ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಸೋಮವಾರದಿಂದ ವಾಹನ ಪ್ರವೇಶ ಶುಲ್ಕ ಮರು ಜಾರಿ

ನಿಲ್ದಾಣದ ಮುಖ್ಯದ್ವಾರ ಮತ್ತು ಓಕಳಿಪುರಂ ಸಮೀಪದ ಪ್ರವೇಶ ದ್ವಾರದಲ್ಲಿ ವಾಹನ ಮಾಲೀಕರಿಂದ ಪ್ರವೇಶ ನಿಯಂತ್ರಣ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ತಿಂಗಳು 15 ಲಕ್ಷ ಶುಲ್ಕ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಸೋಮವಾರದಿಂದ ವಾಹನ ಪ್ರವೇಶ ಶುಲ್ಕ ಮರು ಜಾರಿ
Linkup
: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ವಾಹನಗಳ ಪ್ರವೇಶ ಶುಲ್ಕ ವಿಧಿಸುವ ಯೋಜನೆಯನ್ನು ಮರು ಜಾರಿಗೊಳಿಸಲು ಭಾರತಿಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ (ಐಆರ್‌ಎಸ್‌ಡಿಸಿ) ನಿರ್ಧರಿಸಿದೆ. ಆಗಸ್ಟ್‌ 1 ರಿಂದ ಯೋಜನೆ ಜಾರಿಗೆ ಬರಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಿರುವ ನಿಗಮ, ಮೊದಲ ಏಳು ನಿಮಿಷಗಳ ಪಿಕ್‌ ಆ್ಯಂಡ್‌ ಡ್ರಾಪ್‌ ಸೌಲಭ್ಯ ಉಚಿತವಾಗಿರಲಿದೆ ಎಂದು ತಿಳಿಸಿದೆ. ವಿಮಾನ ನಿಲ್ದಾಣದಲ್ಲಿ ಶುಲ್ಕ ವಿಧಿಸಿದಂತೆ ರೈಲ್ವೆ ನಿಲ್ದಾಣದಲ್ಲೂ ಪ್ರವೇಶ ನಿಯಂತ್ರಣ ಶುಲ್ಕ ವಿಧಿಸುವುದನ್ನು 2019ರಲ್ಲಿ ಪರಿಚಯಿಸಲಾಗಿತ್ತು. ಯೋಜನೆ ಕಾರ್ಯರೂಪಕ್ಕೆ ಬರುವ ಮುನ್ನವೇ ಕೋವಿಡ್‌ ಸಾಂಕ್ರಾಮಿಕ ರೋಗ ಹರಡಿದ್ದರಿಂದ ದೇಶಾದ್ಯಂತ ರೈಲ್ವೆ ಸೇವೆ ಸ್ಥಗಿತಗೊಳಸಲಾಗಿತ್ತು. ಹೀಗಾಗಿ ಈ ಯೋಜನೆಗೂ ತಾತ್ಕಾಲಿಕವಾಗಿ ತಡೆ ನೀಡಲಾಯಿತು. ಒಂದೂವರೆ ವರ್ಷಗಳ ನಂತರ ಪುನಃ ಯೋಜನೆ ಜಾರಿಗೆ ಬರಲಿದೆ. ನಿಲ್ದಾಣದ ಮುಖ್ಯದ್ವಾರ ಮತ್ತು ಓಕಳಿಪುರಂ ಸಮೀಪದ ಪ್ರವೇಶ ದ್ವಾರದಲ್ಲಿ ವಾಹನ ಮಾಲೀಕರಿಂದ ಪ್ರವೇಶ ನಿಯಂತ್ರಣ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ತಿಂಗಳು 15 ಲಕ್ಷ ಶುಲ್ಕ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 'ಕೆಎಸ್‌ಆರ್‌ ರೈಲ್ವೆ ನಿಲ್ದಾಣವನ್ನು ಐಆರ್‌ಎಸ್‌ಡಿಸಿ ನಿರ್ವಹಿಸುತ್ತದೆ. ರೈಲ್ವೆ ಕಾರ್ಯಾಚರಣೆಯನ್ನು ನೈರುತ್ಯ ರೈಲ್ವೆ ವಿಭಾಗ ನೋಡಿಕೊಳ್ಳುತ್ತದೆ. ಪ್ರವೇಶ ದ್ವಾರದಲ್ಲಿ ಸಂಚಾರ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ' ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ತಿಳಿಸಿದ್ದಾರೆ. ಶುಲ್ಕಗಳು ಹೀಗಿವೆ: - ಎಲ್ಲ ಮಾದರಿ ವಾಹನಗಳಿಗೆ ಮೊದಲ 7 ನಿಮಿಷಗಳ ಪಿಕ್‌-ಡ್ರಾಪ್‌ ಅಥವಾ ಆಗಮನ-ನಿರ್ಗಮನ ಉಚಿತ. - 7 ನಿಮಿಷದಿಂದ ಹೆಚ್ಚುವರಿ ಪ್ರತಿ 5 ನಿಮಿಷಕ್ಕೆ ನಾಲ್ಕು ಚಕ್ರದ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ 25 ರೂ. - 7 ನಿಮಿಷದಿಂದ ಹೆಚ್ಚುವರಿ ಪ್ರತಿ 5 ನಿಮಿಷಕ್ಕೆ ದ್ವಿಚಕ್ರ ವಾಹನಗಳಿಗೆ 15 ರೂ. 'ರೈಲ್ವೆ ನಿಲ್ದಾಣಕ್ಕೆ ಟ್ರಾಫಿಕ್‌ ಹರಿವು ಸುಗಮಗೊಳಿಸಲು, ನಿಲ್ದಾಣವನ್ನು ಹೆಚ್ಚು ಪಾದಚಾರಿ ಸ್ನೇಹಿಯನ್ನಾಗಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಪ್ರವೇಶ ನಿಯಂತ್ರಣ ಶುಲ್ಕ ಜಾರಿಗೊಳಿಸಲಾಗುತ್ತಿದೆ' ಎಂದು ಕೆಎಸ್‌ಆರ್‌ ನಿಲ್ದಾಣದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ.