ಬೆದರಿಕೆ ಹಾಕಿದ್ರಾ ನಿರ್ಮಾಪಕ ಸೂರಪ್ಪ ಬಾಬು? ವಿತರಕರಿಂದ ಗಂಭೀರ ಆರೋಪ!

ಕೋಟಿಗೊಬ್ಬ-3 ಬಿಡುಗಡೆ ವಿವಾದದ ಬಗ್ಗೆ ವಿತರಕರಾದ ಖಾಝಾಪೀರ್ ಮತ್ತು ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಎಂದು ಖಾಝಾಪೀರ್ ಮತ್ತು ಕುಮಾರ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಬೆದರಿಕೆ ಹಾಕಿದ್ರಾ ನಿರ್ಮಾಪಕ ಸೂರಪ್ಪ ಬಾಬು? ವಿತರಕರಿಂದ ಗಂಭೀರ ಆರೋಪ!
Linkup
‘ಕೋಟಿಗೊಬ್ಬ-3’ ಬಿಡುಗಡೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಅತ್ತ ‘’ಕೆಲವು ವಿತರಕರು ನನಗೆ ಮೋಸ ಮಾಡಿದ್ದಾರೆ. ‘ಕೋಟಿಗೊಬ್ಬ-3’ ಬಿಡುಗಡೆಗೆ ಅಡ್ಡಿ ಉಂಟು ಮಾಡಲು ಷಡ್ಯಂತ್ರ ನಡೆದಿದೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ’’ ಎಂದು ನಿರ್ಮಾಪಕ ತಿಳಿಸಿದ್ದಾರೆ. ಹಾಗೇ, ‘’ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ. ವಿತರಕರಿಂದ ನನಗೆ 7-10 ಕೋಟಿ ನಷ್ಟ ಉಂಟಾಗಿದೆ’’ ಎಂದಿದ್ದಾರೆ ಸೂರಪ್ಪ ಬಾಬು ಇನ್ನೂ ‘‘ಕೋಟಿಗೊಬ್ಬ-3’ ಚಿತ್ರಕ್ಕೆ ಭೂಮಿಕಾ ಥಿಯೇಟರ್ ಕೊಡಬೇಡಿ’’ ಎಂದು ಹಿರಿಯ ವಿತರಕರೊಬ್ಬರು ಫೋನ್ ಮಾಡಿದ್ದರು. ಆಡಿಯೋ ಕ್ಲಿಪ್ಪಿಂಗ್ಸ್ ಇದೆ. ಅದರೊಟ್ಟಿಗೆ ನಾವು ಬರ್ತೀವಿ’’ ಎಂದು ಕೂಡ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಹೀಗಿರುವಾಗಲೇ, ವಿತರಕರಾದ ಖಾಝಾಪೀರ್ ಮತ್ತು ಕುಮಾರ್ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಎಂದು ಖಾಝಾಪೀರ್ ಮತ್ತು ಕುಮಾರ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ವಿತರಣೆ ಮಾಡಲು ಸೂರಪ್ಪ ಬಾಬುಗೆ ಖಾಝಾಪೀರ್ ಹಣ ನೀಡಿದ್ದರು. ಬಳಿಕ ಹಣವನ್ನು ವಾಪಸ್ ಮಾಡದೆ, ಚಿತ್ರವನ್ನೂ ನೀಡದೆ ಸೂರಪ್ಪ ಬಾಬು ಧಮ್ಕಿ ಹಾಕಿದ್ದಾರೆ ಎಂದು ಖಾಝಾಪೀರ್ ಆರೋಪ ಮಾಡಿದ್ದಾರೆ. ವಿತರಕರು ಹೇಳಿದ್ದೇನು? ‘’ನಮಗೆ ಬೆದರಿಕೆ ಹಾಕಿ, ಧಮ್ಕಿ ಹಾಕಿದ್ದಾರೆ. ತುಂಬಾ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ, ನನ್ನ ಕುಟುಂಬಕ್ಕೆ ಏನಾದರೂ ಪ್ರಾಬ್ಲಂ ಆದರೆ ಅದಕ್ಕೆ ‘ಕೋಟಿಗೊಬ್ಬ-3’ ನಿರ್ಮಾಪಕ ಬಾಬು ಅವರೇ ಕಾರಣ’’ ಎಂದು ವಿತರಕ ಖಾಝಾಪೀರ್ ಹೇಳಿದ್ದಾರೆ. ‘’ಸಿನಿಮಾ ಬಿಡುಗಡೆ ಒಂದು ದಿನ ಲೇಟ್ ಆಯ್ತು. ಕೆಲವು ಫೈನ್ಯಾನ್ಶಿಯರ್‌ಗಳು ದುಡ್ಡು ಕೊಡಲಿಲ್ಲ. ನಾವೂ ಈ ವಿಚಾರವನ್ನು ಸೂರಪ್ಪ ಬಾಬು ಅವರಿಗೆ ಹೇಳಿದ್ವಿ. ನಾನೂ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲೇ ಇರೋದು. ಕೆಲವು ಷಡ್ಯಂತ್ರ ಕೂಡ ನಡೆದಿದೆ. ಹೀಗಾಗಿ ನಮಗೆ ದುಡ್ಡು ಹೊಂದಿಸಲು ಆಗಲಿಲ್ಲ. ನಮಗೆ ಈ ಸಿನಿಮಾ ಬೇಡ, ದುಡ್ಡು ವಾಪಸ್ ಕೊಡಿ ಅಂತ ನಾವು ಕೇಳಿದ್ವಿ. ಅವರು ಕೊಡಲ್ಲ ಅಂದರು. ರಿಲೀಸ್ ಟೆನ್ಷನ್‌ನಲ್ಲಿ ಅವಾಚ್ಯ ಶಬ್ದಗಳಲ್ಲಿ ಬೈದರು, ಬೆದರಿಕೆ ಹಾಕಿದರು, ಧಮ್ಕಿ ಹಾಕಿದರು. ನಾವು ಸಿನಿಮಾಗೆ ತೊಂದರೆ ಕೊಟ್ಟಿಲ್ಲ. ನಮಗೆ ನಮ್ಮ ದುಡ್ಡು ಬರಬೇಕು. ನಮಗೆ ನ್ಯಾಯ ಕೊಡಿಸಿ’’ ಎಂದಿದ್ದಾರೆ ಓರ್ವ ವಿತರಕರು. ಕಾನೂನಿನ ಮೊರೆ ಹೋಗಲು ಸೂರಪ್ಪ ಬಾಬು ನಿರ್ಧಾರ ‘’ನಾನು ಹಾಗೂ ವಿತರಕರು ಒಪ್ಪಂದ ಮಾಡಿಕೊಂಡಿದ್ವಿ. ಒಪ್ಪಂದದ ಪ್ರಕಾರ, ಅವರು ನನಗೆ ಹಣ ಕೊಡಬೇಕಾಗಿತ್ತು. ಆ ಹಣವನ್ನು ಅವರು ನನಗೆ ಕೊಡಲಿಲ್ಲ. ಒಂದು ದಿನ ತಡವಾಗಿ ಚಿತ್ರ ಬಿಡುಗಡೆಯಾಗಿದ್ದಕ್ಕೆ ನನಗೆ 7-10 ಕೋಟಿವರೆಗೂ ನಷ್ಟ ಉಂಟಾಗಿದೆ. ಈ ಬಗ್ಗೆ ನಾನು ನನ್ನ ವಕೀಲರ ಬಳಿ ಚರ್ಚೆ ಮಾಡಿದ್ದೇನೆ. ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ. ಅವರೆಲ್ಲ ನನಗೆ ನಷ್ಟ ತುಂಬಿಕೊಡಬೇಕು. ಇಲ್ಲಾಂದ್ರೆ ಗ್ಯಾರಂಟಿ ನಾನು ಬಿಡಲ್ಲ. ಇನ್ಮುಂದೆ ಯಾವುದೇ ನಿರ್ಮಾಪಕರಿಗೆ ಈ ರೀತಿಯ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಕಾನೂನಿನ ಮೊರೆ ಹೋಗುತ್ತೇನೆ’’ ಎಂದು ಇಂದು ಸೂರಪ್ಪ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.