ಲಖನೌ (ಉತ್ತರ ಪ್ರದೇಶ): ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗೂ ಅನ್ಯಾಯವಾಗಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಸಿಲುಕಿ ಯಾರ ವಿರುದ್ಧವೂ ಕ್ರಮ ಕೈಗೊಳ್ಳೋದಿಲ್ಲ ಎಂದೂ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನನ್ನು ಬಂಧಿಸಬೇಕು ಎಂದು ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ, ಯೋಗಿ ಆದಿತ್ಯ ನಾಥ್ ಅವರಿಂದ ಭರವಸೆಯ ಮಾತುಗಳು ಹೊರಬಿದ್ದಿವೆ.
ಘಟನೆ ವೇಳೆ ನಾಲ್ವರು ರೈತರೂ ಸೇರಿದಂತೆ 8 ಮಂದಿ ಜೀವ ಬಿಟ್ಟಿದ್ದಾರೆ. ಈ ಕೃತ್ಯ ದುರಾದೃಷ್ಟಕರ ಎಂದಿರುವ ಯೋಗಿ ಆದಿತ್ಯನಾಥ್, ತಮ್ಮ ಸರ್ಕಾರವು ಘಟನೆಯ ಆಳಕ್ಕೆ ಇಳಿದು ವಿವರಗಳನ್ನು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಪ್ರಜಾ ಪ್ರಭುತ್ವದಲ್ಲಿ ಹಿಂಸಾಚಾರಕ್ಕೆ, ಗಲಭೆಗೆ ಜಾಗವೇ ಇಲ್ಲ. ಪ್ರತಿಯೊಬ್ಬರ ರಕ್ಷಣೆಯ ಹೊಣೆಯನ್ನು ಕಾನೂನು ಹೊತ್ತಿದೆ. ಹೀಗಾಗಿ, ಯಾರೂ ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನನ್ನು ರಕ್ಷಿಸಲು ಯುಪಿ ಸರ್ಕಾರ ಮುಂದಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಘಟನೆ ವೇಳೆ ಯಾವುದೇ ವಿಡಿಯೋ ಚಿತ್ರೀಕರಣ ಆಗಿಲ್ಲ. ಯಾವುದೇ ವಿಡಿಯೋ ಇಲ್ಲ. ಒಂದು ವೇಳೆ ಯಾರ ಬಳಿಯಾದ್ರೂ ಸಾಕ್ಷ್ಯಗಳಿದ್ದರೆ, ವಿಡಿಯೋ ಇದ್ದರೆ ಅಪ್‌ಲೋಡ್ ಮಾಡಲಿ, ತನಿಖೆ ನಡೆಸಲಾಗುವುದು ಎಂದಿರುವ ಯೋಗಿ ಆದಿತ್ಯನಾಥ್, ಯಾರಿಗೂ ಅನ್ಯಾಯ ಆಗೋದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಲಿದ್ದು, ಎಲ್ಲರೂ ಕಾನೂನು ಪಾಲಿಸಬೇಕು, ಕಾನೂನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಸಿಲುಕಿ ಯಾವುದೇ ಕಠಿಣ ಕ್ರಮ ಕೈಗೊಳ್ಳೋದಿಲ್ಲ ಎಂದೂ ಭರವಸೆ ನೀಡಿದ್ದಾರೆ.
ಆರೋಪದ ಆಧಾರದ ಮೇಲೆ ಯಾರನ್ನೂ ಬಂಧಿಸೋದಿಲ್ಲ ಎಂದಿರುವ ಯೋಗಿ ಆದಿತ್ಯನಾಥ್, ಇದೇ ವೇಳೆ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಬಿಡೋದಿಲ್ಲ ಎಂದು ಭರವಸೆ ನೀಡಿದ್ದಾರೆ.
ಕಳೆದ ಭಾನುವಾರ ಬಿಜೆಪಿ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ವಾಹನವು ಜನರ ಮೇಲೆ ಹರಿದಿತ್ತು. ಈ ವೇಳೆ 8 ಮಂದಿ ಮೃತಪಟ್ಟಿದ್ದರು. ಈ ಪೈಕಿ ನಾಲ್ವರು ರೈತರೂ ಮೃತಪಟ್ಟಿದ್ದರು. ಘಟನೆ ನಡೆದ ಕೂಡಲೇ ಸ್ಥಳದಲ್ಲಿದ್ದ ಜನರು ವಾಹನಗಳ ಮೇಲೆ ಕಲ್ಲೆಸೆತ ಮಾಡಿದ್ದರು. 8 ಮಂದಿ ಮೃತರ ಪೈಕಿ ನಾಲ್ವರು ರೈತರಾದ್ರೆ, ಇನ್ನಿಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಚಾಲಕ ಕೂಡಾ ಮೃತಪಟ್ಟಿದ್ದಾನೆ.
ತಮ್ಮ ಮೇಲೆ ಹರಿದ ವಾಹನದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಪ್ರಯಾಣಿಸುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ಆದ್ರೆ, ಈ ವಾದವನ್ನು ಆಶೀಶ್ ಮಿಶ್ರಾ ಹಾಗೂ ಅಜಯ್ ಮಿಶ್ರಾ ಇಬ್ಬರೂ ನಿರಾಕರಿಸಿದ್ದು, ವಾಹನದಲ್ಲಿ ತಾವು ಇರಲಿಲ್ಲ ಎಂದು ಆಶೀಶ್ ಮಿಶ್ರಾ ಹೇಳಿದರೆ, ಸಾಕ್ಷ್ಯಗಳಿದ್ದರೆ ನಿರೂಪಿಸಿ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಸಾಕ್ಷ್ಯಾಧಾರಗಳಿದ್ದರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬಿಜೆಪಿ ಶಾಸಕನೇ ಆಗಿರಲಿ, ಅನ್ಯ ಪಕ್ಷದ ಶಾಸಕನೇ ಆಗಿರಲಿ, ಯಾರದೇ ವಿರುದ್ಧವೂ ಕ್ರಮ ಕೈಗೊಳ್ಳಲು ನಾವು ಹಿಂಜರಿಯೋದಿಲ್ಲ. ಲಖೀಂಪುರ ಘಟನೆ ವಿಚಾರಕ್ಕೂ ಇದು ಅನ್ವಯ ಆಗುತ್ತದೆ ಎಂದಿದ್ದಾರೆ.
ಆಶೀಶ್ ಮಿಶ್ರಾಗೆ ಸಮನ್ಸ್ ಜಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯುಪಿ ಸಿಎಂ, ಘಟನೆ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ದಳ ನೇಮಿಸಲಾಗಿದ್ದು, ಈ ಸಂಬಂಧ ನ್ಯಾಯಾಂಗ ತನಿಖೆಯೂ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ನ್ಯಾಯಾಂಗ ಸಮಿತಿಯು ಘಟನೆಯ ಸಮಗ್ರ ತನಿಖೆ ನಡೆಯಲಿದ್ದು, ವಿಶೇಷ ತನಿಖಾ ದಳವು ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಲಿದೆ ಎಂದು ಯುಪಿ ಸಿಎಂ ತಿಳಿಸಿದ್ದಾರೆ.
ವಿಡಿಯೋ ಒಂದರ ಆಧಾರದ ಮೇಲೆ ಕೆಲವರನ್ನು ಬಂಧಿಸಲಾಗಿದ್ದು, ಘಟನೆ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಸಂಬಂಧ ಲವಕುಶ್ ಹಾಗೂ ಆಶೀಶ್ ಪಾಂಡೆ ಎಂಬಿಬ್ಬರನ್ನು ಬಂಧಿಸಲಾಗಿದ್ದು, ಸಚಿವರ ಪುತ್ರ ಆಶೀಶ್‌ಗೂ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.