ರಫೇಲ್‌ ಜೆಟ್‌ ಒಪ್ಪಂದ ಪ್ರಕರಣ: ಫ್ರಾನ್ಸ್‌ನಲ್ಲಿ ನ್ಯಾಯಾಂಗ ತನಿಖೆ ಆರಂಭ!

ಬರೋಬ್ಬರಿ ₹59,000 ಕೋಟಿ ಮೊತ್ತದ ಭಾರತ- ಫ್ರಾನ್ಸ್‌ ನಡುವಿನ ರಫೇಲ್ ಜೆಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ಪಕ್ಷಪಾತದ ಆರೋಪ ಕುರಿತು ತನಿಖೆ ನಡೆಸಲು ಫ್ರಾನ್ಸ್ ಸರಕಾರ ನ್ಯಾಯಾಂಗ ತನಿಖೆಯನ್ನು ಆರಂಭಿಸಿದೆ.

ರಫೇಲ್‌ ಜೆಟ್‌ ಒಪ್ಪಂದ ಪ್ರಕರಣ: ಫ್ರಾನ್ಸ್‌ನಲ್ಲಿ ನ್ಯಾಯಾಂಗ ತನಿಖೆ ಆರಂಭ!
Linkup
ಹೊಸದಿಲ್ಲಿ: ಬರೋಬ್ಬರಿ ₹59,000 ಕೋಟಿ ಮೊತ್ತದ ಭಾರತ- ನಡುವಿನ ರಫೇಲ್ ಜೆಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ಪಕ್ಷಪಾತದ ಆರೋಪ ಕುರಿತು ತನಿಖೆ ನಡೆಸಲು ಫ್ರಾನ್ಸ್ ಸರಕಾರ ನ್ಯಾಯಾಂಗ ತನಿಖೆಯನ್ನು ಆರಂಭಿಸಿದೆ. ತನಿಖೆಗೆ ಫ್ರೆಂಚ್‌ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಫ್ರೆಂಚ್ ಇನ್ವೆಸ್ಟಿಗೇಟೀವ್ ವೆಬ್ ಸೈಟ್ ಮೀಡಿಯಾಪಾರ್ಟ್ ವರದಿ ಮಾಡಿದೆ. ಫ್ರಾನ್ಸ್‌ನಲ್ಲಿ ನಡೆದಿರುವ ಈ ಮಹತ್ವದ ಬೆಳವಣಿಗೆ ಭಾರತ ಸರ್ಕಾರದ ವಿರುದ್ಧ ಮುಗುಬೀಳಲು ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರ ದೊರೆತಂತಾಗಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಜಂಟಿ ಸಂಸತ್ ಸಮಿತಿ (ಜೆಪಿಸಿ) ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. "ರಫೇಲ್‌ ಯುದ್ಧವಿಮಾನ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಈಗ ಸ್ಪಷ್ಟತೆ ದೊರೆತಿದೆ. ಫ್ರಾನ್ಸ್ ಸರ್ಕಾರ ತನಿಖೆಗೆ ಆದೇಶಿಸಿದ ಬಳಿಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ನಿಲುವನ್ನು ಸಮರ್ಥಿಸುತ್ತದೆ" ಎಂದು ಸುರ್ಜೇವಾಲ ಹೇಳಿದ್ದಾರೆ. ಆದರೆ ಈ ಕುರಿತು ಬಿಜೆಪಿಯಾಗಲೀ, ಭಾರತ ಸರ್ಕಾರವಾಗಲೀ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಜಂಟಿ ಸಂಸದೀಯ ಸಮಿತಿ ರಚನೆಗೆ ಕಾಂಗ್ರೆಸ್‌ ಆಗ್ರಹ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡಿದ ಬೆನ್ನಲ್ಲೇ ಇತ್ತ ಭಾರತದಲ್ಲೂ ಈ ಕುರಿತಂತೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತಂತೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ರಫೆಲ್ ಫೈಟರ್ ಜೆಟ್‌ಗಳ ಖರೀದಿಯಲ್ಲಿ "ಭ್ರಷ್ಟಾಚಾರ" ದ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆದೇಶಿಸಬೇಕು. ಇದು ಸತ್ಯಾಂಶ ಬಯಲಿಗೆಳೆಯಲು ಇರುವ ಏಕೈಕ ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮುಂದೆ ಬಂದು ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರವು ಈಗ ಸ್ಪಷ್ಟವಾಗಿ ಹೊರಬಂದಿದೆ. ಫ್ರೆಂಚ್ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ವಿಷಯವು ರಾಷ್ಟ್ರೀಯ ಭದ್ರತೆ ಮತ್ತು ಗುರುತಿನ ಬಗ್ಗೆ ವ್ಯವಹರಿಸುವುದರಿಂದ, ನ್ಯಾಯಯುತ ಮತ್ತು ಸ್ವತಂತ್ರ ಜೆಪಿಸಿ ತನಿಖೆ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದಾರೆ.