ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿದ್ದು ದೇಶದ್ರೋಹ: ಎಚ್‌ಡಿ ಕುಮಾರಸ್ವಾಮಿ ಕಿಡಿ

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಹೋದರರಂತೆ ಇರಬೇಕು. ಇಂತಹ ಘಟನೆಗಳು ಅಕ್ಕಪಕ್ಕದ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ಇಂತಹ ಘಟನೆಗಳಿಂದ ಎಂಇಎಸ್ʼನವರು ಏನು ಸಾಧನೆ ಮಾಡಲು ಸಾಧ್ಯವಿಲ್ಲ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿದ್ದು ದೇಶದ್ರೋಹ: ಎಚ್‌ಡಿ ಕುಮಾರಸ್ವಾಮಿ ಕಿಡಿ
Linkup
ಹೊಸದಿಲ್ಲಿ: ಕಿತ್ತೂರು ರಾಣಿ ಚೆನ್ನಮ್ಮ ಅವರ ಜತೆಗೂಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಪುತ್ರ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಇದು ಕನ್ನಡಿಗರಿಷ್ಟೇ ಮಾಡಿದ ದ್ರೋಹವಲ್ಲ, ಇಡೀ ದೇಶಕ್ಕೆ ಎಸಗಿದ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; “ಪ್ರತಿಮೆಯನ್ನು ಹಾಳು ಮಾಡಿರುವುದು ಹಾಗೂ ಬೆಳಗಾವಿಯಲ್ಲಿ ವಾಹನಗಳನ್ನು ಸುಟ್ಟು ಹೋಟೆಲ್‌ಗಳಿಗೆ ಕಲ್ಲು ಹೊಡೆದಿರುವ ಘಟನೆ ಅತ್ಯಂತ ಹೇಯ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವತ್ತು ಬೆಳಗಿನ ಜಾವ ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಬ್ರಿಟೀಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೊತೆಗೂಡಿ ಹೋರಾಟ ನಡೆಸಿದ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಧಕ್ಕೆ ಉಂಟು ಮಾಡಿರುವುದು ದೇಶ ದ್ರೋಹದ ಕೆಲಸ. ಹಿಂದೆಯೂ ಮೊಘಲ್ ಸಾಮ್ರಾಜ್ಯ ಸ್ಥಾಪನೆಯಾಗುವಾಗ, ಪೋರ್ಚುಗೀಸರು ನಮ್ಮ ದೇಶಕ್ಕೆ ಮೊದಲು ಬಂದಾಗ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆದಿದ್ದ ದಾಳಿಗಳು ಈಗ ಮತ್ತೆ ಪುನಾರಾವರ್ತನೆಯಾಗುತ್ತಿವೆ ಎನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ಈಗ ನಮ್ಮವರೇ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದ ಮರಾಠಿಗರ ಅಭಿಮಾನವನ್ನು ದುರುಪಯೋಗ ಮಾಡಿಕೊಂಡು ಇಂತಹ ಕೆಲಸ ಮಾಡಿರುವುದು ಖಂಡನೀಯ. ಇದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ ದೇಶಕ್ಕೆ ಮಾಡಿರುವ ದ್ರೋಹ ಎಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದರು. ವಾಹನಗಳ ಮೇಲೆ ಕಲ್ಲು ತೂರುವುದು, ಬಂದ್ ಮಾಡುವುದು, ಅಂಗಡಿ ಮುಚ್ಚಿಸುವುದು ನೋಡಿದರೆ ಸರಕಾರ ನಿಷ್ಕ್ರಿಯವಾಗಿದೆಯೇ ಅಥವಾ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಂಧಿಕಾರಿಗಳಿಗೆ ಸೂಚನೆ ನೀಡುವಲ್ಲಿ ಸರಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮೂರ್ನಾಲ್ಕೂ ಸಾವಿರ ಪೊಲೀಸರು ಇದ್ದರು ಕೂಡ ಇಂತಹ ಘಟನೆ ನಡೆದಿರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಸರಕಾರಕ್ಕೆ ಚಾಟಿ ಬೀಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಹೋದರರಂತೆ ಇರಬೇಕು. ಇಂತಹ ಘಟನೆಗಳು ಅಕ್ಕಪಕ್ಕದ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ಇಂತಹ ಘಟನೆಗಳಿಂದ ಎಂಇಎಸ್ʼನವರು ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬೆಳಗಾವಿ ಕರ್ನಾಟಕದ ಭಾಗವಾಗಿದೆ. ನೀವು ಕನ್ನಡದ ಮಣ್ಣಿನಲ್ಲಿ ಜೀವನ ಕಟ್ಟಿಕೊಂಡಿದ್ದೀರಾ. ನಾಡಿನ ಅನ್ನವನ್ನು ತಿಂದು, ಈ ಮಣ್ಣಿನಲ್ಲಿ ಬದುಕಿ ಇಂತಹ ಹೇಯ ಕೃತ್ಯ ಮಾಡುವುದು ದೇಶ ದ್ರೋಹದ ಕೆಲಸ ಎಂದು ಕುಮಾರಸ್ವಾಮಿ ತಿಳಿಸಿದರು.