ಬೆಂಗಳೂರು: ನೋ ಪಾರ್ಕಿಂಗ್‌ ಬೋರ್ಡ್‌ ಹಾಕದಿದ್ದರೂ ವಾಹನ ನಿಲ್ಲಿಸುವಂತೆ ಇಲ್ಲ; ಪೊಲೀಸರ ನಿರ್ಧಾರಕ್ಕೆ ವಿರೋಧ!

ಎಲ್ಲ ರಸ್ತೆಗಳಲ್ಲಿಯೂ ನೋ ಪಾರ್ಕಿಂಗ್‌ ಬೋರ್ಡ್‌ ಹಾಕಲು ಸಾಧ್ಯವಿಲ್ಲ. ಹಾಗಾಗಿ ಪಾರ್ಕಿಂಗ್‌ಗೆ ನಿಗದಿಪಡಿಸಿದ ರಸ್ತೆಗಳಲ್ಲಿ ಮಾತ್ರ ವಾಹನ ನಿಲ್ಲಿಸಬಹುದು. ಉಳಿದ ಸ್ಥಳಗಳಲ್ಲಿ ನಿಲ್ಲಿಸಿದರೆ ಟೋಯಿಂಗ್‌ ಮಾಡಲಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ರವಿಕಾಂತೇಗೌಡರು ಟ್ರಾಫಿಕ್‌ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ನೋ ಪಾರ್ಕಿಂಗ್‌ ಬೋರ್ಡ್‌ ಹಾಕದಿದ್ದರೂ ವಾಹನ ನಿಲ್ಲಿಸುವಂತೆ ಇಲ್ಲ; ಪೊಲೀಸರ ನಿರ್ಧಾರಕ್ಕೆ ವಿರೋಧ!
Linkup
ಬೆಂಗಳೂರು: ನಗರದ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡಬಹುದು ಎಂಬ ಫಲಕ ಹಾಕಿದ್ದರೆ ಮಾತ್ರ ವಾಹನ ನಿಲುಗಡೆ ಮಾಡಬಹುದು. ಬೋರ್ಡ್‌ ಇಲ್ಲದ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವಂತೆಯೇ ಇಲ್ಲ. ಒಂದು ವೇಳೆ ಅಂಥ ಕಡೆ ವಾಹನ ನಿಲ್ಲಿಸಿದರೆ ಟೋಯಿಂಗ್‌ ಸಿಬ್ಬಂದಿ ವಾಹನ ಎತ್ತಿಕೊಂಡು ಹೋಗುತ್ತಾರೆ. ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಅವರ ಹೇಳಿಕೆಗೆ ವಾಹನ ಸವಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಲ್ಲ ರಸ್ತೆಗಳಲ್ಲಿಯೂ ಹಾಕಲು ಸಾಧ್ಯವಿಲ್ಲ. ಹಾಗಾಗಿ ಪಾರ್ಕಿಂಗ್‌ಗೆ ನಿಗದಿಪಡಿಸಿದ ರಸ್ತೆಗಳಲ್ಲಿ ಮಾತ್ರ ವಾಹನ ನಿಲ್ಲಿಸಬಹುದು. ಉಳಿದ ಸ್ಥಳಗಳಲ್ಲಿ ನಿಲ್ಲಿಸಿದರೆ ಟೋಯಿಂಗ್‌ ಮಾಡಲಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ರವಿಕಾಂತೇಗೌಡರು ಸಮರ್ಥಿಸಿಕೊಂಡಿದ್ದಾರೆ. ''ನೋಪಾರ್ಕಿಂಗ್‌ ಬೋರ್ಡ್‌ ಹಾಕದಿದ್ದರೆ ವಾಹನ ಸವಾರರಿಗೆ ಹೇಗೆ ಗೊತ್ತಾಗುತ್ತದೆ? ನಗರದ ವಾಣಿಜ್ಯ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲ. ಬಹುತೇಕ ರಸ್ತೆಗಳು ಏಕಮುಖ ಮಾರ್ಗವಾಗಿದೆ. ಅಂಥ ರಸ್ತೆಗಳಲ್ಲಿ ಯಾರೂ ವಾಹನ ನಿಲ್ಲಿಸುವಂತೆ ಇಲ್ಲ. ಹಾಗೆಯೇ ಮಾರುಕಟ್ಟೆ, ಹೋಟೆಲ್‌, ಆಸ್ಪತ್ರೆ ಹಾಗೂ ಇತರೆ ವಾಣಿಜ್ಯ ಮಳಿಗೆಗಳು ಇರುವ ರಸ್ತೆಯಲ್ಲಿ ಪಾರ್ಕಿಂಗ್‌ಗೆ ಜಾಗ ನಿಗದಿಪಡಿಸಿಲ್ಲ. ಇಂಥ ರಸ್ತೆಗಳಲ್ಲಿ ಜನರು ಎಲ್ಲಿ ವಾಹನ ನಿಲ್ಲಿಸಬೇಕು? ಕನಿಷ್ಠ ಖಾಲಿ ಇರುವ ಜಾಗಗಳಲ್ಲಿ ವಾಹನ ನಿಲ್ಲಿಸಲು ಅವಕಾಶ ಇಲ್ಲ ಎಂದರೆ ಹೇಗೆ ? ಪಾರ್ಕಿಂಗ್‌ ಕಾಂಪ್ಲೆಕ್ಸ್‌ ಇದ್ದರೆ ಅಲ್ಲಿ ನಿಲ್ಲಿಸಿ ನಮ್ಮ ಕೆಲಸ ಮುಗಿಸಿಕೊಂಡು ಬಳಿಕ ಮುಂದೆ ಸಾಗಬಹುದು. ಆದರೆ ನಗರದಲ್ಲಿ ಪಾರ್ಕಿಂಗ್‌ಗೆ ಜಾಗವನ್ನೇ ನಿಗದಿ ಮಾಡದೆ ಅವೈಜ್ಞಾನಿಕ ನೋಪಾರ್ಕಿಂಗ್‌ ನಿಯಮ ಜಾರಿಗೊಳಿಸುವುದು ಎಷ್ಟು ಸರಿ?'' ಎಂದು ಸವಾರರು ಪ್ರಶ್ನೆ ಮಾಡಿದ್ದಾರೆ. ಸಾಮಾನ್ಯವಾಗಿ ವಾಹನ ಸವಾರರು ನೋಪಾರ್ಕಿಂಗ್‌ ಬೋರ್ಡ್‌ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ವಾಹನ ನಿಲ್ಲಿಸಿ ಹೋಗುತ್ತಾರೆ. ಆದರೆ ಬರುವಷ್ಟರಲ್ಲಿ ಟೋಯಿಂಗ್‌ ಸಿಬ್ಬಂದಿ ವಾಹನ ಎತ್ತಿಕೊಂಡು ಹೋಗಿರುತ್ತಾರೆ. ಸವಾರರ ಪ್ರಕಾರ ಅಲ್ಲಿ ಬೋರ್ಡ್‌ ಇಲ್ಲ. ಆದರೆ ಪೊಲೀಸರು ಹಾಗೂ ಟೋಯಿಂಗ್‌ ಸಿಬ್ಬಂದಿ ಪ್ರಕಾರ ಅದು ನೋಪಾರ್ಕಿಂಗ್‌ ರಸ್ತೆ. ಈ ಕುರಿತು ಸವಾರರು ಹಾಗೂ ಪೊಲೀಸರ ನಡುವೆ ವಾದ-ವಿವಾದ ನಡೆಯುತ್ತಿದೆ. ಈಗ ಸಂಚಾರ ಜಂಟಿ ಪೊಲೀಸ್‌ ಆಯುಕ್ತರು ಹೊಸ ನಿಯಮ ಜಾರಿಗೊಳಿಸಿರುವುದು ಭಾರಿ ಆಕ್ಷೇಪಕ್ಕೆ ಕಾರಣವಾಗಿದೆ. ವಿಕ ಕರೆ!ನೋಪಾರ್ಕಿಂಗ್‌ ಬೋರ್ಡ್‌ ಇಲ್ಲದ ರಸ್ತೆಗಳಲ್ಲಿ ವಾಹನ ನಿಲ್ಲಿಸುವಂತಿಲ್ಲಎಂದು ಸಂಚಾರ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಇದು ಅವೈಜ್ಞಾನಿಕ ನಿಯಮ. ರಸ್ತೆಯಲ್ಲಿ ನೋಪಾರ್ಕಿಂಗ್‌ ಬೋರ್ಡ್‌ ಹಾಕಬೇಕು. ಬೋರ್ಡ್‌ ಇಲ್ಲದ ಕಡೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಸವಾರರು ಸಲಹೆ ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಸಂಕ್ಷಿಪ್ತವಾಗಿ ಬರೆದು ನಮಗೆ ಕಳುಹಿಸಿ. ಆಯ್ದ ಬರಹಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಕಳುಹಿಸಬೇಕಾದ ವಾಟ್ಸ್‌ಅಪ್‌ ಸಂಖ್ಯೆ: 9481444540