ಆಕ್ಸಿಜನ್‌ ಬೆಡ್‌ಗಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಅಶ್ವತ್ಥನಾರಾಯಣ ಮಾತುಕತೆ

ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಅಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಆಕ್ಸಿಜನ್‌ ಬೆಡ್‌ಗಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಅಶ್ವತ್ಥನಾರಾಯಣ ಮಾತುಕತೆ
Linkup
ಬೆಂಗಳೂರು: ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಅಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ವೆಂಟಿಲೇಟರ್‌ಗಳು, ಆಕ್ಸಿಜನ್‌ ಬೆಡ್‌ಗಳು, ರೆಮ್‌ಡೆಸಿವರ್, ಆಮ್ಲಜನಕ ಮತ್ತಿತರೆ ಅಂಶಗಳ ಬಗ್ಗೆ ಅವರು ಆಸ್ಪತ್ರೆಯ ಹಿರಿಯ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಆಸ್ಪತ್ರೆಯ ಅಧ್ಯಕ್ಷ ಎಂ.ಆರ್.ಜಯರಾಂ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್‌. ಶ್ರೀನಿವಾಸ ಮೂರ್ತಿ ಅವರ ಜತೆ ಮಾತುಕತೆ ನಡೆಸಿದ ಡಿಸಿಎಂ, ಆಕ್ಸಿಜನ್‌ ಬೆಡ್ ಗಳ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು. ಇದಕ್ಕೆ ಅವರಿಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ ಎರಡನೇ ಅಲೆ ಮಾತ್ರವಲ್ಲ. ಮುಂದೆ ಎದುರಾಗಬಹುದಾದ ಯಾವುದೇ ವೈದ್ಯಕೀಯ ಸವಾಲನ್ನು ಎದುರಿಸಲು ಸನ್ನದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್‌ ಬೆಡ್‌ಗಳನ್ನು ಇಟ್ಟುಕೊಂಡಿರಬೇಕು. ಇಡೀ ವೈದ್ಯಕೀಯ ವ್ಯವಸ್ಥೆ 24/7 ಅಲರ್ಟ್‌ ಆಗಿರಬೇಕು. ಸರಕಾರ ಕೋರಿಕೆಗೆ ಎಂಎಸ್‌ ರಾಮಯ್ಯ ಆಸ್ಪತ್ರೆ ಆಡಳಿತ ವರ್ಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು. ಕೆಲ ಮೆಡಿಕಲ್‌ ಕಾಲೇಜುಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿವೆ, ಆದರೆ, ಆಕ್ಸಿಜನ್‌ ಜೋಡಿತ ಬೆಡ್‌ಗಳಿಲ್ಲ. ನಮಗೆ ಬೇಕಿರುವುದು ಆಸಿಜನ್‌ ಇರುವ ಹಾಸಿಗೆಗಳು ಮಾತ್ರ. ಎಮರ್ಜೆನ್ಸಿ ಪ್ರಕರಣಗಳಲ್ಲಿ ಆಮ್ಲಜನಕ ಇಲ್ಲದಿದ್ದರೆ ಅದು ಎಷ್ಟು ದೊಡ್ಡ ಆಸ್ಪತ್ರೆಯಾದರೂ ಪ್ರಯೋಜನ ಇಲ್ಲ. ಆದಷ್ಟು ಅಂಥ ಆಸ್ಪತ್ರೆಗಳಿಗೆ ನಾವೇ ಸೌಲಭ್ಯಗಳನ್ನು ಕೊಟ್ಟು ಅಂಥ ಹಾಸಿಗೆಗಳನ್ನು ಸರಕಾರದ ವಶಕ್ಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಸಿಬ್ಬಂದಿ ಕೊರತೆ ಆಗಬಾರದು: ಸರಕಾರ ಆಗರಲಿ ಅಥವಾ ಖಾಸಗಿ ಆಗಿರಲಿ, ಯಾವುದೇ ಆಸ್ಪತ್ರೆ ಅಥವಾ ಮೆಡಿಕಲ್‌ ಕಾಲೇಜ್‌ ಆಗಿರಬಹುದು, ಸಿಬ್ಬಂದಿ ಕೊರತೆ ಆಗಬಾರದು. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸೇವೆಯನ್ನು ಪಡೆದುಕೊಳ್ಳಿ. ಅವರಿಗೆ ತಜ್ಞ ವೈದ್ಯರು ಮಾರ್ಗದರ್ಶನ ಮಾಡಿದರೆ ಸಾಕು. ಅದಕ್ಕೆ ಕಾನೂನಿನಲ್ಲಿ ಅವಕಾಶ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ ಅವರು ಕೋವಿಡ್‌ ತಡೆಗೆ ಅನೇಕ ಪರಿಣಾಮಕಾರಿ ಸಲಹೆಗಳನ್ನು ನೀಡಿದ್ದಾರೆ. ಕ್ಷಿಪ್ರವಾಗಿ ಆ ಸಲಹೆಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ವೈದ್ಯರ ಜತೆ ಸಮಾಲೋಚನೆ ಇದಾದ ಮೇಲೆ ಮಲ್ಲೇಶ್ವರದ ವೈದ್ಯರು, ಮತ್ತಿತರೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸೋಂಕಿತರ ಆರೋಗ್ಯ ಉಲ್ಬಣವಾಗುವ ಸ್ಥಿತಿಗೆ ಬಿಡದೇ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ತಾಕೀತು ಮಾಡಿದರು. ಸೋಂಕಿತರಿಗೆ ವೈದ್ಯ ಸೌಲಭ್ಯದಲ್ಲ ಯಾವುದೇ ಲೋಪವಾಗಬಾರದು. ಪರೀಕ್ಷೆ, ರಿಸಲ್ಟ್‌ ಹಾಗೂ ಚಿಕಿತ್ಸೆ ಕೊಡುವ ವಿಚಾರದಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು ಎಂದು ಡಿಸಿಎಂ ಸೂಚನೆ ಕೊಟ್ಟರು.