ಬೆಂಗಳೂರಿನಲ್ಲಿ ಸ್ವಿಗ್ಗಿ ಬಾಯ್ಸ್ ಸೋಗಿನಲ್ಲಿ ಮಾದಕ ವಸ್ತು ಪೂರೈಸುತ್ತಿದ್ದ 7 ಮಂದಿ ಬಂಧನ..!

ಎನ್‌ಸಿಬಿ ಅಧಿಕಾರಿಗಳನ್ನು ಕಂಡ ಕೂಡಲೇ ಮೂವರು ಆರೋಪಿಗಳು ಕಾರಿನಲ್ಲಿ ತೆರಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ತಮ್ಮ ವಾಹನದಲ್ಲಿ ಅವರನ್ನು ಬೆನ್ನಟ್ಟಿದ ಎನ್‌ಸಿಬಿ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸ್ವಿಗ್ಗಿ ಬಾಯ್ಸ್ ಸೋಗಿನಲ್ಲಿ ಮಾದಕ ವಸ್ತು ಪೂರೈಸುತ್ತಿದ್ದ 7 ಮಂದಿ ಬಂಧನ..!
Linkup
: ಹೊರ ರಾಜ್ಯಗಳಿಂದ ಮಾದಕ ವಸ್ತು ತರಿಸಿಕೊಂಡು ಆಹಾರ ಪೂರೈಸುವ ಸ್ವಿಗಿ ಫುಡ್‌ ಡೆಲಿವರಿ ಬಾಯ್ಸ್ ಸೋಗಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಬೃಹತ್‌ ಜಾಲವನ್ನು ಬೆಂಗಳೂರಿನ ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ವಿಭಾಗದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಭೇದಿಸಿದ್ದು, 7 ಡ್ರಗ್‌ ಪೆಡ್ಲರ್‌ಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಬಂಧಿತ 7 ಆರೋಪಿಗಳಿಂದ 5.20 ಲಕ್ಷ ರೂ., 140 ಕೆಜಿ ಹೈ ಗ್ರೇಡ್‌ ಗಾಂಜಾ, 2 ಕಾರುಗಳನ್ನು ಎನ್‌ಸಿಬಿ ಜಪ್ತಿ ಮಾಡಿದೆ. ಬಂಧಿತ ಆರೋಪಿಗಳು, ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳ ಕಣ್ಣು ತಪ್ಪಿಸಿ ನಗರದಲ್ಲಿ ಗಾಂಜಾ ಪೂರೈಕೆ ಮಾಡಲು ಹೊಸ ತಂತ್ರ ಹೆಣೆದಿದ್ದರು. 7 ಮಂದಿ ಬಂಧಿತರ ಪೈಕಿ ಕೆಲವರು ಸ್ವಿಗಿಯಲ್ಲಿ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದರು. ಈ ಜಾಲದಲ್ಲಿರುವ ಇತರರು ಗಾಂಜಾವನ್ನು ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಖರೀದಿಸಿ ಕಾರಿನಲ್ಲಿ ಕರ್ನಾಟಕಕ್ಕೆ ತಂದು ತಮ್ಮ ಮನೆಗಳಲ್ಲಿ ಸ್ಟಾಕ್‌ ಮಾಡುತ್ತಿದ್ದರು. ನಂತರ 10 ರಿಂದ 50 ಗ್ರಾಂ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬುತ್ತಿದ್ದರು. ತಮ್ಮದೇ ಗ್ರಾಹಕರನ್ನು ಹೊಂದಿದ್ದ ಆರೋಪಿಗಳು ಗಾಂಜಾಕ್ಕೆ ಆರ್ಡರ್‌ ಬಂದ ಕೂಡಲೇ ಸ್ವಿಗಿ ಆಹಾರ ಪೂರೈಕೆ ಮಾಡುವ ಸೋಗಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಂಶಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಸಿಬಿ ಇಂಟೆಲಿಜೆನ್ಸ್‌ನಿಂದ ಆರೋಪಿಗಳ ಸುಳಿವು: ಆರೋಪಿಗಳು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಾಗಿ ಮಾಡಿ 8 ಬಾಕ್ಸ್‌ಗಳಲ್ಲಿ ತುಂಬಿ ಸೆಪ್ಟೆಂಬರ್ 30ರಂದು ಬೇರೆಡೆ ಕೊಂಡೊಯ್ಯಲು ಯತ್ನಿಸುತ್ತಿದ್ದರು. ಈ ಬಗ್ಗೆ ಎನ್‌ಸಿಬಿ ಇಂಟಲಿಜೆನ್ಸ್‌ ಮೂಲಗಳಿಂದ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿದಾಗ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 137 ಕೆಜಿ ಗಾಂಜಾ ಜಪ್ತಿ ಮಾಡಲಾಗಿತ್ತು. ನಂತರ ಇವರು ಕೊಟ್ಟ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿರುವ ಇತರ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿದಾಗ ಡ್ರಗ್ಸ್‌ ಮಾರಾಟದಿಂದ ಸಂಪಾದಿಸಿದ್ದ 4.81 ಲಕ್ಷ ರೂ. ಪತ್ತೆಯಾಗಿತ್ತು. ಜತೆಗೆ ಡ್ರಗ್ಸ್‌ ಅನ್ನು ಪ್ಯಾಕ್‌ ಮಾಡಲು ಬಳಸುತ್ತಿದ್ದ ವಸ್ತುಗಳು ಕಂಡು ಬಂದಿದ್ದವು. ಅಲ್ಲದೆ, ಒಂದು ಮನೆಯಲ್ಲಿ ಓರ್ವ ಡೆಲಿವರಿ ಬಾಯ್‌, ಗ್ರಾಹಕನಿಗೆ ಡ್ರಗ್ಸ್‌ ಪೂರೈಕೆ ಮಾಡಲು ತಯಾರಾಗಿದ್ದ. ಅವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3 ಕೆಜಿ ಗಾಂಜಾ ಹಾಗೂ 39 ಸಾವಿರ ರೂ. ಎನ್‌ಸಿಬಿ ತಂಡ ಜಪ್ತಿ ಮಾಡಿದೆ. ಪೆಡ್ಲರ್‌ಗಳ ಕಾರು ಚೇಸ್‌ ಮಾಡಿ ಈ ಜಾಲದಲ್ಲಿ ಸಕ್ರಿಯವಾಗಿದ್ದ ಕೆಲವರನ್ನು ಸೆಪ್ಟೆಂಬರ್ 10ರಂದು ಹೈದರಾಬಾದ್‌ನಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಶಿವಮೊಗ್ಗ ಮೂಲದ ಇಬ್ಬರು ಪ್ರಮುಖ ಆರೋಪಿಗಳೊಂದಿಗೆ ಒಡನಾಟ ಹೊಂದಿರುವುದು ಗೊತ್ತಾಗಿತ್ತು. ಅದೇ ದಿನ ಶಿವಮೊಗ್ಗಕ್ಕೆ ತೆರಳಿದ ಎನ್‌ಸಿಬಿ ತಂಡ ತಡರಾತ್ರಿ ಆರೋಪಿಗಳನ್ನು ಪತ್ತೆ ಹಚ್ಚಿತ್ತು. ಎನ್‌ಸಿಬಿ ಅಧಿಕಾರಿಗಳನ್ನು ಕಂಡ ಕೂಡಲೇ ಮೂವರು ಆರೋಪಿಗಳು ಕಾರಿನಲ್ಲಿ ತೆರಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ತಮ್ಮ ವಾಹನದಲ್ಲಿ ಅವರನ್ನು ಬೆನ್ನಟ್ಟಿದ ಎನ್‌ಸಿಬಿ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರಗ್ಸ್‌ ಪೂರೈಸುತ್ತಿದ್ದ ಬೃಹತ್‌ ಜಾಲ ಟೆಕ್ಕಿಗಳು, ಹೈಎಂಡ್‌ ಪಾರ್ಟಿಗಳು, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನೂರಾರು ಗ್ರಾಹಕರಿಗೆ ಮಾದಕ ವಸ್ತು ಪೂರೈಕೆ ಮಾಡಲು ನಗರದ ಹೊರ ವಲಯದಲ್ಲಿ ಬೃಹತ್‌ ಡ್ರಗ್ಸ್‌ ಜಾಲ ಸೃಷ್ಟಿಯಾಗಿತ್ತು. ಇದರಿಂದ ನೂರಾರು ಗ್ರಾಹಕರಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಎನ್‌ಸಿಬಿ ಈ ಜಾಲವನ್ನು ಬೇಧಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದೆ. ಲಾಕ್‌ಡೌನ್‌ ವೇಳೆಯೂ ಆರೋಪಿಗಳು ನಿರಂತರವಾಗಿ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಸಂಗತಿ ಬಯಲಾಗಿದೆ.