ಜುಲೈ ಅಂತ್ಯಕ್ಕೆ ಕೆಂಗೇರಿಗೆ ಮೆಟ್ರೋ ರೈಲು ಸಂಚಾರ, ಕೊನೆಗೂ ಕಾಮಗಾರಿ ಪೂರ್ಣ

ಬಹುನಿರೀಕ್ಷೆಯ ಕೆಂಗೇರಿ ನಾಯಂಡಹಳ್ಳಿ ಮೆಟ್ರೋ ರೈಲು ಸಂಚಾರ ಈ ವೇಳೆಗಾಗಲೇ ಆರಂಭಗೊಳ್ಳಬೇಕಿತ್ತು. ಆದರೆ, ಹಲವು ಕಾರಣಗಳಿಂದ ಸುಮಾರು ಎರಡು ವರ್ಷ ತಡವಾಗಿದ್ದು, ಜುಲೈ ಮಾಸಾಂತ್ಯದ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ.

ಜುಲೈ ಅಂತ್ಯಕ್ಕೆ ಕೆಂಗೇರಿಗೆ ಮೆಟ್ರೋ ರೈಲು ಸಂಚಾರ, ಕೊನೆಗೂ ಕಾಮಗಾರಿ ಪೂರ್ಣ
Linkup
ಬೆಂಗಳೂರು: ಬಹುನಿರೀಕ್ಷೆಯ ಕೆಂಗೇರಿ-ನಾಯಂಡಹಳ್ಳಿ ಮೆಟ್ರೋ ಕಾಮಗಾರಿ ಮುಗಿದು ರೈಲು ಸಂಚಾರ ಈ ವೇಳೆಗಾಗಲೇ ಆರಂಭಗೊಳ್ಳಬೇಕಿತ್ತು. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣ ಹಾಗೂ ಕಾಮಗಾರಿ ವಿಳಂಬದಿಂದ ಸುಮಾರು ಎರಡು ವರ್ಷ ತಡವಾಗಿದೆ. ಜುಲೈ ಮಾಸಾಂತ್ಯದ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕೆಂಬ ಗುರಿಯನ್ನು ಬಿಎಂಆರ್‌ಸಿಎಲ್‌ ಹಾಕಿಕೊಂಡಿದೆ. ಬಹುತೇಕ ಕಾಮಗಾರಿ ಮುಗಿದಿದ್ದು, ನಿಲ್ದಾಣದಲ್ಲಿ ಬಾಕಿ ಉಳಿದಿದ್ದ ಚಿಕ್ಕ-ಪುಟ್ಟ ಕಾಮಗಾರಿಗಳನ್ನು ಕೂಡಲೇ ಮುಗಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. "ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ ‍ಪರಿಶೀಲನೆ ನಡೆಸಿದ ನಂತರ ರೈಲು ಸಂಚಾರಕ್ಕೆ ಹಸಿರು ನಿಶಾನೆ ದೊರೆಯಲಿದೆ. ಜುಲೈ ಕೊನೆಯಲ್ಲಿ ಸಂಚಾರ ಆರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ," ಎಂದು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಯಶವಂತ ಚೌಹಾಣ್‌ ತಿಳಿಸಿದ್ದಾರೆ. ಗಡುವಿನ ಮೇಲೆ ಗಡುವು ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯವರೆಗಿನ ಮೆಟ್ರೋ ಕಾಮಗಾರಿಯನ್ನು 2018ರ ನವೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ಹೇಳಿತ್ತು. ಬಳಿಕ ಈ ಗಡುವನ್ನು 2019ರ ಮಾರ್ಚ್‌ವರೆಗೆ ವಿಸ್ತರಿಸಲಾಯಿತು. ಆನಂತರ ಗಡುವನ್ನು 2020ರ ಆಗಸ್ಟ್‌ಗೆ ಮುಂದೂಡಲಾಯಿತು. ಸದ್ಯ ಜುಲೈ 2021ಕ್ಕೆ ಇನ್ನೊಂದು ಗಡುವನ್ನು ಬಿಎಂಆರ್‌ಸಿಎಲ್‌ ನಿಗದಿಪಡಿಸಿಕೊಂಡಿದೆ. ಮೆಟ್ರೋ ಎರಡನೇ ಹಂತದ ಯೋಜನೆಗೆ 2014ರ ಫೆಬ್ರುವರಿಯಲ್ಲಿ ಆಡಳಿತಾತ್ಮಕ ಮಂಜೂರು ಸಿಕ್ಕಿತ್ತು. 26,405 ಕೋಟಿ ರೂ. ವೆಚ್ಚದಲ್ಲಿ 72 ಕಿ.ಮೀ ಉದ್ದದ ಮಾರ್ಗಗಳನ್ನು ನಿರ್ಮಿಸುವ ಗುರಿ ಇದರಲ್ಲಿತ್ತು. ಎರಡನೇ ಹಂತದ ಕೆಲವು ವಿಸ್ತರಿತ ಮಾರ್ಗಗಳ ಕಾಮಗಾರಿಗಳನ್ನು 2015ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು. 2020ರ ಒಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ನಿಗಮವು ಹೊಂದಿತ್ತು. ಆದರೆ, ಈ ಗಡುವನ್ನು ಪರಿಷ್ಕರಿಸಿರುವ ನಿಗಮ 2021ರ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿತ್ತು. ಈ ವೇಳೆಗೂ ಅದು ಪೂರ್ಣಗೊಳ್ಳಲಿಲ್ಲ. ಹದಗೆಟ್ಟ ರಸ್ತೆ ಕೆಂಗೇರಿಯಿಂದ ನಾಯಂಡಹಳ್ಳಿಯವರೆಗೆ ಮೆಟ್ರೋ ಕಾಮಗಾರಿಯಿಂದ ಬೆಂಗಳೂರು-ಮೈಸೂರು ರಸ್ತೆ ಅಲ್ಲಲ್ಲಿ ಹದಗೆಟ್ಟಿದ್ದು, ರಸ್ತೆ ಸವಾರರಿಗೆ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ಟೆಂಡರ್‌ ಪಕ್ರಿಯೆ ಪೂರ್ಣಗೊಳಿಸಿದ್ದು, ಶೀಘ್ರ ರಸ್ತೆ ಕಾಮಗಾರಿಯನ್ನು ಕೂಡ ಕೈಗೊಳ್ಳಲಿದೆ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಇನ್ನಷ್ಟು ಗುಂಡಿಗಳು ಬೀಳುವ ಸಾಧ್ಯತೆ ಇದೆ. ಕಾಮಗಾರಿ ವಿಳಂಬವಾದಷ್ಟು ರಸ್ತೆ ಸ್ಥಿತಿ ಇನ್ನಷ್ಟು ಹದಗೆಟ್ಟು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.