'ಹಾನಗಲ್ ಕುಮಾರಸ್ವಾಮಿ' ಜೀವನ ಕುರಿತ ಸಿನಿಮಾದಲ್ಲಿ ನಟ ಸುಚೇಂದ್ರ ಪ್ರಸಾದ್

ನಿರ್ದೇಶಕ ಬಿ.ಎಸ್‌. ಲಿಂಗದೇವರು ಅವರು 'ಹಾನಗಲ್‌ ಕುಮಾರಸ್ವಾಮಿ' ಜೀವನ ಕುರಿತು ಸಿನಿಮಾ ಮಾಡಲಿದ್ದು, ಕುಮಾರಸ್ವಾಮಿ ಪಾತ್ರಕ್ಕೆ ನಟ ಸುಚೇಂದ್ರ ಪ್ರಸಾದ್‌ ಅವರು ಆಯ್ಕೆಯಾಗಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ಹಾನಗಲ್ ಕುಮಾರಸ್ವಾಮಿ' ಜೀವನ ಕುರಿತ ಸಿನಿಮಾದಲ್ಲಿ ನಟ ಸುಚೇಂದ್ರ ಪ್ರಸಾದ್
Linkup
ಪದ್ಮಾ ಶಿವಮೊಗ್ಗ ಉತ್ತರ ಕನ್ನಡದಲ್ಲಿ ದೇವರಂತೆ ಪೂಜಿಸಲ್ಪಡುವ ಸ್ವಾಮೀಜಿ ಹಾನಗಲ್‌ ಶ್ರೀಕುಮಾರಸ್ವಾಮಿ (1867-1930). ಶಿಕ್ಷಣ, ಸಂಗೀತ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದವರು ಕುಮಾರಸ್ವಾಮಿಗಳು. ಇಂದಿಗೂ ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ಅವರನ್ನು ಪೂಜೆ ಮಾಡಲಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಶ್ರೀ ಪಂಚಾಕ್ಷರ ಗವಾಯಿಗಳಿಗೆ ಗುರುಗಳಾಗಿದ್ದ ಕುಮಾರಸ್ವಾಮಿ ನೂರು ವರ್ಷ ಹಿಂದೆಯೇ ಕ್ರಾಂತಿಕಾರಕ ಸಾಧನೆಯನ್ನು ಮಾಡಿದವರು. ಇದೀಗ ಇದು ಸಿನಿಮಾ ಆಗುತ್ತಿದೆ. ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಕುಮಾರಸ್ವಾಮಿ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್‌ ನಟಿಸಲಿದ್ದಾರೆ. 'ಹಾನಗಲ್‌ ಕುಮಾರಸ್ವಾಮಿಯವರನ್ನು ವಿದ್ವಾಂಸರು 'ಎರಡನೇ ಬಸವಣ್ಣ' ಎಂದು ಕರೆಯುತ್ತಾರೆ. ಅವರು ಬಸವಣ್ಣನೂ ಹೌದು, ಅಲ್ಲಮನೂ ಹೌದು, ಅಕ್ಕಮಹಾದೇವಿಯೂ ಹೌದು. ಮಹಿಳಾ ಸಮಾನತೆಗೆ ಪ್ರಯತ್ನಿಸಿದವರು. 1920ರಲ್ಲಿ ಮಹಿಳಾ ಸಮ್ಮೇಳನ ಮಾಡುತ್ತಾರೆ. ಹೆಣ್ಣುಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸುತ್ತಾರೆ. ಕಾಲ್ನಡಿಗೆ, ಚಕ್ಕಡಿಯಲ್ಲೇ ಎಲ್ಲಾ ಕಡೆ ಓಡಾಡುತ್ತಿದ್ದರು. ಶಿಕ್ಷಣದಲ್ಲಿ ಕ್ರಾಂತಿ ಮಾಡಿದವರು. ಶ್ರೀಮದ್‌ ವೀರಶೈವ ಮಹಾಸಭಾ ಮಾಡಿ, ಕನ್ನಡಿಗರೆಲ್ಲಾ ಒಂದು ಕಡೆ ಸೇರುವಂತೆ ಮಾಡಿದರು. 1909ರಲ್ಲಿ ಸ್ವಾಮೀಜಿಗಳಿಗಾಗಿ ಮೊದಲ ಶಾಲೆ 'ಶಿವಯೋಗಿ ಮಂದಿರ'ವನ್ನು ಪ್ರಾರಂಭಿಸಿದವರು ಇವರು. ಚಿತ್ರಮಂದಿರ, ಫ್ಯಾಕ್ಟರಿಗಳನ್ನು ಪ್ರಾರಂಭಿಸಿದ್ದರು. ಹೀಗೆ ಸಮಾಜಕ್ಕೆ ಅಗತ್ಯ ಇರುವ ಹಲವು ದೊಡ್ಡ ಕಾರ್ಯಗಳನ್ನು ಮಾಡಿದ್ದಾರೆ' ಎಂದಿದ್ದಾರೆ ನಿರ್ದೇಶಕ ಲಿಂಗದೇವರು. ಚಿತ್ರದ ಪ್ರೀಪ್ರೊಡಕ್ಷನ್‌ ಕೆಲಸ ಮುಗಿಸಿದ್ದಾರೆ ನಿರ್ದೇಶಕರು. ಸುಚೇಂದ್ರ ಪ್ರಸಾದ್‌ ಅವರ ಲುಕ್‌ ಸ್ವಾಮೀಜಿಯನ್ನು ಹೋಲುತ್ತಿರುವುದು ಅವರನ್ನು ಆಯ್ಕೆ ಮಾಡಲು ಕಾರಣ ಎಂದಿದ್ದಾರೆ ಲಿಂಗದೇವರು. 'ಸುಚೇಂದ್ರ ಪ್ರಸಾದ್‌ ಅವರಿಗೆ ಹಾನಗಲ್‌ ಸ್ವಾಮೀಜಿಯ ಮುಖಚಹರೆ ಹೋಲುತ್ತದೆ. ಅಲ್ಲದೆ, ಅವರ ಕನ್ನಡ ಶುದ್ಧವಾಗಿದೆ. ನಟನಾಗಿಯೂ ಇಂಥ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಇನ್ನುಳಿದ ಪಾತ್ರಗಳಿಗೆ ಉತ್ತರ ಕರ್ನಾಟಕದ ರಂಗಭೂಮಿಯವರನ್ನು ಆಯ್ಕೆ ಮಾಡಿದ್ದೇನೆ' ಎಂದಿದ್ದಾರೆ ಅವರು. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ 9 ವಚನಗಳಿಗೆ ಹಾಡಿನ ರೂಪ ನೀಡಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ದೇವರ ದಾಸಿಮಯ್ಯ ಮತ್ತಿತರರ ವಚನಗಳನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ, ಎರಡು ಹಾಡುಗಳಿವೆ. ನಿಜಗುಣ ಶಿವಯೋಗಿ ಬರೆದ ಹಾಡು ಮತ್ತು ಪಂಚಾಕ್ಷರಿ ಗವಾಯಿಯವರು ಸಮಾರಂಭದಲ್ಲಿ ಹಾಡಿದ ಹಾಡೊಂದನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. 'ನಾನು ಅವನಲ್ಲಅವಳು' ಚಿತ್ರಕ್ಕೆ ಕೆಲಸ ಮಾಡಿದ್ದ ಅಶೋಕ್‌ ಈ ಚಿತ್ರಕ್ಕೆ ಸಿನೆಮಾಟೋಗ್ರಾಫರ್‌ ಆಗಿ ಕೆಲಸ ಮಾಡಲಿದ್ದಾರೆ. ಗದಗ ಮತ್ತು ಶಿವಯೋಗಿ ಮಂದಿರದ ಸುತ್ತ ಚಿತ್ರೀಕರಣ ಮಾಡಲಿದ್ದಾರೆ. ಪಿರಿಯಾಡಿಕಲ್‌ ಸಿನಿಮಾ ಇದಾಗಿರುವುದರಿಂದ ಹಲವು ಸವಾಲುಗಳಿವೆ ಎಂದಿದ್ದಾರೆ ಅವರು. '1920ರ ಚಿತ್ರಣವನ್ನು ನೀಡಬೇಕಾಗಿರೋದ್ರಿಂದ ಅದಕ್ಕೆ ತಕ್ಕಂತೆ ಲೊಕೇಷನ್‌ ಹುಡುಕಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ದಶಕಗಳ ಹಿಂದಿನ ಕರ್ನಾಟಕವನ್ನು ತೋರಿಸಬೇಕಿದೆ' ಎಂದಿದ್ದಾರೆ ಅವರು. ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗಲಿದೆ. 'ತಾಳೆಗರಿಯಲ್ಲಿದ್ದ ವಚನಗಳನ್ನು ಮನೆಮನೆಗಳಿಂದ ಸಂಗ್ರಹಿಸಿ ಅದನ್ನು ತಾವೇ ಪ್ರಾರಂಭಿಸಿದ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಪುಸ್ತಕವನ್ನಾಗಿಸಿ ತಂದು ಎಲ್ಲರಿಗೆ ತಲುಪುವಂತೆ ಮಾಡಿದ್ದಾರೆ ಕುಮಾರಸ್ವಾಮೀಜಿ. ಇಂದು ಇರುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು ಇವರೇ. ಇದನ್ನೆಲ್ಲಾ ಅಧ್ಯಯನ ಮಾಡಿ ಈಗ ಸ್ಕ್ರಿಪ್ಟ್‌ ಮುಗಿಸಿದ್ದೇನೆ. ಧರ್ಮ, ಜಾತಿ ವಿಷಯಗಳೂ ಬರೋದರಿಂದ ಸೂಕ್ಷ್ಮವಾಗಿ ಚಿತ್ರಿಸಬೇಕಾಗಿದೆ' ಎಂದಿದ್ದಾರೆ ಲಿಂಗದೇವರು.