ಮಹಿಳೆಯರ ವಿವಾಹ ವಯಸ್ಸಿನ ಮಿತಿ ಏರಿಕೆ: 31 ಸದಸ್ಯರ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳೆ!

ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನು 18 ರಿಂದ 21ಕ್ಕೆ ಏರಿಸುವ ಬಾಲ್ಯ ವಿವಾಹ ಕಾಯ್ದೆ ತಿದ್ದುಪಡಿ ಮಸೂದೆಯ ಬಗ್ಗೆ ಪರಿಶೀಲನೆ ನಡೆಸುವ ಸಂಸದೀಯ ಸ್ಥಾಯಿ ಸಮಿತಿಯ 31 ಸದಸ್ಯರಲ್ಲಿ ಒಬ್ಬರು ಮಾತ್ರವೇ ಮಹಿಳಾ ಸಂಸದೆ ಇದ್ದಾರೆ.

ಮಹಿಳೆಯರ ವಿವಾಹ ವಯಸ್ಸಿನ ಮಿತಿ ಏರಿಕೆ: 31 ಸದಸ್ಯರ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳೆ!
Linkup
ಹೊಸದಿಲ್ಲಿ: ಮಹಿಳೆಯರಿಗೆ ಸಂಬಂಧಿಸಿದ ಮಹತ್ವದ ವಿಚಾರದ ಕುರಿತು ಚರ್ಚಿಸಲು ಮಹಿಳೆಯರಿಗೇ ಪ್ರಾತಿನಿಧ್ಯ ಇಲ್ಲದ ಸ್ಥಿತಿ ಮತ್ತೊಮ್ಮೆ ಬಯಲಾಗಿದೆ. ಮಹಿಳೆಯರ ಮದುವೆಯ ವಯಸ್ಸಿನ ಕನಿಷ್ಠ ಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ (ತಿದ್ದುಪಡಿ) ನಿಷೇಧ ಮಸೂದೆಯನ್ನು ಚಳಿಗಾಲದ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಸಚಿವೆ ಸ್ಮೃತಿ ಇರಾನಿ ಮಂಡಿಸಿದ್ದರು. ಬಳಿಕ ಅದನ್ನು 31 ಸದಸ್ಯರ ಸಮಿತಿಯ ಪರಿಶೀಲನೆಗೆ ರವಾನಿಸಲಾಗಿತ್ತು. ಬಿಜೆಪಿಯ ಹಿರಿಯ ಮುಖಂಡ ವಿನಯ್ ಸಹಸ್ರಬುದ್ಧೆ ಈ ಸಂಸದೀಯ ಸ್ಥಾಯಿ ಸಮಿತಿಯ ನೇತೃತ್ವ ವಹಿಸಿದ್ದಾರೆ. 31 ಮಂದಿ ಸದಸ್ಯರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಒಬ್ಬರೇ ಮಹಿಳೆಯಾಗಿದ್ದಾರೆ. 'ಈ ಸಮಿತಿಯಲ್ಲಿ ಇನ್ನಷ್ಟು ಮಹಿಳಾ ಸಂಸದೆಯರು ಇರಬೇಕು ಎಂದು ನಾನು ಬಯಸಿದ್ದೆ. ಆದರೆ ನಾವು ಎಲ್ಲ ಹಿತಾಸಕ್ತ ಗುಂಪುಗಳ ಅಭಿಪ್ರಾಯಗಳನ್ನು ಆಲಿಸುವಂತೆ ಮಾಡುತ್ತೇವೆ' ಎಂದು ಸುಷ್ಮಿತಾ ದೇವ್ ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷರು ಹೆಚ್ಚಿನ ಒಳಗೊಳ್ಳುವ ಹಾಗೂ ವ್ಯಾಪಕ ಚರ್ಚೆಯನ್ನು ನಡೆಸಲು ಇತರೆ ಮಹಿಳಾ ಸಂಸದರನ್ನು ಆಹ್ವಾನಿಸುವ ಅಧಿಕಾರ ಹೊಂದಿದ್ದಾರೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಮಸೂದೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಸಂಸದರು ಇದು ಹಲವು ವೈಯಕ್ತಿಕ ಕಾನೂನುಗಳ ಮೇಲಿನ ದಾಳಿ ಎಂದು ಆರೋಪಿಸಿದ್ದಾರೆ. ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ, ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯ್ದೆ, ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆ, ವಿಶೇಷ ವಿವಾಹ ಕಾಯ್ದೆ, ಹಿಂದೂ ಮತ್ತು ವಿದೇಶಿ ವಿವಾಹ ಕಾಯ್ದೆ- ಹೀಗೆ ಏಳು ವೈಯಕ್ತಿಕ ಕಾನೂನುಗಳಿಗೆ ಹಾನಿಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ನಮ್ಮ ದೇಶದ ಮಹಿಳೆಯರ ಸಮಾನತೆಯನ್ನು ಮದುವೆಯ ವಯಸ್ಸಿನಲ್ಲಿಯೂ ಕಾಣುವ ಅಗತ್ಯವಿದೆ. ವಿಭಿನ್ನ ನಂಬಿಕೆಗಳ ಮದುವೆ ಕಾನೂನುಗಳನ್ನು ಬದಲಿಸುವ ನಿಟ್ಟಿನಲ್ಲಿ ನಾನು ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದೇನೆ. ಈ ತಿದ್ದುಪಡಿಯು ಮಹಿಳೆಯರು ಮತ್ತು ಪುರುಷರು ಇಬ್ಬರೂ 21 ವರ್ಷಕ್ಕೆ ಬಂದಾಗ ಮದುವೆಯಾಗಲು ಸಮಾನ ಅವಕಾಶ ನೀಡಲಿದೆ. 2.1 ಮಿಲಿಯನ್ ಬಾಲ್ಯ ವಿವಾಹಗಳನ್ನು ನಿಲ್ಲಿಸಬೇಕಾಗಿತ್ತು ಮತ್ತು ಅನೇಕ ಅಪ್ರಾಪ್ತ ವಯಸ್ಕ ಮಕ್ಕಳು ಗರ್ಭಿಣಿಯಾಗಿರುವುದನ್ನು ನಮ್ಮ ಅಧ್ಯಯನಗಳು ಬಹಿರಂಗಪಡಿಸಿದೆ. ಹೀಗಾಗಿ ನೀವು ಸಮಾನತೆಯ ಹಕ್ಕನ್ನು ತಡೆಯುತ್ತಿದ್ದೀರಿ' ಎಂದು ಸ್ಮೃತಿ ಇರಾನಿ ಹೇಳಿದ್ದರು.