ಕ್ರೂರ ಕೃತ್ಯ: ಎಂಟು ವರ್ಷದ ಬಾಲಕಿ ಮೇಲೆ 11 ವರ್ಷ ಬಾಲಕರಿಂದ ಸಾಮೂಹಿಕ ಅತ್ಯಾಚಾರ

ರಾಜಧಾನಿ ದಿಲ್ಲಿಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ 11 ವರ್ಷದ ವಯಸ್ಸಿನ ಇಬ್ಬರು ಬಾಲಕರು ಕ್ರೂರವಾಗಿ ಅತ್ಯಾಚಾರ ನಡೆಸಿದ ಎದೆನಡುಗಿಸುವ ಘಟನೆ ವರದಿಯಾಗಿದೆ. ತೀವ್ರ ಗಾಯಗೊಂಡಿರುವ ಬಾಲಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.

ಕ್ರೂರ ಕೃತ್ಯ: ಎಂಟು ವರ್ಷದ ಬಾಲಕಿ ಮೇಲೆ 11 ವರ್ಷ ಬಾಲಕರಿಂದ ಸಾಮೂಹಿಕ ಅತ್ಯಾಚಾರ
Linkup
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಕೇವಲ 11 ವರ್ಷ ಬಾಲಕರಿಬ್ಬರು ಸೇರಿ ಎಂಟು ವರ್ಷದ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ. ಈಶಾನ್ಯ ದಿಲ್ಲಿಯಲ್ಲಿನ ನ್ಯೂ ಉಸ್ಮಾನ್‌ಪುರ ಎಂಬಲ್ಲಿ ಸೋಮವಾರ ಮಧ್ಯಾಹ್ನ ಈ ಹೇಯ ಕೃತ್ಯ ನಡೆದಿದೆ. ಬಾಲಕರಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ತೀವ್ರ ಗಾಯಗೊಂಡಿರುವ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಮಂಗಳವಾರ ಐಸಿಯುಗೆ ದಾಖಲು ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಲಕಿ ಮನೆಯ ಹೊರಗೆ ಕುಳಿತಿದ್ದಳು. ಆಗ ನೆರೆಹೊರೆಯ ಒಬ್ಬ ಬಾಲಕ, ಆಕೆಯೊಂದಿಗೆ ಆಟವಾಡುವ ನೆಪವೊಡ್ಡಿ ಕರೆದುಕೊಂಡು ಹೋಗಿದ್ದ. ಆತ ತನ್ನ ಸಂಬಂಧಿಯ ಮನೆಗೆ ಆಕೆಯನ್ನು ಕರೆದೊಯ್ದು, ಅಲ್ಲಿ ಸ್ನೇಹಿತನ ಜತೆಗೂಡಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಅತ್ಯಾಚಾರ ಎಸಗಿದ ಬಳಿಕ, ಇಬ್ಬರೂ ಈ ವಿಚಾರವನ್ನು ಎಲ್ಲಿಯೂ ಬಾಯ್ಬಿಡಬಾರದು. ಹಾಗೆ ಮಾಡಿದರೆ ಪರಿಣಾಮ ಚೆನ್ನಾಗಿರೊಲ್ಲ ಎಂದು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಸಂಜೆ 4.30ರ ಸುಮಾರಿಗೆ ಬಾಲಕಿ ಮನೆಗೆ ಬಂದಾಗ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅಲ್ಲಿ ನಡೆದ ಘಟನೆ ಬಗ್ಗೆ ಆಕೆ ಅಮ್ಮನಿಗೆ ವಿವರಿಸಿದ್ದಳು. ಬಾಲಕಿಯ ಮೈ ತುಂಬಾ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಮಕ್ಕಳ ಕಲ್ಯಾಣ ಸಮಿತಿ ಕೌನ್ಸೆಲಿಂಗ್ ಬಳಿಕ ಆಕೆಯನ್ನು ವೈದ್ಯಕೀಯ ತಪಾಸಣೆಗೆ ರವಾನಿಸಲಾಗಿತ್ತು. ಅಲ್ಲಿ, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಐಪಿಸಿ ಸೆಕ್ಷನ್ 363ರ ಅಡಿ (ಅಪಹರಣ) ಮತ್ತು 376 AM (12ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 6 (ಲೈಂಗಿಕ ದೌರ್ಜನ್ಯ ಎಸಗಿರುವುದು) ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಬಾಲಾರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಡಿಸಿಪಿ ಸಂಜಯ್ ಕುಮಾರ್ ಸೈನ್ ತಿಳಿಸಿದ್ದಾರೆ. ತನ್ನ ಮಹಿಳಾ ಸಹಾಯವಾಣಿ 181 ಮೂಲಕ ಘಟನೆ ಬಗ್ಗೆ ಮಾಹಿತಿ ತಿಳಿದ ಮಹಿಳಾ ಆಯೋಗವು, ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಎಫ್‌ಐಆರ್ ವಿವರಗಳು ಹಾಗೂ ಈವರೆಗೂ ಬಂಧಿತರಾದ ಆರೋಪಿಗಳ ವಿವರ ನೀಡುವಂತೆ ಸೂಚಿಸಿದೆ. ಬಾಲಕಿಯ ಖಾಸಗಿ ಅಂಗಕ್ಕೆ ಹಲವು ಗಾಯಗಳಾಗಿವೆ. ಆಕೆ ವಿಪರೀತ ರಕ್ತಸ್ರಾವದಿಂದಾಗಿ ನೋವು ಅನುಭವಿಸುತ್ತಿದ್ದು, ಐಸಿಯುದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಎಂಟು ವರ್ಷದ ಪುಟ್ಟ ಮಗುವಿನ ಮೇಲೆ ಎಸಗಿದವರು ಮನುಷ್ಯರಲ್ಲ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.