ನಿರಾಶ್ರಿತರ ಕೇಂದ್ರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಧಿಕಾರಿ ಬಂಧನ
ನಿರಾಶ್ರಿತರ ಕೇಂದ್ರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಧಿಕಾರಿ ಬಂಧನ
ಮಹಿಳೆ ಕೆಲಸ ಮಾಡುವ ಸ್ಥಳಕ್ಕೆ ಹೋಗುತ್ತಿದ್ದ ಚಂದ್ರಪ್ಪ, ಅಲ್ಲಿದ್ದ ಇತರೆ ನೌಕರರನ್ನು ಹೊರಗೆ ಕಳುಹಿಸುತ್ತಿದ್ದರು. ಮಹಿಳೆಯನ್ನು ಮಾತ್ರ ಕೊಠಡಿಯಲ್ಲಿ ಇರಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
: ನಿರಾಶ್ರಿತರ ಕೇಂದ್ರದಲ್ಲಿ ಮಹಿಳಾ ನೌಕರರೊಬ್ಬರ ಮೇಲೆ ಎಸಗಿರುವ ಆರೋಪದಡಿ, ಅದೇ ಕೇಂದ್ರದ ಅಧಿಕಾರಿಯೊಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಚಂದ್ರಪ್ಪ (52) ಬಂಧಿತ ಆರೋಪಿ. 'ಕೇಂದ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಚಂದ್ರಪ್ಪ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ' ಎಂದು ಪೊಲೀಸ್ ಮೂಲಗಳು ಹೇಳಿವೆ.
'ಮಹಿಳೆ ಕೆಲಸ ಮಾಡುವ ಸ್ಥಳಕ್ಕೆ ಹೋಗುತ್ತಿದ್ದ ಚಂದ್ರಪ್ಪ, ಅಲ್ಲಿದ್ದ ಇತರೆ ನೌಕರರನ್ನು ಹೊರಗೆ ಕಳುಹಿಸುತ್ತಿದ್ದರು. ಮಹಿಳೆಯನ್ನು ಮಾತ್ರ ಕೊಠಡಿಯಲ್ಲಿ ಇರಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು. ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯ ಎಸಗುತ್ತಿದ್ದರು ಎಂದು ದೂರಿನಲ್ಲಿಉಲ್ಲೇಖಿಸಲಾಗಿದೆ' ಎಂದು ತಿಳಿದುಬಂದಿದೆ.
ಅಧಿಕಾರಿ ಚಂದ್ರಪ್ಪ ತನ್ನ ಜತೆ ಮಲಗು ಎಂದು ಮಹಿಳೆಯನ್ನು ಪೀಡಿಸುತ್ತಿದ್ದರು. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದರು ಎಂದೂ ಮೂಲಗಳು ತಿಳಿಸಿವೆ.
ವರ್ಗಾವಣೆ ಆಗಿ ಬಂದಿದ್ದರು: ಸುಮನಹಳ್ಳಿ ನಿರಾಶ್ರಿತರ ಕೇಂದ್ರದಲ್ಲಿದ್ದ ಚಂದ್ರಪ್ಪ ಅವರನ್ನು ಕೆಲ ತಿಂಗಳ ಹಿಂದಷ್ಟೇ ವರ್ಗಾವಣೆ ಮಾಡಲಾಗಿತ್ತು. ಇತ್ತೀಚೆಗೆ ಮರು ವರ್ಗಾವಣೆ ಮಾಡಿಸಿಕೊಂಡು ಸುಮನಹಳ್ಳಿ ಕೇಂದ್ರಕ್ಕೆ ವಾಪಸ್ ಬಂದಿದ್ದರು ಎಂದೂ ಮೂಲಗಳು ಹೇಳಿವೆ.