ಮುಂದಿನ ಸಲ ಕಾಂಗ್ರೆಸ್‌ ಮುಖ್ಯಮಂತ್ರಿ ಖಚಿತ..! 'ಮಹಾ' ಮೈತ್ರಿಕೂಟಕ್ಕೆ ಚೌಹಾಣ್ ಶಾಕ್..!

'ಕಾಂಗ್ರೆಸ್‌ ಮುಖ್ಯಮಂತ್ರಿ ಎಂಬುದರ ಅರ್ಥ ಮುಂದಿನ ಸಲ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗಳಿಸುವುದರೊಂದಿಗೆ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಲಿದೆ' - ಚರ್ಚೆ ಹುಟ್ಟಿಹಾಕಿದೆ ಪೃಥ್ವಿರಾಜ್ ಚೌಹಾಣ್ ಹೇಳಿಕೆ

ಮುಂದಿನ ಸಲ ಕಾಂಗ್ರೆಸ್‌ ಮುಖ್ಯಮಂತ್ರಿ ಖಚಿತ..! 'ಮಹಾ' ಮೈತ್ರಿಕೂಟಕ್ಕೆ ಚೌಹಾಣ್ ಶಾಕ್..!
Linkup
: 'ಮುಂದಿನ ಬಾರಿ ಮೈತ್ರಿಕೂಟ ಸರಕಾರವನ್ನು ಕಾಂಗ್ರೆಸ್‌ ಮುಖ್ಯಮಂತ್ರಿಯೇ ಮುನ್ನಡೆಸುತ್ತಾರೆ' ಎಂದು ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚೌಹಾಣ್‌ ಹೇಳುವುದರೊಂದಿಗೆ ಮಹಾರಾಷ್ಟ್ರದಲ್ಲಿನ ಮಹಾವಿಕಾಸ ಅಘಾಡಿ ಮೈತ್ರಿಕೂಟದಲ್ಲಿನ ಮುನಿಸು ತೀವ್ರಗೊಂಡಿರುವುದು ಸ್ಪಷ್ಟವಾಗಿದೆ. 'ಕಾಂಗ್ರೆಸ್‌ ಎಂಬುದರ ಅರ್ಥ ಮುಂದಿನ ಸಲ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗಳಿಸುವುದರೊಂದಿಗೆ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಲಿದೆ' ಎಂದು ಪಕ್ಷದ ಮುಖಂಡರ ಸಭೆಯಲ್ಲಿ ಚೌಹಾಣ್‌ ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಚ್‌. ಕೆ. ಪಾಟೀಲ್‌ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾನಾ ಪಟೋಳೆ ಅವರು ಪರೋಕ್ಷವಾಗಿ ಮೈತ್ರಿ ಕುರಿತು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಚವ್ಹಾಣ್‌ ಈ ಹೇಳಿಕೆ ನೀಡಿದ್ದಾರೆ. ಪಟೋಳೆ ಅವರಂತೂ, 'ಮೈತ್ರಿ ಐದು ವರ್ಷಕ್ಕೆ ಮಾತ್ರ ಸೀಮಿತ' ಎಂದು ಹೇಳಿದ್ದರು. ಮೂರು ಪಕ್ಷ ಮೂರು ಹಾದಿ: ಮೈತ್ರಿಕೂಟದ ಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಈಗಾಗಲೇ ಭಿನ್ನ ಹಾದಿ ಹಿಡಿದಿರುವುದು ಸಹ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿದ ಬಳಿಕ ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮತ್ತು ಬಿಜೆಪಿಯ ಶ್ರೇಷ್ಠ ನಾಯಕ' ಎಂದಿದ್ದರು. ಶಿವಸೇನೆ ಶಾಸಕ ಪ್ರದೀಪ್‌ ಸರ್‌ನಾಯಕ್‌ ಅವರು, 'ಕೇಂದ್ರೀಯ ತನಿಖಾ ಸಂಸ್ಥೆಗಳ ಕಾಟದಿಂದ ಶಿವಸೇನೆ ನಾಯಕರನ್ನು ಪಾರುಮಾಡಲು ಬಿಜೆಪಿ ಜತೆ ಕೈ ಜೋಡಿಸುವುದೇ ಸೂಕ್ತ' ಎಂದು ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ರಾಷ್ಟ್ರ ರಾಜಕಾರಣದತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ತೃತೀಯ ರಂಗ ರಚನೆ ಪ್ರಯತ್ನ ತೀವ್ರಗೊಳಿಸಿದ್ದಾರೆ. ಕಾಂಗ್ರೆಸ್‌ ಆರಂಭದಿಂದಲೂ ಈ ಮೈತ್ರಿಗೆ ಅಪಸ್ವರ ವ್ಯಕ್ತಪಡಿಸುತ್ತಲೇ ಬಂದಿದೆ. ಶಿವಸೇನೆ ನಾಯಕ ಸಂಜಯ್‌ ರಾವತ್‌ ಮಾತ್ರ, 'ಯಾವುದೇ ಮುನಿಸಿಲ್ಲ, ಮೈತ್ರಿ ಸುಭದ್ರವಾಗಿದೆ' ಎಂದೇ ಹೇಳುತ್ತಾ ಬಂದಿದ್ದಾರೆ.