಿದರಿಗೆ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಕರ್ನಾಟಕ ಚಲನಚಿತ್ರ, ಕಿರುತೆರೆ ಸಹ ಕಲಾವಿದರ ಸಂಘದ ಗೌರವಾಧ್ಯಕ್ಷ ಗಂಗಾಧರ್‌ ಎಸ್‌. ಆರೋಪಿಸಿದ್ದಾರೆ. ಈ ಸಂಬಂಧ ಜೂನ್‌. 28 ಸೋಮವಾರ ಸಹ ಕಲಾವಿದರು ಪ್ರತಿಭಟನೆ ಮಾಡಲಿರುವುದಾಗಿ ಅವರು ಹೇಳಿದ್ದಾರೆ. 'ಎಲ್ಲರೂ ಕಾರ್ಮಿಕರಿಗೆ ನೆರವು ನೀಡುವ ಸಲುವಾಗಿ ಒಕ್ಕೂಟಕ್ಕೇ ಹಣ ಸಂದಾಯ ಮಾಡುತ್ತಿದ್ದಾರೆ. ಆದರೆ, ಇದುವರೆಗೆ ಜೂನಿಯರ್‌ ಕಲಾವಿದರಿಗೆ ಯಾವುದೇ ರೀತಿಯ ಹಣ ಬಂದಿಲ್ಲ. ಹಿರಿಯ ನಟಿ ಲೀಲಾವತಿ ಅವರು ನೇರವಾಗಿ ಕಲಾವಿದರಿಗೆ 100 ಫುಡ್‌ ಕಿಟ್‌ ವಿತರಣೆ ಮಾಡಿದರು ಮತ್ತು ನಟ ಉಪೇಂದ್ರ ಸುಮಾರು 40 ಕಲಾವಿದರಿಗೆ ಫುಡ್‌ ಕಿಟ್‌ ನೀಡಿದ್ದು ಬಿಟ್ಟರೆ, ಯಶ್‌ ಮತ್ತಿತರ ನಟರು ನೀಡಿದ ಹಣದಲ್ಲಿ ಒಕ್ಕೂಟದಿಂದ ಸಹ ಕಲಾವಿದರಿಗೆ ಏನೂ ಸಿಕ್ಕಿಲ್ಲ' ಎಂದು ಗಂಗಾಧರ್‌ ಎಸ್‌. ಹೇಳಿದ್ದಾರೆ. 'ಸಹ ಕಲಾವಿದರು ಬಹಳ ಕಷ್ಟದಲ್ಲಿದ್ದಾರೆ. ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಜೂನಿಯರ್‌ ಆರ್ಟಿಸ್ಟ್‌ಗಳನ್ನು ಸಿನಿಮಾಗೆ ನೀಡುತ್ತ ಬಂದಿದ್ದೇವೆ. ನಮ್ಮ ಸಂಘದಲ್ಲಿಸುಮಾರು 600 ಮಂದಿ ಖಾಯಂ ಸಹ ಕಲಾವಿದರಿದ್ದಾರೆ. ಇವರಲ್ಲದೆ, ಸುಮಾರು 3 ಸಾವಿರಕ್ಕೂ ಹೆಚ್ಚು ಸಹ ಕಲಾವಿದರು ಕೆಲಸ ಮಾಡುತ್ತಾ ಬಂದಿದ್ದಾರೆ. ಅವರಿಗೆಲ್ಲ ಯಾವುದೇ ರೀತಿಯ ಸಹಾಯ ತಲುಪುತ್ತಿಲ್ಲ. ಒಕ್ಕೂಟದಲ್ಲಿರುವ ಕೆಲವರು ಈ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ಅವರು ಹೊರಡಿಸಿದ್ದಾರೆ. ಕರ್ನಾಟಕ ಚಲನಚಿತ್ರ, ಕಿರುತೆರೆ ಸಹ ಕಲಾವಿದರ ಸಂಘ ಕೆಲವು ವರ್ಷಗಳ ಹಿಂದೆ ಒಕ್ಕೂಟದಿಂದ ಹೊರಗುಳಿದಿದೆ. ಇದಕ್ಕೆ ಕಾರಣ ಹಿಂದಿನ ಅಧ್ಯಕ್ಷರು ಎಂದು ದೂರಿದ್ದಾರೆ ಗಂಗಾಧರ್‌ ಎಸ್‌. 'ಹಲವು ವರ್ಷಗಳ ಹಿಂದೆ ಒಕ್ಕೂಟದ ಹಣಕಾಸಿನ ಲೆಕ್ಕ ಕೇಳಿ ಪ್ರತಿಭಟನೆಗೆ ಇಳಿದಿದ್ದಕ್ಕೆ ಹಿಂದೆ ಇದ್ದ ಅಧ್ಯಕ್ಷರು ನಮ್ಮ ಸಂಘವನ್ನು ಒಕ್ಕೂಟದಿಂದ ಹೊರಗಿಟ್ಟರು. ಆಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಕೆಸಿಎನ್‌ ಚಂದ್ರಶೇಖರ್‌ ನಮ್ಮ ಸಂಘಕ್ಕೆ ಮಂಡಳಿಯ ಕಟ್ಟಡದಲ್ಲೇ ಒಂದು ಕೋಣೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಚಿತ್ರರಂಗದಲ್ಲಿಕಾರ್ಮಿಕರು, ತಂತ್ರಜ್ಞರು, ಕಲಾವಿದರ 21 ಸಂಘಗಳಿವೆ. ಇದರಲ್ಲಿ ನಾಲ್ಕೈದು ಸಂಘಗಳು ಮಾತ್ರ ಒಕ್ಕೂಟದಲ್ಲಿವೆ. ಇದರಲ್ಲಿ ವಾಹನ ಚಾಲಕರ ಸಂಘ, ಪ್ರೊಡಕ್ಷನ್‌ ಬಾಯ್ಸ್, ಪ್ರೊಡಕ್ಷನ್‌ ಮ್ಯಾನೇಜರ್ಸ್ ಸಂಘಗಳಿವೆ' ಎಂದಿದ್ದಾರೆ ಗಂಗಾಧರ್‌ ಎಸ್‌. ಈ ಬಗ್ಗೆ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸಹ ಕಲಾವಿದರಿಗೆ ಯಾಕೆ ನೆರವು ನೀಡುತ್ತಿಲ್ಲಎಂದು ಕೇಳಿದ್ದೇವೆ. ಸೋಮವಾರ ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿಬೆಳಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿಇತ್ತೀಚೆಗೆ ನಿಧನರಾದ ಚಿತ್ರರಂಗದ ನಿರ್ಮಾಪಕರು, ಕಲಾವಿದರು, ತಂತ್ರಜ್ಞರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದೇವೆ. ಜತೆಗೆ ಸಹ ಕಲಾವಿದರಿಗೆ ಫುಡ್‌ ಕಿಟ್‌ ವಿತರಿಸಲಿದ್ದೇವೆ ಎಂದು ಹೇಳಿದ್ದಾರೆ ಗಂಗಾಧರ್‌ ಎಸ್‌.