ಬ್ಯಾಟರಿ ಚಾಲಿತ ಬೈಕ್‌ಗಳಿಗೆ ಬೇಡಿಕೆ: 2 ಗಂಟೆ ಚಾರ್ಜ್‌ಗೆ 60 ಕಿ.ಮೀ. ಸಂಚಾರ!

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಬಳಕೆದಾರರು ಇಂಧನದ ಬೆಲೆಯಿಂದ ಹೊರೆಯಿಂದ ತಪ್ಪಿಸಿಕೊಳ್ಳಲು ಬ್ಯಾಟರಿ ಚಾಲಿತ ಬೈಕ್‌ಗಳ ಮೊರೆ ಹೋಗುತ್ತಿದ್ದಾರೆ. ಕೇಂದ್ರ ಸರಕಾರ ಕೂಡ ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ಬ್ಯಾಟರಿ ಚಾಲಿತ ಬೈಕ್‌ಗಳಿಗೆ ಬೇಡಿಕೆ: 2 ಗಂಟೆ ಚಾರ್ಜ್‌ಗೆ 60 ಕಿ.ಮೀ. ಸಂಚಾರ!
Linkup
ರಾಯಚೂರು: ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಬಳಕೆದಾರರು ಇಂಧನದ ಬೆಲೆಯಿಂದ ಹೊರೆಯಿಂದ ತಪ್ಪಿಸಿಕೊಳ್ಳಲು ಬ್ಯಾಟರಿ ಚಾಲಿತ ಬೈಕ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ವಾಹನಗಳ ನೋಂದಣಿಗೆ ಸಂಬಂಧಿಸಿ ವಾಹನ ಖರೀದಿಸಿದವರು ತೋರುತ್ತಿರುವ ತಾತ್ಸಾರ, ವಾಹನಗಳ ಮಾಲೀಕರಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬಂದಿದೆ. ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬಳಸಿ ಚಲಿಸುವ ವಾಹನಗಳಿಂದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಏನಿದು ಸಮಸ್ಯೆ? ರಾಜ್ಯದಲ್ಲಿ ತೈಲ ಬೆಲೆ ಏರಿಕೆಯಿಂದ ವಾಹನ ಸವಾರರು ತತ್ತರಿಸಿದ್ದು, ಅಳೆದು ತೂಗಿ ತೈಲ ಬಳಸುವಂತಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್‌ ಬದಲು ಬ್ಯಾಟರಿ ಚಾಲಿತ ವಾಹನ ಬಳಕೆಗೆ ಜನತೆಯೂ ಆಸಕ್ತಿ ತೋರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿದ್ಯುತ್‌ ಮೂಲಕ ಚಾರ್ಜ್‌ ಮಾಡಿಕೊಂಡು ಬ್ಯಾಟರಿ ಮೂಲಕ ಓಡಿಸಬಹುದಾದ ವಾಹನಗಳ ನೋಂದಣಿಯ ವಿಚಾರದಲ್ಲಿ ವಾಹನ ಖರೀದಿದಾರರಿಗೆ ಮಾಹಿತಿಯಿಲ್ಲದಿರುವುದು ಈಗ ಬಯಲಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಕೇವಲ 60 ಸಾವಿರಕ್ಕೆ ದೊರೆಯುವ ವಿದ್ಯುತ್‌ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಒಮ್ಮೆ 2 ಗಂಟೆ ಬ್ಯಾಟರಿ ಚಾರ್ಜ್‌ ಮಾಡಿದರೆ ಬೈಕ್‌ ಗಳು ಸುಮಾರು 60 ಕಿಮೀ ವರೆಗೂ ಸಂಚರಿಸುವ ಶಕ್ತಿ ಪಡೆಯುತ್ತವೆ. ಹೀಗೆ ಕೈಗೆಟುಕುವ ದರದಲ್ಲಿ ದೊರೆಯುವ ಹಾಗೂ ಪೆಟ್ರೋಲ್‌ ಬೆಲೆಯ ಭಾರ ಹೊರುವ ಸಮಸ್ಯೆಯಿಲ್ಲದ ಬೈಕ್‌ ಗಳಿಗೆ ಎಲ್ಲೆಡೆ ಬೇಡಿಕೆ ಕುದುರಿದೆ. ಪರಿಣಾಮ ಎಲ್ಲೆಡೆ ಇಂಥ ವಾಹನ ಮಾರಾಟ ಮಾಡುವ ಮಳಿಗೆಗಳು ಆರಂಭಗೊಂಡಿವೆ. ಆದರೆ, ವಾಹನ ಖರೀದಿದಾರರು ಈ ವಾಹನ ಖರೀದಿ ನಂತರ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಮಾಹಿತಿಯಿಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಂಬುದು ಸಾರಿಗೆ ಇಲಾಖೆಯ ಅಸಮಾಧಾನ. ಸುರಕ್ಷಿತ ಕ್ರಮ: ವಿದ್ಯುತ್‌ ಚಾಲಿತ ಅಂದಾಜು 2 ಕಿಲೋ ವ್ಯಾಟ್‌ ಬ್ಯಾಟರಿ ಸಾಮರ್ಥ್ಯದ್ದಾಗಿದ್ದರೆ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಆರ್‌ಟಿಒ ಕಚೇರಿ ಪ್ರಕಾರ ಇಲ್ಲಿಯವರೆಗೆ ಕೇವಲ 310 ದ್ವಿಚಕ್ರ ವಾಹನಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮಾಡಿಕೊಳ್ಳದೇ ಅನೇಕರು ವಾಹನ ಬಳಕೆ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂಬ ಮಾತು ಅಧಿಕಾರಿಗಳಿಂದ ಕೇಳಿಬಂದಿದೆ. ಕಳೆದ 2018 ರಿಂದ ಕೇವಲ 310 ವಾಹನಗಳ ನೋಂದಣಿಯಾಗಿದ್ದು, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು, ನೋಂದಣಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ವಾಹನ ಖರೀದಿದಾರರು ಗೊಂದಲದಲ್ಲಿದ್ದಾರೆ. ಬ್ಯಾಟರಿ ಚಾಲಿತ ವಾಹನ ಎಂಬ ಕಾರಣಕ್ಕೆ ನೋಂದಣಿ ಅನವಶ್ಯಕ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದ್ದು, ಇದರಿಂದಾಗಿ ನೋಂದಣಿ ಮಾಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಸಾರಿಗೆ ಇಲಾಖೆಯಿಂದ ಗೊತ್ತಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಸರಾಂತ ಕಂಪನಿಗಳ ಇಂಥ ವಾಹನಗಳಿಗೆ ನೋಂದಣಿ ಅವಕಾಶವಿದೆ. ಆದರೆ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ಮಾರಾಟಕ್ಕಿರಿಸಿರುವ ಇಂಥ ವಾಹನಗಳನ್ನು ಖರೀದಿಸಿದರೆ ನೋಂದಣಿಗೂ ಅವಕಾಶವಿಲ್ಲದಂತಾಗಿದೆ. ಬೈಕ್‌ ಖರೀದಿದಾರರ ಪ್ರಕಾರ ವಾಹನಕ್ಕೆ ಚೇಸೀಸ್‌ ಸಂಖ್ಯೆಯೂ ಇಲ್ಲ, ಚಾಲನೆ ಮಾಡುವವರಿಗೆ ಚಾಲನಾ ಪರವಾನಗಿಯೂ ಇಲ್ಲ. ಕೇವಲ ಬ್ಯಾಟರಿ ಬಿಟ್ಟರೆ ಸಂಖ್ಯೆ ನೋಂದಾಯಿಸಿಕೊಳ್ಳಲು ಯಾವುದೇ ರೀತಿಯ ಅವಕಾಶವಿಲ್ಲದಿರುವುದೂ ತಾಂತ್ರಿಕ ತೊಡಕಿಗೆ ಕಾರಣವಾಗಿದೆ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಇಂಥ ನೋಂದಣಿಯಾಗದ ವಾಹನಗಳು ಅಪಘಾಕ್ಕೀಡಾದರೆ ಯಾವುದೇ ರೀತಿಯ ನಿಯಮಾನುಸಾರ ವಿಮೆ ಮತ್ತಿತರೆ ಸೌಲಭ್ಯಗಳೂ ವಾಹನಗಳ ಮಾಲಿಕರಿಗೆ ಸಿಗುವುದಿಲ್ಲ ಎಂಬ ವಾದವಿದೆ. ಹಾಗೆಯೇ ವಾಹನಗಳ ಮಾಲಿಕರಿಗೂ ಪರಿಹಾರ ಸಿಗದು ಎಂದು ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ. "2ಕಿಲೋ ವ್ಯಾಟ್‌ ಗಿಂತ ಕಡಿಮೆ ಸಾಮರ್ಥ್ಯದ ವಾಹನಗಳನ್ನು ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡುವುದಿಲ್ಲ. ಆದರೆ 2ಕಿಲೋ ವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ ಗಳ ನೋಂದಣಿ ಪವರ್‌ ರೇಟಿಂಗ್‌ ಆಧಾರದ ಮೇಲೆ ನೋಂದಣಿ ಮಾಡಿಸಬೇಕು. ಆದರೆ ಜಿಲ್ಲೆಯಲ್ಲಿ ನೋಂದಣಿ ಮಾಡಿಸಲು ವಾಹನಗಳ ಮಾಲಿಕರು ತಾತ್ಸಾರ ತೋರುತ್ತಿದ್ದಾರೆ." -ವಿಶಾಲ್‌, ಆರ್‌ಟಿಒ, ಸಾರಿಗೆ ಇಲಾಖೆ ರಾಯಚೂರು. "ಪೆಟ್ರೋಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಮೊರೆ ಹೋಗಿದ್ದು, ಸಾಕಷ್ಟು ವಾಹನಗಳು ನೋಂದಣಿ ಮಾಡಿಕೊಳ್ಳದಿರುವುದು ಗಮನದಲ್ಲಿದೆ. ನೋಂದಣಿ ಮಾಡಿಸಿಕೊಳ್ಳದವರ ತಪಾಸಣೆ ನಡೆಸಲಾಗುತ್ತದೆ." -ನಿಖಿಲ್‌ ಬಿ., ಎಸ್ಪಿ, ರಾಯಚೂರು.