ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (NCB) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಮಂಗಳವಾರದೊಳಗೆ (ನ.9) ಅಫಿಡವಿಟ್ ಸಲ್ಲಿಸುವಂತೆ ಮಲಿಕ್ ಅವರಿಗೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ರಜಾಕಾಲದ ಪೀಠವು ಸೋಮವಾರ ಸೂಚನೆ ನೀಡಿದೆ. ಬುಧವಾರದಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದೆ.
ನವಾಬ್ ಮಲಿಕ್ ಅವರೇ ನೀವು ನಾಳೆಯೊಳಗೆ ನಿಮ್ಮ ಉತ್ತರವನ್ನು ಸಲ್ಲಿಸುತ್ತೀರಿ. ನೀವು ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಬಹುದಾದರೆ, ಇಲ್ಲಿಯೂ ಸಹ ಉತ್ತರಿಸಬಹುದು ಎಂದು ನ್ಯಾಯಮೂರ್ತಿ ಜಾಮ್ದಾರ್ ಅವರು ಹೇಳಿದ್ದಾರೆ.
ಆದರೆ, ಮೊಕದ್ದಮೆ ಸಲ್ಲಿಸಿರುವ ಧ್ಯಾನದೇವ್ ವಾಂಖೆಡೆ ವಿರುದ್ಧ ಯಾವುದೇ ಹೆಚ್ಚಿನ ಹೇಳಿಕೆಗಳನ್ನು ನೀಡದಂತೆ ಮಲಿಕ್ ಅವರನ್ನು ನಿರ್ಬಂಧಿಸುವ ಯಾವುದೇ ಆದೇಶವನ್ನು ನ್ಯಾಯಾಲಯ ನೀಡಿಲ್ಲ.
ಧ್ಯಾನ್‌ದೇವ್ ವಾಂಖೆಡೆ ಪರ ವಾದ ಮಂಡಿಸಿದ ವಕೀಲ ಅರ್ಷದ್ ಶೇಖ್, ಪ್ರತಿವಾದಿ ಮಲಿಕ್ ಪ್ರತಿದಿನ ಕೆಲವು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಮಾನಹಾನಿಕರವಾದ ಕಾಮೆಂಟ್‌ಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸೋಮವಾರ ಬೆಳಗ್ಗೆ ಪ್ರತಿವಾದಿಯು ಸಮೀರ್ ವಾಂಖೆಡೆ ಅವರ ಅತ್ತಿಗೆಯ ಬಗ್ಗೆ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ ಎಂದು ಶೇಖ್ ವಾದಿಸಿದರು. ಕನಿಷ್ಠ ವಿಷಯದ ವಿಚಾರಣೆಯ ತನಕ ನ್ಯಾಯಾಲಯವು ಮಲಿಕ್ ಅವರಿಗೆ ನಿರ್ದೇಶನ ನೀಡಬೇಕು ಅಥವಾ ಅವರು ಯಾವುದೇ ಹೆಚ್ಚಿನ ಹೇಳಿಕೆಗಳನ್ನು ನೀಡದಂತೆ ತಡೆಯಬೇಕು ಎಂದು ಶೇಖ್ ಮನವಿ ಮಾಡಿದ್ದಾರೆ.
ಮಲಿಕ್ ಪರ ವಾದಿಸಿದ ವಕೀಲ ಅತುಲ್ ದಾಮ್ಲೆ, ಮೊಕದ್ದಮೆಗೆ ಅಫಿಡವಿಟ್ ಸಲ್ಲಿಸಲು ಸಮಯ ಕೋರಿದಾಗ, ದೂರುದಾರ ತನ್ನ ಮಕ್ಕಳ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಮತ್ತು ಇತರ ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ್ದನ್ನು ಮಲಿಕ್‌ಗೆ ಆರೋಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ತನ್ನ ಮಗ ಸಮೀರ್ ವಾಂಖೆಡೆ ಮತ್ತು ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಧ್ಯಾನದೇವ್ ವಾಂಖೆಡೆ ಅವರು ತಮ್ಮ ಮೊಕದ್ದಮೆಯಲ್ಲಿ ಮಲಿಕ್‌ನಿಂದ ₹1.25 ಕೋಟಿ ರೂಪಾಯಿಗಳ ನಷ್ಟವನ್ನು ಕೋರಿದ್ದಾರೆ. ಮಲಿಕ್ ಅವರ ಹೇಳಿಕೆಗಳು ಮಾನಹಾನಿಕರವೆಂದು ಘೋಷಿಸುವ ಆದೇಶವನ್ನು ಮತ್ತು ಎನ್‌ಸಿಪಿ ನಾಯಕ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಒಳಗೊಂಡಂತೆ ಮಾಧ್ಯಮಗಳ ಮುಂದೆ ಪ್ರಕಟಣೆ ಅಥವಾ ಹೇಳಿಕೆಗಳನ್ನು ನೀಡದಂತೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಮೊಕದ್ದಮೆ ಕೋರಿದೆ.
ವಾಂಖೆಡೆ ಮುಸ್ಲಿಂ ಎಂಬ ಮಲಿಕ್ ಹೇಳಿಕೆಗಳು ಅವರು ಹಿಂದೂಗಳಲ್ಲ ಎಂದು ವಿವಾದಿಸುವ ಮೂಲಕ ಕುಟುಂಬದ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವಂತಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಮಲಿಕ್ ಅವರ ಹೇಳಿಕೆಗಳು ವಾಂಖೆಡೆ ಮತ್ತು ಅವರ ಕುಟುಂಬದ ಹೆಸರು, ಪಾತ್ರ, ಖ್ಯಾತಿ ಮತ್ತು ಸಾಮಾಜಿಕ ವ್ಯಕ್ತಿತ್ವಕ್ಕೆ ಭರಿಸಲಾಗದ ನಷ್ಟ, ಹಾನಿ ಮತ್ತು ಪೂರ್ವಾಗ್ರಹವನ್ನು ಉಂಟುಮಾಡಿದೆ ಎಂದು ಅದು ಹೇಳಿದೆ.
ನವಾಬ್ ಮಲಿಕ್ ಅವರು ಇಲ್ಲಿಯವರೆಗೆ ಮಾಡಿದ ಎಲ್ಲಾ ಮಾನಹಾನಿಕರ ಹೇಳಿಕೆಗಳನ್ನು ಹಿಂಪಡೆಯಲು ಮತ್ತು ಫಿರ್ಯಾದಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ಅಳಿಸಲು ನಿರ್ದೇಶನ ನೀಡುವಂತೆ ಮೊದ್ದಮೆಯಲ್ಲಿ ಕೋರಲಾಗಿದೆ.
ಸಮೀರ್ ವಾಂಖೆಡೆ ಕಳೆದ ತಿಂಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದು, ಎನ್‌ಸಿಬಿ ಅವರು ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಐಷಾರಾಮಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ 19 ಮಂದಿಯನ್ನು ನಂತರ ಬಂಧಿಸಲಾಯಿತು.
ಮಲಿಕ್ ಕ್ರೂಸ್ ಡ್ರಗ್ಸ್ ಪ್ರಕರಣವನ್ನು “ನಕಲಿ” ಎಂದು ಪದೇ ಪದೇ ಕರೆದಿದ್ದಾರೆ ಮತ್ತು ಎನ್‌ಸಿಬಿ ಅಧಿಕಾರಿಯ ವಿರುದ್ಧ ಹಲವಾರು ಆರೋಪ ಹೊರಿಸಿದ್ದಾರೆ.
ಎನ್‌ಸಿಬಿ ತನಿಖಾಧಿಕಾರಿ ಮೂಲತಃ ಮುಸ್ಲಿಂ ಆಗಿದ್ದು, ಸರಕಾರಿ ಉದ್ಯೋಗ ಗಿಟ್ಟಿಸುವುದಕ್ಕಾಗಿಯೇ ತಾನು ಹಿಂದೂ ಎಂದು ಹೇಳಿಕೊಂಡು ಫೋರ್ಜರಿ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಎಸಗಿದ್ದಾರೆ. ಈ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ,'' ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ಇತ್ತೀಚೆಗೆ ಪುನರುಚ್ಚರಿಸಿದ್ದರು.