![](https://vijaykarnataka.com/photo/89636781/photo-89636781.jpg)
: ಕಳೆದ ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಗೆ ಒತ್ತಾಯಿಸಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ಸಂಘವು ಫೆ.18ರಿಂದ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಇದರಿಂದ ನಗರದಲ್ಲಿ ಕಸದ ಸಮಸ್ಯೆ ಉಲ್ಬಣಿಸುವ ಆತಂಕ ತಲೆದೋರಿದೆ.
ಕಸ ಸಂಗ್ರಹ ಮತ್ತು ವಿಲೇವಾರಿ ಕಾರ್ಯದ ಬಿಲ್ ಪಾವತಿಸಲು ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಗುತ್ತಿಗೆದಾರರು, ವಿಲೇವಾರಿ ಸ್ಥಗಿತಗೊಳಿಸಿ ಮುಷ್ಕರ ಹೂಡಲು ತೀರ್ಮಾನಿಸಿದ್ದಾರೆ. ಬಾಕಿ ಹಣ ಬಿಡುಗಡೆಯಾಗುವವರೆಗೆ ಮುಷ್ಕರ ಕೈಬಿಡುವುದಿಲ್ಲಎಂದು ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.
''2021ರ ಸೆಪ್ಟೆಂಬರ್ನಿಂದ ಜನವರಿವರೆಗೆ ಬಿಲ್ ಪಾವತಿ ಆಗಿಲ್ಲ. ಇದರಿಂದ ಕಸದ ಕಾಂಪ್ಯಾಕ್ಟರ್ಗಳು, ಆಟೊ ಟಿಪ್ಪರ್ ಚಾಲಕರು, ಸಹಾಯಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಶೇ.29.16ರಷ್ಟು ಇಎಸ್ಐ, ಪಿಎಫ್ ವಂತಿಗೆಯನ್ನೂ ಕಟ್ಟಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಬಿಲ್ ಪಾವತಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಖ್ಯ ಆಯುಕ್ತ ಗೌರವ್ ಗುಪ್ತ ಅವರೇ ಬಾಕಿ ಬಿಲ್ ಪಾವತಿಸುವಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಆದರೂ, ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಕಿಮ್ಮತ್ತು ನೀಡುತ್ತಿಲ್ಲ,'' ಎಂದು ಸಂಘದ ಕಾರ್ಯದರ್ಶಿ ಬಾಲಸುಬ್ರಮಣ್ಯ ತಿಳಿಸಿದರು.
''6 ತಿಂಗಳಿನಿಂದ 280 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿ ಮಾಡಲಾಗುತ್ತಿದೆ. ಆದರೆ, ಕಸದ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ಮಾಡದೆ ಸತಾಯಿಸಲಾಗುತ್ತಿದೆ. ಹೀಗಾಗಿ, ಕಸ ವಿಲೇವಾರಿ ಸ್ಥಗಿತಗೊಳಿಸಿ ಫೆ.18ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ,'' ಎಂದು ಹೇಳಿದರು.