ಕೆಸಿಆರ್ ಕಾಲಿಗೆ ನಮಸ್ಕರಿಸಿದ ಐಎಎಸ್ ಅಧಿಕಾರಿ: ಪರ-ವಿರೋಧ ಚರ್ಚೆಗೆ ಶಿಕಾರಿ!

ತೆಲಂಗಾಣದ ಸಿದ್ದಿಪೇಟ್ ಜಿಲ್ಲಾಧಿಕಾರಿ ವೆಂಕಟರಾಮ್ ರೆಡ್ಡಿ, ಸಾರ್ವಜನಿಕವಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕಾಲಿಗೆ ನಮಸ್ಕರಿಸಿ ಸುದ್ದಿಯಾಗಿದ್ದಾರೆ. ಜಿಲ್ಲಾಧಿಕಾರಿ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಕೆಸಿಆರ್ ಕಾಲಿಗೆ ನಮಸ್ಕರಿಸಿದ ಐಎಎಸ್ ಅಧಿಕಾರಿ: ಪರ-ವಿರೋಧ ಚರ್ಚೆಗೆ ಶಿಕಾರಿ!
Linkup
ಹೈದರಾಬಾದ್: ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿರುತ್ತದೆ. ಅದರಲ್ಲೂ ಐಐಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳ ಪ್ರತಿಯೊಂದು ನಡೆಯನ್ನೂ ಸಮಾಜ ಅತ್ಯಂತ ಹತ್ತಿರದಿಂದ ಗಮನಿಸುತ್ತಿರುತ್ತದೆ. ಸರ್ಕಾರಿ ಅಧಿಕಾರಿಗಳ ಹಾವಭಾವ, ಸಾರ್ವಜನಿಕವಾಗಿ ಅವರು ನಡೆದುಕೊಳ್ಳುವ ರೀತಿ, ಸರ್ಕಾರ ಮತ್ತು ರಾಜಕಾರಣಿಗಳೊಂದಿಗಿನ ಅವರ ಸಂಬಂಧ, ಹೀಗೆ ಎಲ್ಲವೂ ಈ ಸಮಾಜದ ಗಮನದಲ್ಲಿರುತ್ತದೆ. ಒಂದು ತಪ್ಪು ಹೆಜ್ಜೆ ಸಾರ್ವಜನಿಕರಿಂದ ಭಾರೀ ಟೀಕೆಗೆ ಗುರಿಯಾಗಬೇಕಾದ ಪ್ರಸಂಗವನ್ನು ತಂದೊಡ್ಡಬಹುದು. ಇದಕ್ಕೆ ಪುಷ್ಠಿ ಎಂಬಂತೆ ತೆಲಂಗಾಣದ ವೆಂಕಟರಾಮ್ ರೆಡ್ಡಿ, ಸಾರ್ವಜನಿಕವಾಗಿ ಮುಖ್ಯಮಂತ್ರಿ ಅವರ ಕಾಲಿಗೆ ನಮಸ್ಕರಿಸಿ ಸುದ್ದಿಯಾಗಿದ್ದಾರೆ. ಕೆಸಿಆರ್ ಸಿದ್ದಿಪೇಟ್‌ನಲ್ಲಿ ಜಿಲ್ಲಾಧಿಕಾರಿಗಳ ಸಂಕೀರ್ಣ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ, ಡಿಸಿ ವಿ. ರೆಡ್ಡಿ ಸಿಎಂ ಕಾಲಿಗೆ ನಮಸ್ಕರಿಸಿದ್ದಾರೆ. ತಮ್ಮ ಕಚೇರಿಗೆ ಮುಖ್ಯಮಂತ್ರಿ ಕೆಸಿಆರ್ ಆಗಮನವಾಗುತ್ತಿದ್ದಂತೇ ತಮ್ಮ ಕುರ್ಚಿಯಿಂದ ಮೇಲೆದ್ದ ಡಿಸಿ ರೆಡ್ಡಿ, ಸಿಎಂ ಕಾನ್ನು ಮುಟ್ಟಿ ನಮಸ್ಕರಿಸಿದರು. ಅಲ್ಲದೇ ಪಕ್ಕದಲ್ಲೇ ಇದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರ ಕಾಲಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು. ನಿನ್ನೆ(ಜೂನ್ 20-ಭಾನುವಾರ) ವಿಶ್ವ ಅಪ್ಪಂದಿರ ದಿನಾವಾಗಿದ್ದರಿಂದ ಹಾಗೂ ಹಿರಿಯರಿಗೆ ಗೌರವ ಕೊಡುವ ತೆಲಂಗಾಣದ ಸಂಸ್ಕೃತಿಯ ದ್ಯೋತಕವಾಗಿ ಮುಖ್ಯಮಂತ್ರಿ ಕೆಸಿಆರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾಗಿ ಜಿಲ್ಲಾಧಿಕಾರಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿ ಮುಖ್ಯಮಂತ್ರಿ ಅವರ ಕಾಲಿಗೆ ನಮಸ್ಕರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಜಿಲ್ಲಾಧಿಕಾರಿ ನಡೆಯನ್ನು ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಸಾರ್ವಜನಿಕ ಸೇವಾ ಅಧಿಕಾರಿ ಬಹಿರಂಗವಾಗಿ ಮುಖ್ಯಮಂತ್ರಿಗಳ ಕಾಲಿಗೆ ನಮಸ್ಕರಿಸಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿ ನಡೆಯನ್ನು ಪ್ರತಿಪಕ್ಷ ಬಿಜೆಪಿ ಕೂಡ ಟೀಕಿಸಿದ್ದು, ಜಿಲ್ಲಾಧಿಕಾರಿಯೊಬ್ಬರು ಬಹಿರಂಗವಾಗಿ ಮುಖ್ಯಮಂತ್ರಿಗಳ ಕಾಲಿಗೆ ನಮಸ್ಕರಿಸುವುದು ಸರಿಯಲ್ಲ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ವಕ್ತಾರ ಕೆ. ಕೃಷ್ಣಸಾಗರ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ದುಬಾರಿ ಎಸ್‌ಯುವಿ ಕಾರುಗಳನ್ನು ನೀಡಿರುವುದು ಮತ್ತು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿ ಕಾಲಿಗೆ ಬೀಳುವುದನ್ನು ನೋಡಿದರೆ ಸರ್ಕಾರ ಮತ್ತು ಅಧಿಕಾರಶಾಹಿ ನಡುವೆ ಒಪ್ಪಂದ ಏರ್ಪಟ್ಟಿರುವ ಅನುಮಾನ ಮೂಡದಿರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿ ವೆಂಕಟರಾಮ್ ರೆಡ್ಡಿ, ಹಿರಿಯರಿಗೆ ಗೌರವ ಕೊಡುವ ಉದ್ದೇಶದಿಂದ ಮಾತ್ರ ಮುಖ್ಯಮಂತ್ರಿಗಳ ಕಾಲಿಗೆ ನಮಸ್ಕರಿಸಿದ್ದೇನೆ ಹೊರತು ಬೇರೆ ಯಾವ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಯೊಬ್ಬರ ಈ ನಡೆ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವುದು ಸತ್ಯ.