ಮೇ 28ಕ್ಕೆ ಮಹತ್ವದ ಜಿಎಸ್‌ಟಿ ಕೌನ್ಸಿಲ್‌ ಸಭೆ; ತೆರಿಗೆ ವಿನಾಯಿತಿ, ಪರಿಹಾರ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿರುವಾಗಲೇ ಜಿಎಸ್‌ಟಿ ಕೌನ್ಸಿಲ್‌ ಸಭೆ ಕರೆಯಲಾಗಿದ್ದು, ಆರು ತಿಂಗಳಿಗೂ ಹೆಚ್ಚು ಕಾಲದ ನಂತರ ನಡೆಯುತ್ತಿರುವ ಜಿಎಸ್‌ಟಿ ಕೌನ್ಸಿಲ್‌ನ ಮೊದಲ ಸಭೆ ಇದಾಗಿದೆ.

ಮೇ 28ಕ್ಕೆ ಮಹತ್ವದ ಜಿಎಸ್‌ಟಿ ಕೌನ್ಸಿಲ್‌ ಸಭೆ; ತೆರಿಗೆ ವಿನಾಯಿತಿ, ಪರಿಹಾರ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ
Linkup
ಹೊಸದಿಲ್ಲಿ: ಮೇ 28 ರಂದು ಹಣಕಾಸು ಸಚಿವೆ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ನಲ್ಲಿ ಸಭೆ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ ಎಂದು ಹಣಕಾಸು ಸಚಿವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವಾಗಲೇ ಈ ಸಭೆ ನಡೆಯಲಿದೆ. ಇದು ಆರು ತಿಂಗಳಿಗೂ ಹೆಚ್ಚು ಸಮಯದ ನಂತರ ನಡೆಯುತ್ತಿರುವ ಮೊದಲ ಸಭೆಯಾಗಿದೆ. ರಾಜ್ಯ ಹಣಕಾಸು ಸಚಿವರ ಒತ್ತಾಯದ ಮೇರೆಗೆ ಈ ಸಭೆ ನಡೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ ಹಣಕಾಸು ಸಚಿವರು ಈ ಸಭೆಗಾಗಿ ಒತ್ತಾಯಿಸಿದ್ದರು. ಈ ವಾರದ ಆರಂಭದಲ್ಲಿ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದ ಬಂಗಾಳ ಹಣಕಾಸು ಸಚಿವ ಅಮಿತ್‌ ಮಿತ್ರಾ, 2021-22ರಲ್ಲಿ ರಾಜ್ಯಗಳಿಗೆ ಮೀಸಲಿಟ್ಟಿರುವ 1.56 ಲಕ್ಷ ಕೋಟಿ ರೂ. ಪರಿಹಾರದ ಹಣವನ್ನು ಹೆಚ್ಚಿಸುವ ನಿರ್ಣಾಯಕ ವಿಷಯದ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದರು. ಕೊರೊನಾ ಎರಡನೇ ಅಲೆಯನ್ನು ಪರಿಗಣಿಸದೆ 2021-22ರಲ್ಲಿ ಕೊರತೆಯ ಮೊತ್ತ 1,56,164 ಇರಲಿದೆ ಎಂದು ಕೇಂದ್ರ ಸರಕಾರ ಅಂದಾಜಿಸಿತ್ತು. “ಆದರೆ ಕೊರೊನಾ 2ನೇ ಅಲೆ, ಲಾಕ್‌ಡೌನ್‌ ಕಾರಣಕ್ಕೆ ಪರಿಹಾರದ ಮೊತ್ತ ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ,” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. 2020-21ರಲ್ಲಿ ಕೊರತೆಯನ್ನು ತುಂಬಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸರಕಾರ ಬೆನ್ನು ಬೆನ್ನುಗೆ 1.1 ಲಕ್ಷ ಕೋಟಿ ರೂ. ಸಾಲ ನೀಡಿತ್ತು. ಮಾರ್ಚ್‌ನಲ್ಲಿ ಸ್ವತಃ ಹಣಕಾಸು ಇಲಾಖೆಯೇ 2020-21ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 63,000 ಕೋಟಿ ರೂ. ಜಿಎಸ್‌ಟಿ ಪರಿಹಾರ ಬಾಕಿ ಇದೆ ಎಂದಿತ್ತು. ಇನ್ನು ಸಭೆ ಕರೆಯುವಂತೆ ಇನ್ನೋರ್ವ ಹಣಕಾಸು ಸಚಿವ ಪಂಜಾಬ್‌ನ ಮನ್‌ಪ್ರೀತ್‌ ಬಾದಲ್‌ ಕೂಡ ಒತ್ತಾಯಿಸಿದ್ದರು. ಕೋವಿಡ್‌-19 ಹಿನ್ನೆಲೆಯಲ್ಲಿ ಕೆಲವು ಬಹುಮುಖ್ಯ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದ್ದರು. ಹ್ಯಾಂಡ್‌ ಸ್ಯಾನಿಟೈಸರ್‌, ಫೇಸ್‌ ಮಾಸ್ಕ್‌, ಗ್ಲೌವ್ಸ್‌, ಪಿಪಿಇ ಕಿಟ್‌, ಉಷ್ಣಾಂಶ ಅಳೆಯುವ ಉಪಕರಣ, ಆಕ್ಸಿಮೀಟರ್‌ ಮತ್ತು ಇತರ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆಯಾಗಬೇಕಿದೆ ಎಂದಿದ್ದರು. ಈ ಹಿಂದೆ 2020ರ ಅಕ್ಟೋಬರ್‌ 5ರಂದು ಕೊನೆಯ ಬಾರಿಗೆ ಸಭೆ ನಡೆದಿತ್ತು.