
: ಕೋವಿಡ್ ನಿರೋಧಕ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡುವುದಕ್ಕಾಗಿ ಎರಡೋ ಡೋಸ್ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಬಾಗಿಲಿಗೆ 'ಸ್ಟಿಕರ್' ಅಂಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯಾ ಸಲಹೆ ಮಾಡಿದ್ದಾರೆ.
ಲಸಿಕೆ ಅಭಿಯಾನ ಇನ್ನೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಮಂಗಳವಾರ ಸರಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜತೆ ಕೇಂದ್ರ ಆರೋಗ್ಯ ಸಚಿವ ಮಂಡಾವೀಯಾ ಸಮಾಲೋಚನೆ ನಡೆಸಿದರು. ಮನೆ ಬಾಗಿಲಿಗೆ ಲಸಿಕೆ ಕೊಂಡೊಯ್ಯುವ 'ಹರ್ ಘರ್ ದಸ್ತಕ್' ಅಭಿಯಾನ ಕುರಿತೂ ಅವರು ಈ ವೇಳೆ ಪ್ರಸ್ತಾಪ ಮಾಡಿದರು.
'ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಮನೆ ಬಾಗಿಲಿಗೆ ಲಸಿಕೆ ತಲುಪಿಸುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಸರಕಾರದಷ್ಟೇ ಮುತುವರ್ಜಿಯನ್ನು ಜನರು ಕೂಡ ವಹಿಸಬೇಕು. ಇದರಲ್ಲಿ ಜನರ ಪಾಲುದಾರಿಕೆ ತುಂಬ ಮುಖ್ಯ. ಲಸಿಕೆ ಪಡೆಯದೇ ದೂರ ಉಳಿದವರನ್ನು ಪ್ರೋತ್ಸಾಹಿಸಿ ಕರೆ ತರಬೇಕು. ಎರಡು ಡೋಸ್ ಪೂರ್ಣಗೊಳಿಸಿದ ಮನೆಗಳ ಬಾಗಿಲಿಗೆ 'ಸೋಂಕು ಮುಕ್ತ' ಎನ್ನುವ ಸ್ಟಿಕರ್ ಅಂಟಿಸಬೇಕು. ಇದರಿಂದ ಉಳಿದವರಲ್ಲೂ ಲಸಿಕೆ ಪಡೆಯುವ ಉಮೇದು ಸೃಷ್ಟಿಯಾಗುತ್ತದೆ' ಎಂದು ಸಂಘ ಸಂಸ್ಥೆಗಳಿಗೆ ಸಲಹೆ ಮಾಡಿದರು.
'ಕೋವಿಡ್ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಭಾರತ ಸರಿ ಸಾಟಿಯಿಲ್ಲದ ಸಾಧನೆ ಮಾಡಿದೆ. ಲಾಕ್‌ಡೌನ್ ಸಂದರ್ಭ ಯಾರೊಬ್ಬರೂ ಉಪವಾಸ ಬೀಳದಂತೆ ನೋಡಿಕೊಂಡಿದ್ದು ನಮ್ಮ ಸರಕಾರದ ಹೆಗ್ಗಳಿಕೆ. ಇದರಲ್ಲಿ ಎನ್‌ಜಿಒ ಮತ್ತು ನಾಗರಿಕ ಸಂಘ ಸಂಸ್ಥೆಗಳ ಪಾಲೂ ದೊಡ್ಡದಿದೆ. ಮೊದಲ ಡೋಸ್ ಪಡೆದವರ ಸಂಖ್ಯೆ ಶೇ.80ರಷ್ಟಿದೆ. ಎರಡೂ ಡೋಸ್ ಪೂರೈಸಿದವರ ಪ್ರಮಾಣ ಶೇ.40 ದಾಟುತ್ತದೆ. ಈ ಸಾಧನೆಗೆ ಎಲ್ಲರ ಸಹಭಾಗಿತ್ವವೇ ಕಾರಣ. ಆದರೂ ಸಾಂಕ್ರಾಮಿಕ ಸಂಪೂರ್ಣ ಅಂತ್ಯಗೊಳ್ಳಬೇಕಾದರೆ ಶೇ.100ರಷ್ಟು ಲಸಿಕೆ ಪೂರೈಸುವುದು ಅನಿವಾರ್ಯ' ಎಂದು ಪ್ರತಿಪಾದಿಸಿದರು.
ಕೇರಳ ಹೈಕೋರ್ಟ್ ಪ್ರಶ್ನೆ: ಲಸಿಕೆ ಕಾರಣಕ್ಕೆ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಲ್ಲುವುದು ಸರಕಾರದ ಜವಾಬ್ದಾರಿ ಹೌದೋ ಅಲ್ಲವೋ ಎಂದು ಪ್ರಶ್ನಿಸಿರುವ ಕೇರಳ ಹೈಕೋರ್ಟ್, ಈ ಸಂಬಂಧ ಮಂಗಳವಾರ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬ ಲಾಕ್‌ಡೌನ್ ಸಂದರ್ಭ ದೇಶಕ್ಕೆ ವಾಪಸಾಗಿದ್ದರು. ನಂತರ ಅವರು ಕೊವ್ಯಾಕ್ಸಿನ್ ಎರಡು ಡೋಸ್ ಲಸಿಕೆ ಪೂರೈಸಿದ್ದರು. ಅದಾಗಿ ಉದ್ಯೋಗಕ್ಕೆ ಹಿಂದಿರುಗಲು ಅವರಿಗೆ ಲಸಿಕೆಯ ಅಮಾನ್ಯತೆ ಅಡ್ಡ ಬಂದಿತ್ತು. ತಮಗೆ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಮೂರನೇ ಡೋಸ್ ನೀಡುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಿಸಿದ ನ್ಯಾಯಮೂರ್ತಿ ಪಿ. ವಿ. ಕುನ್ಹಿ ಕೃಷ್ಣನ್, 'ಕೋವಿಡ್ ಕಾರಣ ಇಂತಹ ಬಿಕ್ಕಟ್ಟುಗಳಿಗೆ ಸಿಲುಕಿದ ಜನರಿಗೆ ನೆರವಾಗುವುದು ಸರಕಾರದ ಜವಾಬ್ದಾರಿಯಲ್ಲವೇ? ಈ ಬಗ್ಗೆ ನೀವೇನು ಕ್ರಮ ಕೈಗೊಂಡಿದ್ದೀರಿ? ಕೊವ್ಯಾಕ್ಸಿನ್‌ಗೆ ಡಬ್ಲ್ಯೂಎಚ್‌ಒ ಮಾನ್ಯತೆ ನೀಡಿದೆ. ಆದರೂ ಸೌದಿ ಅರೇಬಿಯಾ ಸರಕಾರ ಅನ್ನು ಯಾಕೆ ಸಮ್ಮತಿಸುತ್ತಿಲ್ಲ. ಈ ದಿಸೆಯಲ್ಲಿ ಕೇಂದ್ರ ಸರಕಾರ ಏನು ಎಚ್ಚರ ವಹಿಸಿದೆ' ಎಂದು ಪ್ರಶ್ನೆ ಮಾಡಿದರು.