ಕಟ್ಟಡ ಧರೆಗುರುಳುತ್ತಿದ್ದರೂ ಎದ್ದೇಳದ ಬಿಬಿಎಂಪಿ; 178 ಕಟ್ಟಡಗಳ ತೆರವು ನಡೆಸದೆ ನಿರ್ಲಕ್ಷ್ಯ!

ನಗರದಲ್ಲಿ ಈ ಹಿಂದೆ ಶಿಥಿಲ ಕಟ್ಟಡಗಳು ಕುಸಿದಾಗ ಬಿಬಿಎಂಪಿಯು ಎಲ್ಲೆಡೆ ಸಮೀಕ್ಷೆ ನಡೆಸಿ, ಶಿಥಿಲಾವಸ್ಥೆಯಲ್ಲಿರುವ 178 ಕಟ್ಟಡಗಳನ್ನು ಗುರುತಿಸಿತು. ಆನಂತರ ಯಾವುದೇ ಕ್ರಮ ತೆಗೆದುಕೊಳ್ಳದೆ, ಶಿಥಿಲ ಕಟ್ಟಡಗಳನ್ನೂ ಕೆಡವದೆ ಬಿಬಿಎಂಪಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಕಟ್ಟಡ ಧರೆಗುರುಳುತ್ತಿದ್ದರೂ ಎದ್ದೇಳದ ಬಿಬಿಎಂಪಿ; 178 ಕಟ್ಟಡಗಳ ತೆರವು ನಡೆಸದೆ ನಿರ್ಲಕ್ಷ್ಯ!
Linkup
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ಶರವೇಗದಲ್ಲಿಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮಹಾನಗರದಲ್ಲಿ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿದ್ದು, ದುರಂತಗಳೂ ಮೇಲಿಂದ ಮೇಲೆ ಸಂಭವಿಸುತ್ತಲೇ ಇವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಷ್ಟೇ ಅಲ್ಲ; ನಿರ್ಮಾಣ ಹಂತದ ಕಟ್ಟಡಗಳೂ ಕುಸಿದು ಪ್ರಾಣಹಾನಿಗಳಾಗುತ್ತಿವೆ. ನಗರದಲ್ಲಿ ಈ ಹಿಂದೆ ಶಿಥಿಲ ಕಟ್ಟಡಗಳು ಕುಸಿದಾಗ ಬಿಬಿಎಂಪಿಯು ಎಲ್ಲೆಡೆ ಸಮೀಕ್ಷೆ ನಡೆಸಿ, ಶಿಥಿಲಾವಸ್ಥೆಯಲ್ಲಿರುವ 178 ಕಟ್ಟಡಗಳನ್ನು ಗುರುತಿಸಿತು. ಕೆಲ ಮಾಲೀಕರಿಗೆ ನೋಟಿಸ್‌ ಸಹ ಜಾರಿ ಮಾಡಲಾಯಿತು. ಕಟ್ಟಡವು ತೀರಾ ದುಸ್ಥಿತಿಯಲ್ಲಿದ್ದರೆ, ನೆಲಸಮಗೊಳಿಸಬೇಕು. ದುರಸ್ತಿ ಸಾಧ್ಯವಿರುವ ಕಟ್ಟಡಗಳನ್ನು ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಲಾಯಿತು. ಆನಂತರ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದೆ, ಶಿಥಿಲ ಕಟ್ಟಡಗಳನ್ನೂ ಕೆಡವದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದೀಗ ನಗರದಲ್ಲಿ ಒಂದರ ಹಿಂದೆ ಒಂದರಂತೆ ಕಟ್ಟಡಗಳು ಕುಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಮಾನದಂಡಗಳೇ ಇಲ್ಲ ಆಶ್ಚರ್ಯಕರ ಸಂಗತಿ ಎಂದರೆ, ಒಂದು ಕಟ್ಟಡದ ಬಾಳಿಕೆಯ ಗರಿಷ್ಠ ಅವಧಿಯನ್ನು ನಿರ್ಧರಿಸುವ ಯಾವುದೇ ಮಾನದಂಡಗಳು ಜಾರಿಯಲ್ಲಿಇಲ್ಲ. ಬಹುಮಹಡಿ ಕಟ್ಟಡಗಳು ಶಿಥಿಲಗೊಂಡರೆ, ಅವುಗಳನ್ನು ತೆರವುಗೊಳಿಸುವ ಬಗ್ಗೆ ಸೂಕ್ತ ನಿಯಮಗಳೇ ಇಲ್ಲಎನ್ನುತ್ತಾರೆ ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು. ಹೀಗಾಗಿಯೇ, ಶಿಥಿಲ ಕಟ್ಟಡಗಳು ಧರೆಗುರುಳುತ್ತಿದ್ದು, ಅಕ್ಕಪಕ್ಕದ ಕಟ್ಟಡಗಳೂ ಹಾನಿಗೊಳಗಾಗುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತೀಯ ಗುಣಮಟ್ಟದ ಸಂಹಿತೆ(ಐಎಸ್‌ ಕೋಡ್‌) ಜಾರಿಯಲ್ಲಿದೆ. ಸರಕಾರದಿಂದ ಮಾನ್ಯತೆ ಪಡೆದ ನಿರ್ಮಾಣ(ಸ್ಟ್ರಕ್ಚರಲ್‌) ಎಂಜಿನಿಯರ್‌ಗಳು ಕಟ್ಟಡಗಳನ್ನು ನಿರ್ಮಿಸುವಾಗ ಐಎಸ್‌ ಕೋಡ್‌ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಅವರು ನೀಡುವ ಪ್ರಮಾಣಪತ್ರದ ಆಧಾರದಲ್ಲೇ ಪಾಲಿಕೆಯು ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ವಿವರಿಸಿದರು. ಕಾಂಕ್ರೀಟ್‌ ಮತ್ತು ಕಬ್ಬಿಣದ ಗುಣಮಟ್ಟದ ಆಧಾರದಲ್ಲಿ ಕಟ್ಟಡದ ಆಯುಸ್ಸು ನಿರ್ಧಾರವಾಗುತ್ತದೆ. ಗೋಡೆಗೆ ನೀರು ತಾಗದಂತೆ, ಕಬ್ಬಿಣವು ತುಕ್ಕು ಹಿಡಿಯದಂತೆ ನಿರ್ವಹಣೆ ಮಾಡಬೇಕು. ಕಟ್ಟಡವನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ, ಅದರ ಆಯುಸ್ಸು ಜಾಸ್ತಿಯಾಗುತ್ತದೆ. ಆದರೆ, ಬಹುಮಹಡಿ ಕಟ್ಟಡಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆಯೇ ಎಂಬುದನ್ನು ದೃಢೀಕರಿಸಬೇಕೆಂಬ ನಿಯಮಗಳು ಇಲ್ಲ. ''ಮಣ್ಣಿನ ಸುರಕ್ಷಿತ ಧಾರಣಾ ಸಾಮರ್ಥ್ಯದ ಪರೀಕ್ಷೆ ಮಾಡದಿರುವುದು, ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್‌ ಮರಳು ಬಳಕೆ, ಪಾಯ ಹಾಕಿದ ಮೇಲೆ ಮೂಲ ವಿನ್ಯಾಸದಲ್ಲಿ ಮಾರ್ಪಾಡು ಮಾಡುವುದು, ನಿರ್ಮಾಣ ವೆಚ್ಚ ಕಡಿಮೆ ಮಾಡಲು ನಿಗದಿಗಿಂತ ಕಡಿಮೆ ಕಬ್ಬಿಣ ಬಳಕೆ, ಗುಣಮಟ್ಟದ ಸಿಮೆಂಟ್‌ ಬಳಸದಿರುವುದು ಕಟ್ಟಡ ಕ್ಷಮತೆ ಮೇಲೆ ಪರಿಣಾಮ ಬೀರುತ್ತವೆ'' ಎಂದು ಹೇಳಿದರು. ಕಟ್ಟಡ ದುರಂತ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲಬಹುತೇಕ ಕಟ್ಟಡ ದುರಂತ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ. ಆರೋಪಿಗಳಿಗೆ ಠಾಣೆಗಳಲ್ಲೇ ಜಾಮೀನು ಸಿಗುತ್ತದೆ. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾಗುತ್ತದೆ. ಕಟ್ಟಡ ದುರಂತ ಪ್ರಕರಣಗಳಲ್ಲಿ ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿರ್ಮಾಣ ಹಂತದ ಬಹುಮಹಡಿ ಕಟ್ಟಡಗಳು ಕುಸಿದಾಗ, ಇವುಗಳಲ್ಲಿ ಫ್ಲ್ಯಾಟ್‌ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‌ಐಆರ್‌ ದಾಖಲಾಗುತ್ತಿವೆ ಅಷ್ಟೇ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸಲಾಗಿತ್ತು. ಈ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮತ್ತೊಮ್ಮೆ ಶಿಥಿಲ ಕಟ್ಟಡಗಳ ಸರ್ವೆ ಕಾರ್ಯ ಕೈಗೊಳ್ಳುವುದು ಮತ್ತು ಇಂತಹ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಗೌರವ್‌ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ ಕಟ್ಟಡ ದುರಂತ ಪ್ರಕರಣಗಳು
  • 2018ರ ಜ.18: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಸಾವು.
  • 2018ರ ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಮೂವರು ಕಾರ್ಮಿಕರ ಸಾವು.
  • 2018ರ ಅ.24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಸಾವು.
  • 2018ರ ನ.10: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ವಸತಿ ಸಮುಚ್ಚಯ ಕುಸಿದು ಕಾರ್ಮಿಕನ ಸಾವು.
  • 2018ರ ಡಿ.6: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರ ಸಾವು.
  • 2018ರ ಡಿ.13: ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿನ ಹೋಲಿಸೋಲ್‌ ಕಂಪನಿಯ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರ ಸಾವು.
  • 2019ರ ಏ.5: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪಾರ್ಕಿಂಗ್‌ ಕಟ್ಟಡದ ಸೆಂಟ್ರಿಂಗ್‌ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, 12 ಮಂದಿಗೆ ಗಾಯ.
  • 2019ರ ಜೂ.17: ಲುಂಬಿನಿ ಗಾರ್ಡನ್‌ ಬಳಿಯ ಜೋಗಪ್ಪ ಲೇಔಟ್‌ನಲ್ಲಿನಿ ರ್ಮಾಣ ಹಂತದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸೆಂಟ್ರಿಂಗ್‌ ಕುಸಿದು ಇಬ್ಬರು ಎಂಜಿನಿಯರ್‌ಗಳು ಸೇರಿ ಮೂವರು ಸಾವು.
  • 2019ರ ಜು.10: ಪುಲಿಕೇಶಿನಗರ ಬಳಿಯ ಕಾಕ್ಸ್‌ಟೌನ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ತಳಮಹಡಿ ಕುಸಿದು ದಂಪತಿ ಸೇರಿ ಐದು ಮಂದಿ ದುರ್ಮರಣ.
  • 2020ರ ಫೆ.5: ಕೆಂಪಾಪುರ ಬಡಾವಣೆಯ ನಾರಾಯಣಪ್ಪ ಕಾಲೊನಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ.
  • 2020ರ ಜು.29: ಮೆಜೆಸ್ಟಿಕ್‌ ಸಮೀಪದ ಕಪಾಲಿ ಚಿತ್ರಮಂದಿರದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯುವ ವೇಳೆ ಪಕ್ಕದ ಎರಡು ಕಟ್ಟಡಗಳು ಧರೆಗುರುಳಿದವು. ಯಾವುದೇ ಅನಾಹುತ ಸಂಭವಿಸಲಿಲ್ಲ.