ಬೆಂಗಳೂರಿನಲ್ಲಿ ಸ್ಟಾಕ್‌ ಎಕ್ಸ್‌ಚೇಂಜ್‌ ಹೆಸರಿನಲ್ಲಿ ವಂಚಿಸಿದ್ದ ಮೂವರ ವಿಚಾರಣೆ

ಶೇರುದಾರರ ಗಮನಕ್ಕೆ ಬಾರದ ರೀತಿಯಲ್ಲಿ ಅವರ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಕಾರ್ವಿ ಟ್ರೇಡಿಂಗ್‌ ಕಂಪನಿ ಸಾಲ ಪಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿಯ ಮುಖ್ಯ ಕಚೇರಿ ಹೈದರಾಬಾದ್‌ನಲ್ಲಿದ್ದರೆ, ಬೆಂಗಳೂರಲ್ಲೂ 10ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.

ಬೆಂಗಳೂರಿನಲ್ಲಿ ಸ್ಟಾಕ್‌ ಎಕ್ಸ್‌ಚೇಂಜ್‌ ಹೆಸರಿನಲ್ಲಿ ವಂಚಿಸಿದ್ದ ಮೂವರ ವಿಚಾರಣೆ
Linkup
: ಸ್ಟಾಕ್‌ ಎಕ್ಸ್‌ಚೇಂಜ್‌ ಹೆಸರಲ್ಲಿ ಹೂಡಿಕೆ ಮಾಡಿಸಿಕೊಂಡು ಸಾರ್ವಜನಿಕರಿಗೆ ನೂರಾರು ಕೋಟಿ ರೂ. ವಂಚಿಸಿದ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಕಾರ್ವಿ ಟ್ರೇಡಿಂಗ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿ ಮೂವರನ್ನು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಮಂಗಳವಾರ ಕಸ್ಟಡಿ ಅವಧಿ ಮುಗಿಯಲಿದೆ. ಹೈದರಾಬಾದ್‌ ಜೈಲಿನಲ್ಲಿದ್ದ ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿಯ ಎಂಡಿ ಪಾರ್ಥ ಸಾರಥಿ, ಸಿಇಒ ಕೃಷ್ಣ ಹರಿ ಸೇರಿ ಮೂವರನ್ನು ಬಾಡಿ ವಾರಂಟ್‌ ಮೇಲೆ ಸಿಸಿಬಿ ಪೊಲೀಸರು 13 ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಮಂಗಳವಾರ ಪೊಲೀಸ್‌ ಕಸ್ಟಡಿ ಅವಧಿ ಮುಗಿಯಲಿದೆ. ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ದೇಶಾದ್ಯಂತ ನೂರಾರು ಶಾಖೆಗಳನ್ನು ಹೊಂದಿದೆ. ಕಂಪನಿಯು ಸ್ಟಾಕ್‌ ಎಕ್ಸ್‌ಚೇಂಜ್‌ ಹೆಸರಲ್ಲಿ ಸಾವಿರಾರು ಜನರಿಂದ ನೂರಾರು ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿತ್ತು. ಈ ಸಂಬಂಧ ತೆಲಂಗಾಣ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಹೂಡಿಕೆ ಮಾಡಿದ್ದ ಶೇರುದಾರರ ಗಮನಕ್ಕೆ ಬಾರದ ರೀತಿಯಲ್ಲಿ ಅವರ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಕಾರ್ವಿ ಟ್ರೇಡಿಂಗ್‌ ಕಂಪನಿ ಸಾಲ ಪಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿಯ ಮುಖ್ಯ ಕಚೇರಿ ಹೈದರಾಬಾದ್‌ನಲ್ಲಿದ್ದರೆ, ಬೆಂಗಳೂರಲ್ಲೂ 10ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ದೇಶವ್ಯಾಪಿ 250ಕ್ಕೂ ಹೆಚ್ಚು ಶಾಖೆಗಳನ್ನು ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ಹೊಂದಿದೆ. ಹೈದರಾಬಾದ್‌ನ ಐಸಿಐಸಿಐ ಬ್ಯಾಂಕ್‌ಗೆ 563 ಕೋಟಿ, ಇಂಡಸ್‌ ಲ್ಯಾಂಡ್‌ ಬ್ಯಾಂಕ್‌ಗೆ 137 ಕೋಟಿ ರೂ. ಸೇರಿ 2 ಸಾವಿರ ಕೋಟಿಗೂ ಅಧಿಕ ಮಾಡಿರುವ ಆರೋಪ ಕಾರ್ವಿ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ವಿರುದ್ಧ ಕೇಳಿ ಬಂದಿತ್ತು. ಬೆಂಗಳೂರು ನಗರದ ಜನರಿಗೂ ಸುಮಾರು 200 ಕೋಟಿ ರೂ.ಗಳಿಗೂ ಅಧಿಕ ಮೊತ್ತ ವಂಚಿಸಿರುವ ಆರೋಪ ಕಂಪನಿ ವಿರುದ್ಧ ಕೇಳಿ ಬಂದಿತ್ತು. ತನಗೆ ವಂಚನೆಯಾಗಿರುವ ಸಂಬಂಧ ಬಳ್ಳಾರಿ ಮೂಲದ ಉದ್ಯಮಿ ಶೇಷಾದ್ರಿ ಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕಾರ್ವಿ ಟ್ರೇಡಿಂಗ್‌ ಕಂಪನಿಯ ಬೆಂಗಳೂರು ಶಾಖೆ ವ್ಯವಸ್ಥಾಪಕ ವಿಜಯೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಜಯೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, 250 ಕೋಟಿಗಿಂತ ಹೆಚ್ಚು ಹಣ ವಂಚನೆ ಮಾಡಿರುವುದನ್ನು ಪತ್ತೆ ಹಚ್ಚಿದ್ದರು. ಈ ಬಗ್ಗೆ ದೃಢೀಕರಿಸಿಕೊಳ್ಳಲು ನ್ಯಾಷನಲ್‌ ಸ್ಟಾಕ್‌ ಏಜೆನ್ಸಿಗೆ ಪತ್ರ ಬರೆಯಲಾಗಿದ್ದು, ಮಾಹಿತಿ ದೊರೆತ ಬಳಿಕವಷ್ಟೇ ಇದುವರೆಗೂ ಎಷ್ಟು ಜನರಿಗೆ ವಂಚನೆಯಾಗಿದೆ ಎಂಬುದು ತಿಳಿಯಲಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು. ಪ್ರಕರಣ ಸಿಐಡಿಗೆ ಪ್ರಕರಣದ ಆರೋಪಿಗಳ ವಿಚಾರಣೆಯಲ್ಲಿ ನೂರಾರು ಕೋಟಿ ರೂ. ವಂಚನೆ ಬಯಲಾಗಿದೆ. ಅಲ್ಲದೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಯ ಉದ್ಯಮಿಗಳು, ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚಿಸಿದ್ದಾರೆ. ಹೀಗಾಗಿ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಐಡಿ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲು ಸಿಸಿಬಿ ಮುಖ್ಯಸ್ಥರು ಚಿಂತಿಸಿದ್ದಾರೆ ಎಂದು ತಿಳಿದು ಬಂದಿದೆ.