ಈ ಬಾರಿ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಕೂರಿಸಲು ಅವಕಾಶ; ಬೆಂಗಳೂರು ಕಮಿಷನರ್‌ ಸ್ಪಷ್ಟನೆ

ಗೌರಿ ಗಣೇಶ ಹಬ್ಬ ಆಚರಣೆ ಅಂಗವಾಗಿ ನಗರದ ಗಲ್ಲಿ ಗಲ್ಲಿಯ ರಸ್ತೆಗಳಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ. ಕೊರೊನಾ ಸೋಂಕು ನೆರೆ ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿದ್ದು, ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಗಣೇಶ ಹಬ್ಬ ಆಚರಿಸಬೇಕು. ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಸಾರ್ವಜನಿಕರಲ್ಲಿ ಕಮಿಷನರ್ ಮನವಿ ಮಾಡಿದರು.

ಈ ಬಾರಿ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಕೂರಿಸಲು ಅವಕಾಶ; ಬೆಂಗಳೂರು ಕಮಿಷನರ್‌ ಸ್ಪಷ್ಟನೆ
Linkup
ಬೆಂಗಳೂರು: ಈ ಬಾರಿಯ ಗೌರಿ ಗಣೇಶ ಹಬ್ಬದಂದು ದೇವಸ್ಥಾನಗಳಲ್ಲಿ ಮಾತ್ರ ಗಣೇಶನ ಮೂರ್ತಿಗಳನ್ನು ಕೂರಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಹೇಳಿದರು. ಆಡುಗೋಡಿಯ ಸಿಎಆರ್‌ ಮೈದಾನದಲ್ಲಿ ನಡೆದ ‘ನಗರ ಪೊಲೀಸರಿಂದ ಆಯುಕ್ತರಿಗೆ ಗೌರವ ಸೇವಾ ಕವಾಯತು’ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆಚರಣೆ ಅಂಗವಾಗಿ ನಗರದ ಗಲ್ಲಿ ಗಲ್ಲಿಯ ರಸ್ತೆಗಳಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ. ಕೊರೊನಾ ಸೋಂಕು ನೆರೆ ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿದ್ದು, ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಗಣೇಶ ಹಬ್ಬ ಆಚರಿಸಬೇಕು. ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇನ್ನು ಆರು ದಿನಗಳಲ್ಲಿ ಗಣೇಶ ಹಬ್ಬದ ಸಂಭ್ರಮ ಪ್ರಾರಂಭವಾಗಲಿದೆ. ಪೊಲೀಸರು ಶಾಂತಿಯುತವಾಗಿ ಹಬ್ಬ ನಡೆಸಲು ಶ್ರಮಿಸಬೇಕು. ಗಣೇಶ ಹಬ್ಬಕ್ಕೆ ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿ ಒಟ್ಟಿಗೆ ಕೆಲಸ ಮಾಡುತ್ತವೆ. ಸರಕಾರದಿಂದ ಬರುವ ಆದೇಶದಂತೆ ಬಂದೋಬಸ್ತ್‌ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪಿಸಲು ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯಬೇಕು. ಸದ್ಯ ಸರಕಾರದ ಆದೇಶದ ಪ್ರಕಾರ ದೇವಸ್ಥಾನದಲ್ಲಿ ಮಾತ್ರ ಗಣೇಶ ಕೂರಿಸಲು ಅವಕಾಶವಿದೆ ಎಂದು ವಿವರಿಸಿದರು. ಪೊಲೀಸ್‌ ಇಲಾಖೆಯಲ್ಲಿ ಉತ್ಸಾಹ:ಪೊಲೀಸ್‌ ಇಲಾಖೆಯಲ್ಲಿರುವ ಉತ್ಸಾಹವನ್ನು ಬೇರೆ ಯಾವ ಇಲಾಖೆಯಲ್ಲೂ ನೋಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲೂ ಇದೇ ರೀತಿ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಕೊರೊನಾ ಎರಡನೇ ಅಲೆ ನಂತರ ಮೊದಲ ಬಾರಿ ಪರೇಡ್‌ ಮಾಡಲಾಗಿದೆ. ಕೊರೊನಾ ಸಮಯದಲ್ಲಿ ಪೊಲೀಸ್‌ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಲಾಕ್‌ಡೌನ್‌ ಜಾರಿಯಾದಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಕೊರೊನಾ ಸಮಯದಲ್ಲಿ ನಮ್ಮ ಕೆಲ ಸಿಬ್ಬಂದಿಗಳನ್ನು ಮಹಾಮಾರಿಯಿಂದ ನಾವು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಪೊಲೀಸ್‌ ಸಿಬ್ಬಂದಿಗೆ ಪ್ರಶಸ್ತಿ:ಕಾರ್ಯಕ್ರಮದಲ್ಲಿ ಕ್ಲಿಷ್ಟಕರ ಪ್ರಕರಣ ಭೇದಿಸಿದ್ದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕೂ ಅಧಿಕ ಅಂಕಗಳಿಸಿ ಉತ್ತೀರ್ಣರಾದ 25 ಪೊಲೀಸ್‌ ಸಿಬ್ಬಂದಿ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಿದರು. ಪರೇಡ್‌ನಲ್ಲಿ ಭಾಗವಹಿಸಿದ್ದ ಈಶಾನ್ಯ, ಕೇಂದ್ರ ವಿಭಾಗ ಪೊಲೀಸರು ಮತ್ತು ಡಾಗ್‌ ಸ್ಕ್ವಾಡ್‌ಗಳ ಪಥಸಂಚಲನ ಗಮನ ಸೆಳೆಯಿತು.