ಭಾರತದಲ್ಲಿ ಕೊರೊನಾ ಮರಣ ಮೃದಂಗ: ನ್ಯೂಯಾರ್ಕ್‌ ಟೈಮ್ಸ್‌ ವರದಿ ಆಧಾರ ರಹಿತ: ಭಾರತ ಸರ್ಕಾರ ಸ್ಪಷ್ಟನೆ

ಭಾರತ ಮಾತ್ರವಲ್ಲ, ಅಮೆರಿಕದಿಂದ ಹಿಡಿದು ಚೀನಾವರೆಗೆ ಎಲ್ಲ ದೇಶಗಳೂ ತಮ್ಮ ತಮ್ಮ ದೇಶಗಳಲ್ಲಿ ಆದ ಕೊರೊನಾ ಸಾವಿನ ಬಗ್ಗೆ ವಾಸ್ತವ ಸಂಖ್ಯೆಯನ್ನು ಮುಚ್ಚಿಟ್ಟಿವೆ ಎಂಬ ಆರೋಪ ವ್ಯಾಪಕವಾಗಿದೆ.

ಭಾರತದಲ್ಲಿ ಕೊರೊನಾ ಮರಣ ಮೃದಂಗ: ನ್ಯೂಯಾರ್ಕ್‌ ಟೈಮ್ಸ್‌ ವರದಿ ಆಧಾರ ರಹಿತ: ಭಾರತ ಸರ್ಕಾರ ಸ್ಪಷ್ಟನೆ
Linkup
: ಭಾರತದ ಕೊರೊನಾ ಸಾವುಗಳ ಕುರಿತಾಗಿ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸರ್ಕಾರ ತಳ್ಳಿ ಹಾಕಿದೆ. ಈ ವರದಿಯು ಆಧಾರ ರಹಿತ ಹಾಗೂ ಸುಳ್ಳು ಎಂದು ಭಾರತ ಸರ್ಕಾರ ಹೇಳಿದೆ. ಭಾರತ ಸರ್ಕಾರ ಅಧಿಕೃತವಾಗಿ ಹೇಳುತ್ತಿರುವ ಪ್ರಮಾಣಕ್ಕಿಂತಲೂ ಅತಿ ಹೆಚ್ಚು ಸಾವುಗಳು ದೇಶದಲ್ಲಿ ಸಂಭವಿಸಿವೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿತ್ತು. ಭಾರತದಲ್ಲಿ ಕೊರೊನಾ ನಿರ್ವಹಣೆ ಸರಿಯಾಗಿ ಆಗಿಲ್ಲ ಅನ್ನೋದು ಪತ್ರಿಕೆಯ ವರದಿಯ ಸಾರವಾಗಿತ್ತು. ಭಾರತದಲ್ಲಿ ಕೊರೊನಾದಿಂದಾಗಿ 1.6 ಮಿಲಿಯನ್ (16 ಲಕ್ಷ) ಮಂದಿ ಜೀವ ಬಿಟ್ಟಿರಬಹುದು ಎಂದು ವರದಿ ಅಂದಾಜಿಸಿತ್ತು. ಆದ್ರೆ, ಸರ್ಕಾರಿ ದಾಖಲೆಗಳು 3.15 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಈ ಕುರಿತಾಗಿ ಭಾರತ ಸರ್ಕಾರದ ಕಡೆಯಿಂದ ಪ್ರತಿಕ್ರಿಯೆ ಹೊರಬಿದ್ದಿದ್ದು, ಪತ್ರಿಕೆಯ ಅಂದಾಜು ಲೆಕ್ಕಾಚಾರ ಸಾಕ್ಷ್ಯಾಧಾರ ರಹಿತವಾಗಿದೆ ಎಂದು ಹೇಳಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನೇ ಆಧಾರವಾಗಿ ಇಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿದ್ದ ವಿಚಾರವನ್ನೂ ಪ್ರಸ್ತಾಪಿಸಿದ್ದ ರಾಹುಲ್, ಭಾರತದಲ್ಲಿ ಕೊರೊನಾ ನಿರ್ವಹಣೆ ಕಳಪೆಯಾಗಿದೆ ಎಂದು ಹರಿಹಾಯ್ದಿದ್ದರು. ರಾಹುಲ್ ಅವರ ಆರೋಪವನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಹಾಗೆ ನೋಡಿದ್ರೆ ಭಾರತ ಮಾತ್ರವಲ್ಲ, ಅಮೆರಿಕದಿಂದ ಹಿಡಿದು ಚೀನಾವರೆಗೆ ಎಲ್ಲ ದೇಶಗಳೂ ತಮ್ಮ ತಮ್ಮ ದೇಶಗಳಲ್ಲಿ ಆದ ಕೊರೊನಾ ಸಾವಿನ ಬಗ್ಗೆ ವಾಸ್ತವ ಸಂಖ್ಯೆಯನ್ನು ಮುಚ್ಚಿಟ್ಟಿವೆ ಎಂಬ ಆರೋಪ ವ್ಯಾಪಕವಾಗಿದೆ.