ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 8,834 ಕೋಟಿ ರೂ. ಲಾಭ

ಸೆಪ್ಟೆಂಬರ್‌ಗೆ ಅಂತ್ಯಗೊಂಡ 2ನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ನಿವ್ವಳ ಲಾಭ 8,834.3 ಕೋಟಿ ರೂ.ಗೆ ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ 7,513.1 ಕೋಟಿ ರೂ. ಲಾಭ ಗಳಿಸಿತ್ತು.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 8,834 ಕೋಟಿ ರೂ. ಲಾಭ
Linkup
ಮುಂಬಯಿ: ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ನಿವ್ವಳ ಲಾಭ 8,834.3 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 7,513.1 ಕೋಟಿ ರೂ. ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಬ್ಯಾಂಕ್‌ನ ಲಾಭ ಶೇ. 17.58ರಷ್ಟು ಹೆಚ್ಚಾಗಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ನ ಲಾಭ ಶೇ. 14.29ರಷ್ಟು ಏರಿಕೆಯಾಗಿದೆ. ಏಪ್ರಿಲ್‌ - ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ 7,729 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದೇ ಅವಧಿಯಲ್ಲಿ ಬ್ಯಾಂಕ್‌ನ ಆದಾಯ 38,754 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ವರ್ಷ ಬ್ಯಾಂಕ್‌ 36,069 ಕೋಟಿ ರೂ. ಆದಾಯ ಪಡೆದುಕೊಂಡಿತ್ತು. ಬ್ಯಾಂಕ್‌ನ ವಸೂಲಾದ ಸಾಲದ ಪ್ರಮಾಣ ಶೇ. 1.35ರಷ್ಟಿದೆ. ಸದ್ಯ ಬ್ಯಾಂಕ್‌ನ ಎನ್‌ಪಿಎ 16,346 ಕೋಟಿ ರೂ. ಇದೆ (ಇದರಲ್ಲಿ ಕೃಷಿ ವಲಯದ ಎನ್‌ಪಿಎ ಶೇ. 1.2ನ್ನು ಪರಿಗಣಿಸಿಲ್ಲ). ಜೂನ್‌ ತ್ರೈಮಾಸಿದ ಅಂತ್ಯಕ್ಕೆ ಎನ್‌ಪಿಎ ಶೇ. 1.47ರಷ್ಟಿತ್ತು, ಅದೀಗ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎನ್‌ಪಿಎ ತುಂಬಾ ಕಡಿಮೆ ಇದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 17,684.4 ಕೋಟಿ ರೂ. ಬಡ್ಡಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ಶೇ. 12.1ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಬ್ಯಾಂಕ್‌ 15,776.4 ಕೋಟಿ ರೂ. ಆದಾಯ ಗಳಿಸಿತ್ತು. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎನ್‌ಪಿಎ 4,755 ಕೋಟಿ ರೂ. ಆಗಿದೆ. ನೀಡಿದ ಸಾಲಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ. 0.40ರಷ್ಟಿದೆ. ಕಳೆದ ವರ್ಷ ಈ ಪ್ರಮಾಣ ಶೇ. 0.17ರಷ್ಟಿತ್ತು. ಬ್ಯಾಂಕ್‌ನ ಬಡ್ಡಿಯೇತರ ಆದಾಯ ಶೇ. 21.5ರಷ್ಟು ಏರಿಕೆ ಕಂಡಿದ್ದು 7,600.8 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,092.5 ಕೋಟಿ ರೂ. ಬಡ್ಡಿಯೇತರ ಆದಾಯ ಗಳಿಸಿತ್ತು. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಕಾರ್ಯಾಚರಣೆ ಖರ್ಚು 9,277.9 ಕೋಟಿ ರೂ. ಆಗಿತ್ತು. ಕಳೆದ ವರ್ಷದ 8,055.1 ಕೋಟಿ ರೂ.ಗೆ ಹೋಲಿಸಿದರೆ ಖರ್ಚು ಶೇ. 15.2ರಷ್ಟು ಏರಿಕೆಯಾಗಿದೆ. ಖರ್ಚು ಮತ್ತು ಆದಾಯದ ನಡುವಿನ ಅನುಪಾತ ಶೇ. 37ರಷ್ಟಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಒಟ್ಟಾರೆ ಆದಾಯ (ಒಟ್ಟು ಬಡ್ಡಿ ಆದಾಯ ಮತ್ತು ಇತರ ಆದಾಯ) ಶೇ. 14.7ರಷ್ಟು ಏರಿಕೆಯಾಗಿದ್ದು 25,085.2 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ನ ಆದಾಯ 21,868 ಕೋಟಿ ರೂ. ಇತ್ತು. ಸೆಪ್ಟೆಂಬರ್‌ ಅಂತ್ಯಕ್ಕೆ ಬ್ಯಾಂಕ್‌ ನೀಡಿರುವ ಒಟ್ಟಾರೆ ಸಾಲ ಶೇ. 15.5ರಷ್ಟು ಏರಿಕೆಯಾಗಿದ್ದು 11,98,837 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಶೇ. 15.5ರಷ್ಟು ಹೆಚ್ಚಾಗಿದೆ. ಚಿಲ್ಲರೆ ಸಾಲಗಳ ಪ್ರಮಾಣ ಶೇ. 12.9ರಷ್ಟು ಹೆಚ್ಚಾಗಿದ್ದರೆ, ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್‌ ಸಾಲಗಳ ಪ್ರಮಾಣ ಶೇ. 27.6ರಷ್ಟು ಹೆಚ್ಚಾಗಿದೆ. ಸಗಟು ಸಾಲದ ಪ್ರಮಾಣ ಶೇ. 6ರಷ್ಟು ಏರಿಕೆ ಕಂಡಿದೆ.