ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ

'ಹೊರವರ್ತುಲ ರಸ್ತೆ ಯೋಜನೆಗೆ 2014ರಲ್ಲೇ ಪರಿಸರ ಇಲಾಖೆ ಅನುಮೋದನೆ ನೀಡಿತ್ತು. ಆದರೆ, ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಒಂದನೇ ಹಂತದ ಅರಣ್ಯ ಅನುಮೋದನೆ ಪರಿಗಣಿಸದೆ ಅನುಮತಿ ನೀಡಲಾಗಿದೆ ಎಂಬ ಕಾರಣಕ್ಕೆ ಎನ್‌ಜಿಟಿ ಪರಿಸರ ಅನುಮೋದನೆ ರದ್ದುಗೊಳಿಸಿತ್ತು.

ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ
Linkup
: ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶಿತ ಹೊರವರ್ತುಲ (ಪೆರಿಫೆರಲ್‌ ವರ್ತುಲ ರಸ್ತೆ - ಪಿಆರ್‌ಆರ್‌) ನಿರ್ಮಾಣ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌ನ ಕೆ. ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ' ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಪಿಆರ್‌ಆರ್‌ ಯೋಜನೆ ಕೈಗೊಳ್ಳುವುದನ್ನು ಕೈಬಿಟ್ಟು, ಸಂಪೂರ್ಣ ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ಮತ್ತು ಭೂಸ್ವಾಧೀನಕ್ಕೆ 15 ಸಾವಿರ ಕೋಟಿ ಅಗತ್ಯವಿದೆ. ಆದರೆ, ಒಂದೇ ಯೋಜನೆಗೆ 21 ಸಾವಿರ ಕೋಟಿ ರೂ. ವೆಚ್ಚ ಮಾಡುವ ಸ್ಥಿತಿಯಲ್ಲಿ ಸರಕಾರ ಇಲ್ಲ' ಎಂದು ಹೇಳಿದರು. 'ಹಾಗಾಗಿಯೇ, ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣಕ್ಕೆ ಹೂಡಿಕೆ ಮಾಡುವ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ಉದ್ದೇಶಿಸಲಾಗಿದೆ. ವಿನ್ಯಾಸ, ನಿರ್ಮಾಣ, ಹೂಡಿಕೆ, ನಿರ್ವಹಣೆ ಮತ್ತು ಹಸ್ತಾಂತರ (ಡಿಬಿಎಫ್‌ಒಟಿ) ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಚಿಂತಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆ ಮಾಡಿದ ಸಂಸ್ಥೆಗೆ 50 ವರ್ಷಗಳ ಅವಧಿಗೆ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡುವ ಪ್ರಸ್ತಾವ ಇದೆ' ಎಂದರು. 'ಪಿಆರ್‌ಆರ್‌ ಯೋಜನೆಗೆ ಆಹ್ವಾನಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಎರಡು ಸಂಸ್ಥೆಗಳು ಬಿಡ್‌ ಸಲ್ಲಿಸಿವೆ. ಪರಿಶೀಲನೆ ಮುಗಿದಿದ್ದು, ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. 2-4 ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಗುತ್ತಿಗೆ ಪಡೆದ ಖಾಸಗಿ ಕಂಪನಿಯೇ ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಡುವ ಮಾಲೀಕರಿಗೆ ಪರಿಹಾರದ ಮೊತ್ತ ಪಾವತಿಸಲಿದೆ. ಸರಕಾರದಿಂದಲೇ ಭೂಸ್ವಾಧೀನಪಡಿಸಿಕೊಂಡು ಕಂಪನಿಗೆ ಹಸ್ತಾಂತರಿಸಲಾಗುವುದು' ಎಂದು ತಿಳಿಸಿದರು. 'ಹೊರವರ್ತುಲ ರಸ್ತೆ ಭಾಗ-1ರ ನಿರ್ಮಾಣಕ್ಕೆ ಅಗತ್ಯವಿರುವ 1810.18 ಎಕರೆ ಜಮೀನು ಸ್ವಾಧೀನಕ್ಕೆ 2007ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆ ಬಳಿ ನೈಸ್‌ ರಸ್ತೆಗೆ ಪೆರಿಫೆರಲ್‌ ವರ್ತುಲ ರಸ್ತೆಯನ್ನು ಜೋಡಿಸುವುದು, ಟೋಲ್‌ ಪ್ಲಾಜಾ ನಿರ್ಮಾಣ, ಕೋವರ್‌ ಲೀಫ್‌, ಪೆಟ್ರೋನೆಟ್‌, ಸೀಗೆಹಳ್ಳಿ ಮಿಸ್ಸಿಂಗ್‌ ಲಿಂಕ್‌ ಸೇರಿದಂತೆ 7 ಉದ್ದೇಶಗಳಿಗೆ 589.13 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆಯನ್ನು ಸರಕಾರ ಪರಿಶೀಲಿಸುತ್ತಿದೆ' ಎಂದು ವಿವರಿಸಿದರು. ಪರಿಸರ ಅನುಮೋದನೆ ಬಾಕಿ: 'ಹೊರವರ್ತುಲ ರಸ್ತೆ ಯೋಜನೆಗೆ 2014ರಲ್ಲೇ ಪರಿಸರ ಇಲಾಖೆ ಅನುಮೋದನೆ ನೀಡಿತ್ತು. ಆದರೆ, ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಒಂದನೇ ಹಂತದ ಅರಣ್ಯ ಅನುಮೋದನೆ ಪರಿಗಣಿಸದೆ ಅನುಮತಿ ನೀಡಲಾಗಿದೆ ಎಂಬ ಕಾರಣಕ್ಕೆ ಎನ್‌ಜಿಟಿ ಪರಿಸರ ಅನುಮೋದನೆ ರದ್ದುಗೊಳಿಸಿತ್ತು. ಹಾಗಾಗಿ, ಹೊಸದಾಗಿ ಪರಿಸರ ಅನುಮೋದನೆ ಪಡೆಯುವಂತೆ ಸುಪ್ರೀಂಕೋರ್ಟ್‌ ಕೂಡ ಆದೇಶಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2020ರ ಆಗಸ್ಟ್ 18ರಂದು ನಡೆಸಿದ್ದ ಸಾರ್ವಜನಿಕ ಸಭೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಪುನಃ ವಿಚಾರಣೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಆಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಶೀಘ್ರದಲ್ಲೇ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ, ಜನರ ಅಭಿಪ್ರಾಯ ಸಂಗ್ರಹಿಸಬೇಕಿದೆ' ಎಂದು ಹೇಳಿದರು. '1ನೇ ಹಂತದ ಅರಣ್ಯ ಅನುಮೋದನೆ ಪಡೆಯಲು ಅರಣ್ಯ ಇಲಾಖೆಯ ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪರಿಸರ ಮಾಲಿನ್ಯ ಮತ್ತು ಅರಣ್ಯ ಇಲಾಖೆಗಳ ಅನುಮತಿ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಹೊರವರ್ತುಲ ರಸ್ತೆಯು 7 ಕೆರೆಗಳ ಅಂಚಿನಲ್ಲಿ ಹಾದು ಹೋಗುವುದರಿಂದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಜಲಕಾಯಗಳಿಗೆ ಹಾನಿಯಾಗುವುದನ್ನು ತಡೆಯಬೇಕಿದ್ದು, ಎತ್ತರಿಸಿದ ಮಾರ್ಗದಲ್ಲಿ ರಸ್ತೆ ನಿರ್ಮಿಸುವ ಕುರಿತು ಪರಿಶೀಲಿಸಲಾಗುತ್ತಿದೆ' ಎಂದು ತಿಳಿಸಿದರು. ಡೀಮ್ಡ್‌ ಅರಣ್ಯ ಬಳಕೆ: 'ಡೀಮ್ಡ್‌ ಅರಣ್ಯದ ವ್ಯಾಪ್ತಿಯಲ್ಲಿರುವ 9 ಲಕ್ಷ ಎಕರೆ ಕಂದಾಯ ಜಮೀನಿನಲ್ಲಿ 6 ಲಕ್ಷ ಎಕರೆಯನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಲಾಗುತ್ತಿದೆ. ಅದರಲ್ಲಿ ಒಂದು ಲಕ್ಷ ಎಕರೆಯನ್ನು ಸರಕಾರದ ಬಳಕೆಗೆ ಮೀಸಲಿಟ್ಟುಕೊಳ್ಳಲಾಗುವುದು. ಸರಕಾರಿ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಡೀಮ್ಡ್ ಅರಣ್ಯದ ಜಾಗವನ್ನು ಇಲಾಖೆಗೆ ಹಸ್ತಾಂತರಿಸಲಾಗುವುದು' ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.