![](https://vijaykarnataka.com/photo/87134786/photo-87134786.jpg)
ಪದ್ಮಾ ಶಿವಮೊಗ್ಗ
ನಿರ್ದೇಶಕ ದಿನೇಶ್ ಬಾಬು ಸ್ಟೇಷನ್ ಹುಡುಕಿಕೊಂಡು ಹೋಗಿದ್ದಾರೆ. ಇದು ರೈಲ್ವೇ ಸ್ಟೇಷನ್ ಅಲ್ಲ, ಬದಲಿಗೆ ಪೊಲೀಸ್ ಸ್ಟೇಷನ್. ಪೊಲೀಸರ ಭಾವನೆಗಳನ್ನು ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ ಅವರು. ಹೊಸ ಚಿತ್ರಕ್ಕೆ 'ಸ್ಟೇಷನ್ 3' ಎಂದು ಹೆಸರಿಡಲಾಗಿದ್ದು, ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಐದು ಪ್ರಮುಖ ಪೊಲೀಸ್ ಪಾತ್ರಗಳ ಸುತ್ತ ಕಥೆ ಇರಲಿದೆ. ಎಮೋಷನಲ್ ಥ್ರಿಲ್ಲರ್ ಸಿನಿಮಾ ಇದು. ಪೊಲೀಸ್ ಸ್ಟೇಷನ್ ಅನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿದ್ದಾರೆ. ಈ ಚಿತ್ರದಲ್ಲಿ ನಟರಾದ ಕಿಶೋರ್, ಪವಿತ್ರಾ ಲೋಕೇಶ್, ಕರಿಸುಬ್ಬು, ನಾರಾಯಣಸ್ವಾಮಿ, ವೈಷ್ಣವಿ ಪೊಲೀಸ್ ಆಗಿ ನಟಿಸುತ್ತಿರುವುದು ವಿಶೇಷ.
ಕಿಶೋರ್ ಎಸಿಪಿಯಾಗಿ, ಪವಿತ್ರಾ ಲೋಕೇಶ್ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ನಟಿಸಿದರೆ, ಕರಿಸುಬ್ಬು ಹೆಡ್ ಕಾನ್‌ಸ್ಟೇಬಲ್ ಆಗಿ, ಉಳಿದ ನಟರು ಪೊಲೀಸ್ ಕಾನ್‌ಸ್ಟೇಬಲ್ ಆಗಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಹೀರೋ ಹಿರೋಯಿನ್ ಅಂತ ಯಾರೂ ಇಲ್ಲ. ಎಲ್ಲಾ ಪಾತ್ರಗಳಿಗೆ ಪ್ರಾಮುಖ್ಯತೆ ಇದೆ. ಅದರಲ್ಲಿ ಐದು ಪಾತ್ರಗಳು ಹೆಚ್ಚು ಮುಖ್ಯವಾಗಿವೆ. ನೀನಾಸಂ ಸಂದೀಪ್ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ 23 ಪಾತ್ರಗಳಿವೆ.
ಕಥೆಯನ್ನು ಸ್ವತಃ ದಿನೇಶ್ ಬಾಬು ಬರೆದಿದ್ದಾರೆ. 'ಪೊಲೀಸ್ ಸ್ಟೇಷನ್ ಅಂದಾಕ್ಷಣ ಕ್ರೈಂ ಥ್ರಿಲ್ಲರ್ ಎಂದುಕೊಳ್ಳಬೇಕಿಲ್ಲ. ಎಮೋಷನಲ್ ಥ್ರಿಲ್ಲರ್ ಸಿನಿಮಾ ಇದು. ಪೊಲೀಸರು ನಮ್ಮ ಹಾಗೇ ಮನುಷ್ಯರು. ಅವರಿಗೂ ಭಾವನೆಗಳಿರುತ್ತವೆ. ಒಂದು ಪೊಲೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುವ ಪೊಲೀಸರ ಸುತ್ತ ಕಥೆ ಬರೆದಿದ್ದೇನೆ. ಸ್ಟೇಷನ್ ಜತೆ ಇವರ ಸಂಬಂಧ ಎಂಥದ್ದು ಎನ್ನುವುದು ಸಿನಿಮಾದಲ್ಲಿದೆ. ಎಲ್ಲರಿಗೂ ಒಂದು ಕನಸು ಇರುತ್ತದೆ. ಹೀಗಿರಬೇಕು, ಹಾಗಿರಬೇಕು ಅಂತ ಬಯಸುತ್ತಾರೆ. ಯಾವಾಗಲೂ ಈ ಕನಸಿನಗೆ ಪರ್ಯಾಯವಾಗಿ ದುಃಸ್ವಪ್ನವೂ ಇರುತ್ತದೆ. ಅದನ್ನು ಸಿನಿಮಾದಲ್ಲಿ ನೋಡಬಹುದು. ಪೊಲೀಸರಿಗೂ ಎಮೋಷನ್ಸ್ ಇರುತ್ತವೆ. ಒಳ್ಳೆಯದನ್ನೂ ಮಾಡುತ್ತಾರೆ, ಕೆಟ್ಟದ್ದನ್ನೂ ಮಾಡುತ್ತಾರೆ. ನಾನು ಹಿಂದೆ 'ಲಾಲಿ' ಸಿನಿಮಾದಲ್ಲಿ ತಂದೆ-ಮಗಳು, 'ಅಮೃತವರ್ಷಿಣಿ' ಸಿನಿಮಾದಲ್ಲಿ ಗಂಡ-ಹೆಂಡತಿ ನಡುವಿನ ಎಮೋಷನ್ಸ್ ಬಗ್ಗೆ ಹೇಳಿದ್ದೆ. ಈ ಸಿನಿಮಾದಲ್ಲಿ ವೃತ್ತಿ ಜೀವನದ ಎಮೋಷನ್ಸ್ ಹೇಗಿರುತ್ತೆ ಎನ್ನುವುದನ್ನು ಹೇಳುತ್ತಿದ್ದೇನೆ' ಎಂದಿದ್ದಾರೆ ದಿನೇಶ್ ಬಾಬು.
ವಿಶೇಷವಾದ ಪಾತ್ರದಲ್ಲಿ ನಿರ್ದೇಶಕ ಜೋಸೈಮನ್ ಚರ್ಚ್ ಪಾದ್ರಿಯಾಗಿ ನಟಿಸಲಿದ್ದಾರೆ. ನ.10ರಿಂದ ಸಕಲೇಶಪುರದಲ್ಲಿ 'ಸ್ಟೇಷನ್ 3' ಚಿತ್ರದ ಚಿತ್ರೀಕರಣ ನಡೆಯಲಿದೆ. ಛಾಯಾಗ್ರಹಣ ಜವಾಬ್ದಾರಿಯನ್ನೂ ದಿನೇಶ್ ಬಾಬು ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ಹಿನ್ನೆಲೆಯಲ್ಲಿ ಒಂದು ಹಾಡು ಇರಲಿದ್ದು, ಹೊಸ ಸಂಗೀತ ನಿರ್ದೇಶಕರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಕಂಟೆಂಟ್ ಸಿನಿಮಾಗಳತ್ತ ಹೆಚ್ಚಿನ ಒಲವು ತೋರಿಸುತ್ತಿರುವ ದಿನೇಶ್ ಬಾಬು ಅವರ 51ನೇ ಸಿನಿಮಾ ಇದು. ಕನ್ನಡದಲ್ಲಿ ಸ್ಟಾರ್ ನಟರಿಗೆ ಸಿನಿಮಾ ಮಾಡಿದವರು. ಮತ್ತೆ ಸ್ಟಾರ್ ನಟರಿಗೆ ಕಮರ್ಷಿಯಲ್ ಸಿನಿಮಾ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಅವರು, 'ನಾನು ಬಹಳ ಸಂತೋಷವಾಗಿದ್ದೇನೆ. ನೆಮ್ಮದಿಯಿಂದ ಇದ್ದೇನೆ. ಹೀರೋಗಳು ಬಿಲ್ಡಪ್ ಬೇಕು ಎಂದರೆ ನನಗೆ ಅದು ಗೊತ್ತಿಲ್ಲ. ನನಗೆ ಸ್ಟಾರ್ ನಟರನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಗೊತ್ತಿಲ್ಲ. ಕಂಟೆಂಟ್ ಇರುವ ಕಥೆಯನ್ನು ಸಿನಿಮಾ ಮಾಡಲು ಬಯಸುವ ನಿರ್ಮಾಪಕರು ಸಿಕ್ಕಾಗ ಆ ಸಿನಿಮಾ ಮಾಡ್ತೀನಿ ಅಷ್ಟೇ' ಎಂದಿದ್ದಾರೆ.
ಕೋಟ್ಸ್
ಈ ರೀತಿಯ ಬ್ಯಾಕ್‌ಗ್ರೌಂಡ್ ಇರುವ ಸಿನಿಮಾವನ್ನು ನಾನು ಇದುವರೆಗೆ ಮಾಡಿಲ್ಲ. ಬೇರೆ ರೀತಿ ಸಿನಿಮಾ ಮಾಡಬೇಕು ಎಂದುಕೊಂಡೆ. ಪೊಲೀಸ್ ಅಂದರೆ ಎಲ್ಲರಿಗೂ ಗೊತ್ತಿರುವುದು ಬೇರೆ. ಆದರೆ, ಗೊತ್ತಿಲ್ಲದ ಎಮೋಷನಲ್ ಸಂಗತಿಗಳೂ ಇವೆ. ಹೊಸ ಹೊಸ ವಿಚಾರಗಳನ್ನು ಸಿನಿಮಾ ಮೂಲಕ ಹೇಳಲು ಬಯಸುತ್ತಿರುವೆ.
-ದಿನೇಶ್ ಬಾಬು, ನಿರ್ದೇಶಕ