
: ರಾಜಧಾನಿಯಲ್ಲಿ 2ನೇ ಅಲೆ ಅಬ್ಬರಿಸುವ ಜೊತೆಯಲ್ಲೇ, ಪರೀಕ್ಷೆಗಾಗಿ ಕ್ಯೂ ನಿಲ್ಲುವವರ ಸಾಲು ಕೂಡಾ ದೊಡ್ಡದಾಗುತ್ತಿದೆ. ಬಹುತೇಕರು ತಾವೂ ಕೂಡಾ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದು ಮುಂದಾಗುತ್ತಿದ್ದಾರೆ. ರೋಗ ಭೀತಿ ಕಾಡುತ್ತಿರುವ ಕಾರಣ, ಎಲ್ಲರೂ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಜನರ ಈ ಮನಸ್ಥಿತಿಯೇ ಸರ್ಕಾರಕ್ಕೆ ತಲೆ ನೋವಾಗಿದೆ..!
ಆರ್‌ಟಿಪಿಸಿಆರ್ ಟೆಸ್ಟ್‌ಗೆ ಬಹುತೇಕರು ಮುಂದಾಗುತ್ತಿರುವ ಕಾರಣ, ಲ್ಯಾಬ್‌ಗಳಿಗೆ ಒತ್ತಡ ಹೆಚ್ಚಾಗಿದೆ. ತಂತ್ರಜ್ಞರು ಹಾಗೂ ಮಾದರಿ ಸಂಗ್ರಹ ಮಾಡುವ ಸಿಬ್ಬಂದಿಗೂ ಕೆಲಸದ ಒತ್ತಡ ಹೆಚ್ಚಾಗಿದೆ. ಪ್ರವಾಹೋಪಾದಿಯಲ್ಲಿ ಜನರು ಪರೀಕ್ಷೆಗೆ ಲಗ್ಗೆ ಇಡುತ್ತಿದ್ದಾರೆ. ಹೀಗಾಗಿ ಹೊಸ ನಿಯಮ ರೂಪಿಸಲು ಮುಂದಾಗಿದೆ.
ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹಾಗೂ ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಲ್ಯಾಬ್‌ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಈ ನಿಲುವು ಕೈಗೊಳ್ಳಲಾಗಿದೆ.
ಈ ಸಂಬಂಧ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಯಾರಿಗೆ ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಸೇರಿದಂತೆ ಕೊರೊನಾ ಲಕ್ಷಣ ಇರುತ್ತೆ ಅವರಿಗೆ ಮಾತ್ರ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಲ್ಯಾಬ್‌ಗಳಿಗೆ ಇರುವ ಒತ್ತಡ ತಗ್ಗಿಸಲು ಈ ಕ್ರಮ ಕೈಗೊಂಡಿರೋದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸೋದು ಕಷ್ಟಕರ ಎನ್ನುತ್ತದೆ ಬಿಬಿಎಂಪಿ.
ಬೆಂಗಳೂರಿನಲ್ಲಿ ಈಗಾಗಲೇ ಪಾಸಿಟಿವಿಟಿ ರೇಟ್ ಶೇ. 20 ದಾಟಿದೆ. ಅಂದ್ರೆ, 100 ಜನರನ್ನು ಪರೀಕ್ಷೆಗೆ ಒಳಪಡಿಸಿದ್ರೆ, ಈ ಪೈಕಿ 20ಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜನರೂ ಕೂಡಾ ಕೊರೊನಾ ಭಯದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಪರೀಕ್ಷೆಗಾಗಿ ಲ್ಯಾಬ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಪರೀಕ್ಷಾ ವರದಿ ಲಭ್ಯವಾಗುವ ಸಮಯ ಕೂಡಾ ಸುದೀರ್ಘವಾಗುತ್ತಿದೆ. 24 ಗಂಟೆಗಳ ಒಳಗೆ ಬರಬೇಕಾದ ವರದಿ ಬಹಳ ತಡವಾಗುತ್ತಿದೆ. ತಡವಾಗಿ ವರದಿ ಪಡೆಯುವ ಸೋಂಕಿತರು ಬಳಿಕ ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಾ ಪರದಾಡುವಂತಾಗಿದೆ.